ಸಿದ್ದಾಪುರ, ನ. ೯: ನೆಲ್ಲಿಹುದಿಕೇರಿ ಗ್ರಾಮದ ಎಂಜಿ ಕಾಲೋನಿಯ ಬಳಿಯ ವಸತಿ ಪ್ರದೇಶದಲ್ಲಿ ಕಾಡಾನೆಗಳ ಹಿಂಡು ದಿನ ನಿತ್ಯ ಸಂಚರಿಸುತ್ತಿದ್ದು ಸಂಜೆ ಸಮಯದಲ್ಲಿ ಮನೆಯಿಂದ ಹೊರಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಲ್ಲಿನ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗಟ್ಟಿದರು ಕೂಡ ಕಾಡಾನೆಗಳು ವಸತಿ ಪ್ರದೇಶದಲ್ಲಿ ಕಾಣಿಸಿಕೊಳ್ಳುತ್ತಿದೆ.
ಸಂಜೆಯ ವೇಳೆ ಶನಿವಾರದಂದು ಆನೆ ಪ್ರತ್ಯಕ್ಷಗೊಂಡ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ ಮೇರೆಗೆ ಮೀನುಕೊಲ್ಲಿ ಅರಣ್ಯ ಶಾಖೆಯ ಸಿಬ್ಬಂದಿಗಳು ಕಾಫಿ ತೋಟದೊಳಗಿನ ವಸತಿ ಪ್ರದೇಶದಿಂದ ಪಟಾಕಿ ಸಿಡಿಸಿ ಓಡಿಸಲು ಯತ್ನಿಸಿದರು. ಆದರೆ ಕಾಡಾನೆಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಸಂಚರಿಸುತ್ತಾ ಕಾಡಿಗೆ ತೆರಳಲು ಹಿಂದೇಟು ಹಾಕಿದ ಘಟನೆ ನಡೆಯಿತು. ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಓರ್ವ ಸಿಬ್ಬಂದಿಯನ್ನು ನಿಯೋಜಿಸಿದ್ದಾರೆ.
-ವಾಸು