ಪೊನ್ನಂಪೇಟೆ, ನ. ೧೧: ಮಾದಕವ್ಯಸನ ದೇಶದ ಯುವಜನತೆಯನ್ನು ಕಾಡುತ್ತಿರುವ ಗಂಭೀರ ಸಮಸ್ಯೆಯಾಗಿದೆ ಎಂದು ಗೋಣಿಕೊಪ್ಪ ಪೊಲೀಸ್ ಠಾಣಾಧಿಕಾರಿ ಕಾಳೇಗೌಡ ಹೇಳಿದರು.
ಗೋಣಿಕೊಪ್ಪದ ಕಾವೇರಿ ಕಾಲೇಜಿನ ಎನ್ಎಸ್ಎಸ್ ಘಟಕ ಹಾಗೂ ಐಕ್ಯೂಎಸಿ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಮಾದಕ ವಸ್ತುಗಳ ದುರುಪಯೋಗದ ಕುರಿತು ಜಾಗೃತಿ ಕಾರ್ಯಕ್ರಮ ‘ನಶಾ ಮುಕ್ತ್ ಯುವ’ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಯುವಶಕ್ತಿಯೇ ದೇಶದ ಅಭಿವೃದ್ಧಿಯ ಪ್ರಮುಖ ಆಧಾರಸ್ತಂಭವಾಗಿದ್ದು, ಕುತೂಹಲ, ಮಾನಸಿಕ ಒತ್ತಡ, ಸ್ನೇಹಿತರ ಸಹವಾಸ ಹಾಗೂ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಯುವಜನತೆ ಮಾದಕ ವ್ಯಸನಕ್ಕೆ ಒಳಗಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ತಂಬಾಕು, ಮದ್ಯಪಾನ, ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸೇವನೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರ ಜೊತೆಗೆ ಭವಿಷ್ಯವನ್ನೂ ಹಾಳುಮಾಡುತ್ತದೆ ಎಂದರು.
ಈ ಪಿಡುಗನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರ್ಕಾರವು ೨೦೨೦ರ ಆಗಸ್ಟ್ ೧೫ರಂದು ‘ನಶಾ ಮುಕ್ತ ಭಾರತ ಅಭಿಯಾನ’ಕ್ಕೆ ಚಾಲನೆ ನೀಡಿದ್ದು, ದೇಶಾದ್ಯಂತ ಜಾಗೃತಿ ಮೂಡಿಸುತ್ತಿದೆ. ವ್ಯಸನಕ್ಕೆ ಒಳಗಾದ ಬಳಿಕ ಅದರಿಂದ ಹೊರಬರುವುದು ಸವಾಲಿನ ಕೆಲಸವಾಗಿರುವುದರಿಂದ ಮುನ್ನೆಚ್ಚರಿಕೆ ಮತ್ತು ಜಾಗೃತಿಗೆ ಹೆಚ್ಚಿನ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಕ್ರೀಡೆ, ಸಾಹಿತ್ಯ, ಕಲೆ ಹಾಗೂ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಮಾದಕ ವ್ಯಸನದ ವಿರುದ್ಧ ಸರ್ಕಾರದ ಜೊತೆಗೆ ಪೋಷಕರು, ಶಿಕ್ಷಕರು ಮತ್ತು ಸಂಘ-ಸAಸ್ಥೆಗಳೂ ಕೈಜೋಡಿಸಬೇಕು. ಪ್ರತಿಯೊಬ್ಬ ಯುವಕರೂ ವ್ಯಸನಮುಕ್ತ ಜೀವನದ ಸಂಕಲ್ಪ ಕೈಗೊಂಡಾಗ ಮಾತ್ರ ಆರೋಗ್ಯಕರ, ಸದೃಢ ಮತ್ತು ಸಮೃದ್ಧ ‘ನಶಾ ಮುಕ್ತ ಭಾರತ’ ನಿರ್ಮಾಣ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಂ.ಬಿ. ಕಾವೇರಿಯಪ್ಪ ಅವರು ಮಾತನಾಡಿ, ದೈಹಿಕ ಆರೋಗ್ಯಕ್ಕೆ ಹಾನಿ ಮಾಡುವುದಲ್ಲದೆ, ವೈಯಕ್ತಿಕ ಬದುಕು, ಸಮಾಜ ಮತ್ತು ಇಡೀ ದೇಶವನ್ನೇ ವಿನಾಶದತ್ತ ಕೊಂಡೊಯ್ಯುವ ನಶೆ ಹಾಗೂ ದುಶ್ಚಟಗಳಿಂದ ಪ್ರತಿಯೊಬ್ಬರೂ ದೂರವಿರಬೇಕು. ಕಾಲೇಜು ದಿನಗಳಲ್ಲಿ ಫ್ಯಾಷನ್ ಅಥವಾ ಟ್ರೆಂಡ್ ಹೆಸರಿನಲ್ಲಿ ಆರಂಭವಾಗುವ ಯಾವುದೇ ಕೆಟ್ಟ ಹವ್ಯಾಸಗಳಿಗೆ ಯುವಜನತೆ ಬಲಿಯಾಗಬಾರದು. ಇಂದೇ ಪಣತೊಟ್ಟು ಯಾರೂ ಕೂಡ ನಶೆಗೆ ದಾಸರಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡುವ ಮೂಲಕ ಉತ್ತಮ ನಾಗರಿಕರಾಗಿ ಸಮಾಜದ ಹಿತಕ್ಕಾಗಿ ಮುನ್ನಡೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕಿ ಡಾ. ನಯನ ತಮ್ಮಯ್ಯ, ಎನ್ಎಸ್ಎಸ್ ಅಧಿಕಾರಿಗಳಾದ ಕುಶಾಲಪ್ಪ ಎಂ.ಎ., ಪೂಜಾ ಕೆ.ಎಸ್., ಎನ್ಎಸ್ಎಸ್ ನಾಯಕರಾದ ಪಲ್ವಿನ್, ಕೃತಿ ಕಾವೇರಮ್ಮ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.