ನಾಪೋಕ್ಲು, ನ. ೯: ಸಮೀಪದ ಕಕ್ಕಬೆ ಪಾಡಿ ಶ್ರೀ ಇಗ್ಗುತ್ತಪ್ಪ ಸನ್ನಿಧಿಯಲ್ಲಿ ಕೊಡಗಿನ ಸುಗ್ಗಿಯ ಸಂಭ್ರಮದ ಪುತ್ತರಿ ಹಬ್ಬವನ್ನು ತಾ. ೨೫ ರಂದು ಆಚರಿಸುವಂತೆ ಸೋಮವಾರ ನಿಶ್ಚಯಿಸಲಾಯಿತು.

ದೇವಾಲಯದಲ್ಲಿ ತಕ್ಕ ಮುಖ್ಯಸ್ಥರು ಹಾಗೂ ವ್ಯವಸ್ಥಾಪನಾ ಸಮಿತಿ ಭಕ್ತ ಜನ ಸಂಘದ ಪ್ರಮುಖರು, ಭಕ್ತರ ಸಮ್ಮುಖದಲ್ಲಿ ಅಮ್ಮಂಗೇರಿ ಕಣಿಯ ಕುಟುಂಬದವರು ರಾಶಿ ಫಲಗಳನ್ನು ಪರಿಶೀಲಿಸಿ ಹಬ್ಬದ ದಿನ, ಮುಹೂರ್ತವನ್ನು ಅಧಿಕೃತವಾಗಿ ತಿಳಿಸಿದರು.

ಅದರಂತೆ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ತಾ. ೨೫ ರಂದು ಬುಧವಾರ ರಾತ್ರಿ ರೋಹಿಣಿ ನಕ್ಷತ್ರದಲ್ಲಿ ೬.೦೫ ಗಂಟೆಗೆ ಪುತ್ತರಿ ಹಬ್ಬದ ನೆರೆ ಕಟ್ಟುವುದು, ರಾತ್ರಿ ೭.೦೫ ಗಂಟೆಗೆ ಕದಿರು ಕುಯ್ಯುವುದು, ರಾತ್ರಿ ೮.೦೫ ಗಂಟೆಗೆ ಊಟೋಪಚಾರ ನಡೆಯಲಿದೆ.

ಸಾರ್ವಜನಿಕರಿಗೆ ತಾ. ೨೫ ರಂದು ಬುಧವಾರ ರಾತ್ರಿ ೬.೨೫ ಕ್ಕೆ ನೆರೆ ಕಟ್ಟುವುದು, ರಾತ್ರಿ ೭.೨೫. ಕ್ಕೆ ಕದಿರು ತೆಗೆಯುವುದು, ರಾತ್ರಿ ೮.೨೫ ಕ್ಕೆ ಊಟೋಪಚಾರ ಸಮಯವನ್ನು ನಿಗದಿ ಮಾಡಲಾಗಿದೆ. ಇದಕ್ಕೂ ಮುನ್ನ ತಾ. ೨೪ರ ಮಂಗಳವಾರ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕಲ್ಲಾಡ್ಚ ಹಬ್ಬ ನಡೆಯಲಿದೆ.

ಇಂದು ಜ್ಯೋತಿಷಿ ಶಶಿಕುಮಾರ್, ಕಣಿಯರ ನಾಣಯ್ಯ ಕುಟುಂಬದವರು ಜ್ಯೋತಿಷ್ಯದ ಪ್ರಕಾರ ರಾಶಿ ಫಲ ಪರಿಶೀಲಿಸಿ ದಿನನಿಗದಿ ಮಾಡಿದ ಬಳಿಕ ಪರದಂಡ ಸುಬ್ರಮಣಿ ಕಾವೇರಪ್ಪ ದೇವರ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಆನಂತರ ದಿನ ನಿಗದಿ ಪಟ್ಟಿಯನ್ನು ವಿಶೇಷ ಪ್ರಾರ್ಥನೆಯ ಮೂಲಕ ಅರ್ಚಕರಿಗೆ ನೀಡಿ ಅರ್ಚಕ ಜಗದೀಶ್ ಅವರು ಪೂಜೆ ನೆರವೇರಿಸಿದ ಬಳಿಕ ತೀರ್ಥ ಪ್ರಸಾದ ನೀಡುವುದರ ಮೂಲಕ ತಕ್ಕ ಮುಖ್ಯಸ್ಥರಿಗೆ ಹಸ್ತಾಂತರಿಸಲಾಯಿತು.

ನಂತರ ಭಕ್ತ ಜನ ಸಂಘದ ಅಧ್ಯಕ್ಷ, ದೇವತಕ್ಕರಾದ ಪರದಂಡ ಸುಬ್ರಮಣಿ ಕಾವೇರಪ್ಪ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿ ಪುತ್ತರಿ ಹಬ್ಬದ ಆಚರಣೆ ಜಿಲ್ಲೆಗೆ ವಿಶಿಷ್ಟವಾಗಿದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಸುಗ್ಗಿಯ ಹಬ್ಬವಾದ ಧಾನ್ಯಲಕ್ಷಿö್ಮಯನ್ನು ಮನೆಗೆ ಕರೆತರುವ ಹಬ್ಬವನ್ನು ಎಲ್ಲರೂ ನಿಗದಿ ಪಡಿಸಿದ ಸಮಯದಲ್ಲೇ ಆಚರಿಸುವಂತಾಗಬೇಕು. ಈ ದಿನದಿಂದ ದೇಶಕಟ್ಟನ್ನು ಎಲ್ಲರೂ ಪಾಲಿಸಿ. ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದ ಆಚರಣೆಯನ್ನು ಯಥಾವತ್ತಾಗಿ ಪಾಲಿಸಬೇಕು ಎಂದು ಹೇಳಿ ಹಬ್ಬದ ಕಟ್ಟುಪಾಡುಗಳ ಮಾಹಿತಿಯನ್ನು ನೀಡಿದರು.

ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ನಿರ್ದೇಶಕರುಗಳು, ಭಕ್ತ ಜನ ಸಂಘದ ಉಪಾಧ್ಯಕ್ಷ ಕಲ್ಯಾಟಂಡ ರಾಜ, ಕಾರ್ಯದರ್ಶಿ ಬಟ್ಟೀರ ಚೋಂದಮ್ಮ, ನಿರ್ದೇಶಕರುಗಳು, ತಕ್ಕ ಮುಖ್ಯಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.

- ದುಗ್ಗಳ ಸದಾನಂದ