ಕಡಂಗ, ನ. ೯: ನಾಗರಿಕರ ಹಿತದೃಷ್ಟಿಯಿಂದ ಹಣಕಾಸು ಜಾಗೃತಿ ಬಗ್ಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮವನ್ನು ಆರ್ಬಿಐ ಹಾಗೂ ಲೀಡ್ ಬ್ಯಾಂಕ್ ಮಾರ್ಗದರ್ಶನದಲ್ಲಿ ಕೆನರಾ ಬ್ಯಾಂಕ್ ಅರಪಟ್ಟು ಶಾಖೆಯ ಸಹಯೋಗದಲ್ಲಿ ಅರಪಟ್ಟು ಸಭಾಭವನದಲ್ಲಿ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ವಿವಿಧ ಜನಹಿತ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಜನರಲ್ಲಿ ಜಾಗೃತಿ ಮೂಡಿಸಲಾಯಿತು. ಮಹಿಳಾ ಸ್ವಸಹಾಯ ಸಂಘ ಗಳಿಗೆ ಆರ್ಥಿಕ ನೆರವು, ಸೈಬರ್ ಕ್ರೈಂ ಹಾಗೂ ಕೆವೈಸಿ ಬಗೆಗಿನ ಮಾಹಿತಿಯನ್ನು ಕೆನರಾ ಬ್ಯಾಂಕಿನ ವ್ಯವಸ್ಥಾಪಕರಾದ ಹಂಸ ನೀಡಿದರು.
ಕಾರ್ಯಕ್ರಮದಲ್ಲಿ ಕಡಂಗ ಪಂಚಾಯತ್ ಮಾಜಿ ಸದಸ್ಯ ಸುಬೀರ್ ಕಡಂಗ, ಕೃಷಿಕ ಮಹಿಳೆ ರಹೀನಾ, ಆರ್ಥಿಕ ಸಮಾಲೋಚಕಿ ಅಂಬಿಕಾ ಅಶೋಕ್ ಹಾಗೂ ಗ್ರಾಮಸ್ಥರು, ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಿದ್ದರು.