ಬೆಂಗಳೂರು, ನ. ೧೧ : ಸುಶಿಕ್ಷಿತಳಾಗಿದ್ದು, ಉತ್ತಮ ಉದ್ಯೋಗ ಹೊಂದಿ ಸ್ವಂತ ಆದಾಯದಿಂದ ಜೀವನ ನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಪತ್ನಿ ಪತಿಯಿಂದ ಜೀವನಾಂಶ ಪಡೆಯಲು ಅರ್ಹಳಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

ಚಿಕ್ಕಮಗಳೂರು ಕೌಟುಂಬಿಕ ನ್ಯಾಯಾಲಯವು ಪತ್ನಿಗೆ ಮಾಸಿಕ ೨೦ ಸಾವಿರ ರೂ. ಜೀವನಾಂಶ ನೀಡುವಂತೆ ಪತಿಗೆ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಶುಭ್ರತ್ ಎ.ಆರ್. ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಚಿಲ್ಲಕೂರ್ ಸುಮಲತಾ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಪತ್ನಿ ಬಿ.ಇ. (ಕಂಪ್ಯೂಟರ್ ಸೈನ್ಸ್) ಪದವೀಧರೆಯಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ತಾಂತ್ರಿಕ ಲೇಖಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾಸಿಕ ೫೪,೭೦೦ ರೂ. ವೇತನ ಪಡೆಯುತ್ತಿದ್ದು, ತಮ್ಮ ಆದಾಯದಿಂದಲೇ ಪೋಷಕರನ್ನೂ ನಿರ್ವಹಿಸುತ್ತಿದ್ದಾರೆ. ಹೀಗಿರುವಾಗ ಪತಿ ಮೇಲೆ ಆರ್ಥಿಕವಾಗಿ ಅವಲಂಬಿತರಾಗಿದ್ದಾರೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಪತಿಯ ಮಾಸಿಕ ಆದಾಯ ಎರಡು ಲಕ್ಷ ರೂ. ಆಗಿದ್ದು, ಪತ್ನಿಗಿಂತ ಹೆಚ್ಚಿರುವುದು ನಿಜ. ಆದರೆ, ಪ್ರತಿಯೊಂದು ಸಂದರ್ಭದಲ್ಲೂ ಪತಿಯೇ ಪತ್ನಿಯನ್ನು ನಿರ್ವಹಿಸಬೇಕು ಎಂದು ಕಾನೂನು ಹೇಳುವುದಿಲ್ಲ. ಪತ್ನಿಯ ಆದಾಯ ಆಕೆಯ ಜೀವನ ನಿರ್ವಹಣೆಗೆ ಸಾಲದಷ್ಟು ಕಡಿಮೆಯಿದ್ದಾಗ ಮಾತ್ರ ಜೀವನಾಂಶ ನೀಡುವ ಪ್ರಶ್ನೆ ಉದ್ಭವಿಸುತ್ತದೆ. ಆರ್ಥಿಕ ಸ್ವಾವಲಂಬನೆ ಹಾಗೂ ಸ್ವಂತ ಆದಾಯ ಗಳಿಸುವ ಸಾಮರ್ಥ್ಯವು ಜೀವನಾಂಶದ ಬೇಡಿಕೆಯನ್ನು ತಿರಸ್ಕರಿಸಲು ಸೂಕ್ತ ಆಧಾರವಾಗಬಹುದು ಎಂದು ಪೀಠ ತಿಳಿಸಿದೆ.

ಅಲ್ಲದೆ, ಪತಿಯು ಟೈಪ್-೧ ಮಧುಮೇಹ ಸೇರಿದಂತೆ ದೀರ್ಘಕಾಲದ ಕಾಯಿಲೆಗಳಿಂದ ಬಳಲುತ್ತಿದ್ದು, ವೈದ್ಯಕೀಯ ಚಿಕಿತ್ಸೆಗೆ ಹೆಚ್ಚಿನ ವೆಚ್ಚ ಭರಿಸುತ್ತಿದ್ದಾರೆ ಎಂಬ ವಾದವನ್ನೂ ನ್ಯಾಯಪೀಠ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿ ಪತಿಯ ಅರ್ಜಿಯನ್ನು ಪುರಸ್ಕರಿಸಿದೆ.

ಆದರೆ, ದಂಪತಿÀ ನಡುವಿನ ಸಂಬAಧ ಮತ್ತಷ್ಟು ಹದಗೆಡದಂತೆ ಹಾಗೂ ಸೌಹಾರ್ದಯುತ ಇತ್ಯರ್ಥಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಪತಿ ಈವರೆಗೆ ಪಾವತಿಸಿರುವ ಜೀವನಾಂಶದ ಮೊತ್ತವನ್ನು ಮರಳಿ ವಸೂಲಿ ಮಾಡುವಂತಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.

ಬೆಂಗಳೂರಿನ ಸಾಫ್ಟ್ವೇರ್ ಎಂಜಿನಿಯರ್ ಶುಭ್ರತ್ ಎ.ಆರ್. ಹಾಗೂ ಚಿಕ್ಕಮಗಳೂರಿನ ಮಹಿಳೆಯ ನಡುವೆ ವಿವಾಹವಾಗಿತ್ತು. ದಂಪತಿಗಳ ನಡುವೆ ಭಿನ್ನಾಭಿಪ್ರಾಯ ಉಂಟಾದ ಹಿನ್ನೆಲೆಯಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಬಳಿಕ ಮಾಸಿಕ ೮೫ ಸಾವಿರ ರೂ. ಜೀವನಾಂಶ ಕೋರಿ ಚಿಕ್ಕಮಗಳೂರು ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತಿಯ ಆದಾಯ ಪತ್ನಿಗಿಂತ ಹೆಚ್ಚಿರುವುದನ್ನು ಪರಿಗಣಿಸಿ ಮಾಸಿಕ ೨೦ ಸಾವಿರ ರೂ. ಜೀವನಾಂಶ ನೀಡುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದರು.

- ಕೋವರ್‌ಕೊಲ್ಲಿ ಇಂದ್ರೇಶ್