ಕುಶಾಲನಗರ, ನ. ೧೧: ಕುವೆಂಪು ಅವರು ಆಧುನಿಕ ಕನ್ನಡ ಸಾಹಿತ್ಯ ಲೋಕದ ದಿಗ್ಗಜರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅನನ್ಯ ಮತ್ತು ಹಿರಿದಾದುದು. ಅವರ ಸಾಹಿತ್ಯವು ವಿಶ್ವಮಾನವ ಸಂದೇಶ, ವೈಚಾರಿಕತೆ, ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಪರಿಸರ ಪ್ರಜ್ಞೆಯನ್ನು ಸಾರುತ್ತದೆ ಎಂದು ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಕನ್ನಡ ಅಧ್ಯಾಪಕಿ ಬಿ.ಬಿ ಹೇಮಲತಾ ಹೇಳಿದರು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕುಶಾಲನಗರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ದಿ. ಗಂಗಮ್ಮ ರಾಚಪ್ಪ ದತ್ತಿನಿಧಿ ಉಪನ್ಯಾಸ, ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳಿಗೆ ನಡೆದ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಹಾಗೂ ೭೧ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ‘ಕನ್ನಡ ಸಾಹಿತ್ಯಕ್ಕೆ ರಾಷ್ಟçಕವಿ ಕುವೆಂಪು ಅವರ ಸಾಹಿತ್ಯದ ಕೊಡುಗೆಗಳು’ ಕುರಿತು ಅವರು ಉಪನ್ಯಾಸ ನೀಡಿದರು. ಕುವೆಂಪು ಅವರು ಇಪ್ಪತ್ತನೆಯ ಶತಮಾನ ಕಂಡ ದೈತ್ಯ ಪ್ರತಿಭೆ. ‘ಯುಗದ ಕವಿ ಜಗದ ಕವಿ‘ ಎನಿಸಿಕೊಂಡವರು. “ಓ ನನ್ನ ಚೇತನ, ಆಗು ನೀ ಅನಿಕೇತನ” ಎಂಬ ತತ್ವದ ಮೂಲಕ ಮನುಜಮತ, ವಿಶ್ವಪಥದ ಪರಿಕಲ್ಪನೆಯನ್ನು ನೀಡಿದ್ದಾರೆ ಎಂದರು. ರಾಷ್ಟçಕವಿ ಕುವೆಂಪು ಅವರು ಕನ್ನಡ ಸಾಹಿತ್ಯ ಲೋಕದ ಪ್ರಕೃತಿ ಕವಿ ಮತ್ತು ರಸಕವಿ ಎಂದು ಪ್ರಸಿದ್ಧರಾಗಿದ್ದಾರೆ. ಇವರ ಸಾಹಿತ್ಯಕ್ಕೂ ಪ್ರಕೃತಿಗೂ ಇರುವ ಸಂಬAಧ ಅನನ್ಯವಾದುದು ಎಂದು ಹೇಮಲತಾ ಬಣ್ಣಿಸಿದರು.

ಕುವೆಂಪು ಅವರು ಜನಿಸಿ ಬೆಳೆದದ್ದು ಮಲೆನಾಡಿನ ಸೊಬಗಿನ ಕುಪ್ಪಳ್ಳಿಯಲ್ಲಿ. ಅಲ್ಲಿನ ದಟ್ಟ ಅರಣ್ಯ, ಮಳೆ, ಬೆಟ್ಟ-ಗುಡ್ಡಗಳು, ನದಿಗಳು ಮತ್ತು ಪಕ್ಷಿಗಳ ಚಿಲಿಪಿಲಿ ಸದ್ದು ಅವರ ಬಾಲ್ಯವನ್ನು ಆವರಿಸಿಕೊಂಡಿದ್ದವು. ಇದು ಅವರ ಕಾವ್ಯಕ್ಕೆ ಜೀವ ತುಂಬಿತು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ ಕೇಶವಕಾಮತ್ ಮಾತನಾಡಿ, ಕನ್ನಡ ನಾಡು- ನುಡಿ, ಕಲೆ ಮತ್ತು ಸಂಸ್ಕೃತಿಯು ಎರಡು ಸಾವಿರ ವರ್ಷಗಳಿಗೂ ಅಧಿಕ ಭವ್ಯ ಇತಿಹಾಸವನ್ನು ಹೊಂದಿದೆ. ಇದರ ಸಂರಕ್ಷಣೆ ಮತ್ತು ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು. ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಅಭ್ಯಾಸ ಮಾಡುವ ಮೂಲಕ ಕನ್ನಡ ಭಾಷೆ ಬೆಳವಣಿಗೆ ಜತೆಗೆ ತಮ್ಮ ಜ್ಞಾನ ಬೆಳೆಸಿಕೊಳ್ಳಬೇಕು ಎಂದರು. ಕನ್ನಡ ದತ್ತಿ ಉಪನ್ಯಾಸ ಕಾರ್ಯಕ್ರಮಗಳು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಸಾಮಾಜಿಕ ಮೌಲ್ಯಗಳನ್ನು ಜನರಿಗೆ ತಲುಪಿಸಲು ಹಾಗೂ ಹಿರಿಯ ಚೇತನಗಳನ್ನು ಸ್ಮರಿಸಲು ನಡೆಸುವ ವಿಶೇಷ ಸಾಹಿತ್ಯಿಕ ಕಾರ್ಯಕ್ರಮಗಳಾಗಿವೆ ಎಂದು ಕೇಶವ ಕಾಮತ್ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎಸ್.ಎನ್ ರಾಜೇಂದ್ರ ಮಾತನಾಡಿ, ಕನ್ನಡ ಭಾಷೆ, ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬ ಕನ್ನಡಿಗರ ಜವಾಬ್ದಾರಿಯಾಗಿದೆ ಎಂದರು. ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದ ಅಧ್ಯಕ್ಷ ಟಿ.ಜಿ ಪ್ರೇಮಕುಮಾರ್ ಮತ್ತು ಪ್ರಬಂಧ ಸ್ಪರ್ಧೆಯಲ್ಲಿ ವಿಜೇತಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಕಾಲೇಜಿನ ಪ್ರಾಂಶುಪಾಲರಾದ ಬಿ.ಜಿ ಶಾಂತಿ ಮಾತನಾಡಿದರು.

ದತ್ತಿ ಉಪನ್ಯಾಸದ ದಾನಿಯೂ ಆದ ಶಿಕ್ಷಕಿ ಸ್ನೇಹ ಬಸಮ್ಮ, ರಾಜ್ಯಶಾಸ್ತç ಉಪನ್ಯಾಸಕ ಟಿ.ಡಿ ರಾಜ, ಕಸಾಪ ತಾಲೂಕು ಕೋಶಾಧಿಕಾರಿ ಕೆ.ವಿ ಉಮೇಶ್, ಹೆಬ್ಬಾಲೆ ಘಟಕದ ಅಧ್ಯಕ್ಷ ಎಂ.ಎನ್ ಮೂರ್ತಿ, ಉಪನ್ಯಾಸಕ ಫಿಲಿಪ್ ವಾಸ್, ಕಾಲೇಜಿನ ಗ್ರಂಥಪಾಲಕ ಎಸ್ ನಂದೀಶ್ ಇದ್ದರು. ಕನ್ನಡ ಉಪನ್ಯಾಸಕಿ ಎಂ.ಎಚ್, ಸೋನಿಯ ನಿರ್ವಹಿಸಿದರು. ಕೆ.ಎಲ್ ಅವಿನಾಶ್ ಸ್ವಾಗತಿಸಿದರು. ಪ್ರಮೋದ್ ವಂದಿಸಿದರು.