ಸೋಮವಾರಪೇಟೆ, ನ. ೯: ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುವ ಮುಖಾಂತರ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಜಾತ್ಯಾತೀತ ಜನತಾದಳದಿಂದ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪುಟ್ಟಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ರಾಜ್ಯ ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರುಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಮಾತನಾಡಿದ ಪಕ್ಷದ ತಾಲೂಕು ಅಧ್ಯಕ್ಷ ನಾಗರಾಜ್, ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ದಿವಾಳಿ ಮಾಡಿದೆ. ಅವೈಜ್ಞಾನಿಕ ಯೋಜನೆಗಳ ಮುಖಾಂತರ ಸಾಲದ ಸುಳಿಗೆ ಸಿಲುಕಿಸಿದ್ದು, ಜನರ ಜೀವನಮಟ್ಟ ಕುಸಿತವಾಗಿದೆ. ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಂಡಿದ್ದು, ಜನಸಾಮಾನ್ಯರು ತೊಂದರೆ ಎದುರಿಸುತ್ತಿದ್ದರೂ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದೆ ಎಂದು ದೂರಿದರು.

ರಾಜ್ಯದಲ್ಲಿ ಅಭಿವೃದ್ದಿ ಮರೀಚಿಕೆಯಾಗಿದೆ. ನಿರುದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಕೆಎಸ್‌ಆರ್‌ಟಿಸಿ ಸೇರಿದಂತೆ ಇತರ ಸಾರಿಗೆ ನಿಗಮಗಳು ನಷ್ಟದಲ್ಲಿದೆ. ಬಸ್‌ಗಳನ್ನು ರಿಪೇರಿ ಮಾಡಿಸಲು, ಡೀಸೆಲ್ ಹಾಕಿಸಲು, ನೌಕರರಿಗೆ ಸಂಬಳ ನೀಡಲೂ ಸಹ ಸರ್ಕಾರದ ಬಳಿ ಹಣವಿಲ್ಲ. ಹಲವಷ್ಟು ಬಸ್‌ಗಳು ಸಂಚಾರವನ್ನೇ ಸ್ಥಗಿತಗೊಳಿಸಿವೆ. ಇದರ ನಡುವೆ ಬಸ್ ಪ್ರಯಾಣ ದರವನ್ನೂ ಏರಿಕೆ ಮಾಡುವ ಮೂಲಕ ತನ್ನ ಜನವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿದೆ ಎಂದು ಆರೋಪಿಸಿದರು.

ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಸಮಸ್ಯೆಗಳ ಬಗ್ಗೆ ಮಾತನಾಡದೇ ದಿನಬೆಳಗಾದರೆ ಆರ್‌ಎಸ್‌ಎಸ್, ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹೆಚ್.ಡಿ. ಕುಮಾರಸ್ವಾಮಿ ಅವರ ಜಪ ಮಾಡುತ್ತಿದ್ದಾರೆ. ಹಳ್ಳಿಗರ ಮತದಿಂದಲೇ ಗೆದ್ದು ಅಧಿಕಾರ ಹಿಡಿದಿರುವ ಪ್ರಿಯಾಂಕ್ ಖರ್ಗೆ ಅವರು, ಹಳ್ಳಿ ಗುಗ್ಗುಗಳು ಎಂದು ಸಂಬೋಧಿಸುವ ಮೂಲಕ ಗ್ರಾಮೀಣ ಪ್ರದೇಶದ ಜನರನ್ನು, ರೈತರನ್ನು ಅಪಮಾನ ಮಾಡಿದ್ದಾರೆ. ಇದಕ್ಕೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ನಂತರ ಪ್ರತಿಭಟನಾ ಮೆರವಣಿಗೆ ಮೂಲಕ ತಾಲೂಕು ಕಚೇರಿಗೆ ಆಗಮಿಸಿದ ಕಾರ್ಯಕರ್ತರು, ಬೆಲೆ ಏರಿಕೆಯನ್ನು ಇಳಿಸಬೇಕೆಂದು ಆಗ್ರಹಿಸುವ ಮನವಿ ಪತ್ರವನ್ನು ತಾಲೂಕು ತಹಶೀಲ್ದಾರ್ ಕೃಷ್ಣಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರುಗಳಾದ ಹಾನಗಲ್ಲು ಶಿವಪ್ಪ, ಮಸಗೋಡು ಸುರೇಶ್, ವಿಜೇಶ್, ಪ್ರವೀಣ್, ಆದರ್ಶ್ ತಮ್ಮಯ್ಯ, ಸ್ವಾಗತ್, ಕೊಡ್ಲಿಪೇಟೆ ಪುಟ್ಟರಾಜು, ಜಯಾನಂದ, ಮಂದಣ್ಣ, ಕೂಗೂರು ಸಂದೀಪ್, ಶೋಭರಾಜ್, ಹೊಸಬೀಡು ಹೂವಯ್ಯ, ಕೂತಿ ಮೋಹನ್, ವಿನಯ್ ಕುಶಾಲಪ್ಪ ಸೇರಿದಂತೆ ಇತರರು ಇದ್ದರು.