ವರದಿ : ಕೆ.ಎಸ್.ಮೂರ್ತಿ
ಕಣಿವೆ, ನ. ೮: ಕೊಡಗಿನ ಪ್ರಕೃತಿ ಸೌಂದರ್ಯದ ನಡುವಲ್ಲಿ ಚೆಲುವನ್ನು ಹೊದ್ದು ನಿಂತ ಚಿಕ್ಲಿಹೊಳೆ ನೀರಾವರಿ ಯೋಜನೆ ಪ್ರವಾಸಿಗರಿಗೆ ಹಿತ. ಅಚ್ಚುಕಟ್ಟು ಕೃಷಿಕರಿಗೆ ಅಹಿತ. ಅಂದರೆ ಯೋಜನೆಯ ಮೂಲ ಉದ್ದೇಶ ಮರೆಯಾಗಿದೆ. ಪ್ರವಾಸಿ ತಾಣವಾಗಿ ತೆರೆದುಕೊಂಡಿದೆ. ೧೯೮೦ ರ ದಶಕದಲ್ಲಿ ಅನ್ನದಾತರ ಆಶ್ರಯದಾತನಾಗಿ ತಲೆ ಎತ್ತಬೇಕಿದ್ದ ಕೊಡಗಿನ ಎರಡನೇ ನೀರಾವರಿ ಯೋಜನೆ ಇಂದು ರಾಜ್ಯ ಸರ್ಕಾರದ ನಿರ್ಲಕ್ಷಿತ ಜಲಾಶಯ ಯೋಜನೆಗಳ ಸಾಲಿಗೆ ಸೇರಿ ದಶಕಗಳೇ ಕಳೆದಿವೆ.
ಸೂಕ್ತ ಅನುದಾನವಿಲ್ಲ
ಜಲಾಶಯ ಯೋಜನೆಯ ಆರಂಭದಲ್ಲಿ ೨೧೩೭ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ರೈತರು ಬೆಳೆವ ಬೆಳೆಗಳಿಗೆ ನೀರೊದಗಿಸಲು ಆರಂಭವಾದ ಯೋಜನೆ ರಾಜ್ಯ ಸರ್ಕಾರದ ನಿರಾಸಕ್ತಿಯಿಂದಾಗಿ ಸಂಪೂರ್ಣ ಸೊರಗಿ ಹೋಗಿದೆ. ಈ ಜಲಾಶಯ ಯೋಜನೆಯ ಸಾಕಾರಕ್ಕೆ ಇದರ ಸುತ್ತ ಮುತ್ತಲು ಇರುವ ಅರಣ್ಯ ಇಲಾಖೆಯ ವಿಶಾಲ ಪ್ರದೇಶದಲ್ಲಿ ಕಾಲುವೆಗಳನ್ನು ಮಾಡಲಾಯಿತು. ಆದರೆ ಕ್ರಮೇಣ ನೀರಾವರಿ ನಿಗಮ ಈ ಯೋಜನೆಯ ನಿರ್ವಹಣೆಗೆ ಸೂಕ್ತ ಅನುದಾನ ನೀಡದ ಕಾರಣ ಉದ್ದೇಶಿತ ನೀರಾವರಿ ಯೋಜನೆ ನೆಲಕಚ್ಚಿತು.
೩೦೦ ಎಕರೆ ಅಚ್ಚುಕಟ್ಟು....?
೨೧೩೭ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸಲು ನಿರ್ಮಾಣವಾದ ಈ ಯೋಜನೆ ಯಡಿ ಇದೀಗ ಕೇವಲ ೨೫೦ ರಿಂದ ೩೦೦ ಎಕರೆ ಅಚ್ಚುಕಟ್ಟು ಪ್ರದೇಶ ಇದೆ ಎಂದರೆ ನಂಬಲಾತೀತ. ಏಕೆಂದರೆ ಅಚ್ಚುಕಟ್ಟು ಪ್ರದೇಶದ ಕೊನೆಯಂಚಿನ ರೈತರಿಗೆ ಬೆಳೆಗೆ ನೀರು ಹರಿಸಲು ಸಾಧ್ಯವಾಗದ ಕಾರಣ ರೈತರು ಈ ಯೋಜನೆಯಿಂದ ಬೇಸತ್ತು ಭತ್ತ ಬೆಳೆಯುತ್ತಿದ್ದ ಕೃಷಿ ಭೂಮಿಯನ್ನು ಬಡಾವಣೆಗಳಾಗಿ ಪರಿವರ್ತನೆ ಮಾಡಿಕೊಂಡರು. ಕೆಲವರು ಭತ್ತ, ಜೋಳದ ಬದಲಾಗಿ ತೋಟಗಾರಿಕೆ ಬೆಳೆಗೆ ಪರಿವರ್ತನೆಯಾದರು.
ನಿರ್ವಹಣೆ ಮೊದಲೇ ಇಲ್ಲ
ನಿರ್ಲಕ್ಷಿತ ಜಲಾಶಯ ಯೋಜನೆ ಸಮರ್ಪಕವಾಗಿ ನಿರ್ವಹಣೆಯಾಗದ ಕಾರಣ ಇಂದು ಇದು ಪಾಳು ಬಿದ್ದಿದೆ. ಜಲಾಶಯದ ಮುಂಬದಿ ಹಾಗೂ ಆಸುಪಾಸಿನಲ್ಲಿ ಬೆಳೆದು ನಿಂತ ಕಾಡು ಗಿಡ ಗಂಟಿಗಳನ್ನು ಕಡಿದು ಶುಚಿ ಮಾಡಲಾರದಷ್ಟು ನೀರಾವರಿ ನಿಗಮ ಕೈ ಬಿಟ್ಟಿದೆ. ಹಾಗಾಗಿ ಸುತ್ತಲೂ ಅರಣ್ಯದಿಂದ ಕೂಡಿದ ಈ ನೀರಾವರಿ ಯೋಜನೆ ಕೇವಲ ಕಾಡಾನೆಗಳ ಕುಡಿಯುವ ನೀರಿನ ಸುಂದರ ಕೆರೆಯಾಗಿ ಮಾರ್ಪಟ್ಟಿದೆ ಅಷ್ಟೆ. ಸೂಕ್ತ ಅನುದಾನವೇ ಇಲ್ಲದ ಈ ಯೋಜನೆಗೆ ಇಲಾಖೆಯಿಂದ ಅಗತ್ಯ ಸಿಬ್ಬಂದಿಗಳು ಹಾಗೂ ಅಭಿಯಂತರರನ್ನು ನಿಯೋಜಿಸುವಲ್ಲಿ ಸರ್ಕಾರ ವಿಫಲವಾಯಿತು.
ಪ್ರವಾಸಿಗರಿಗೆ ತೆರೆದುಕೊಂಡ ತಾಣ
ಪ್ರಕೃತಿದತ್ತವಾದ ಸೌಂದರ್ಯದ ಸಿರಿಯೊಳಗಿನ ಈ ಜಲಾಶಯ ದೂರದ ನಗರ - ಪಟ್ಟಣ ಪ್ರದೇಶಗಳಿಂದ ಆಗಮಿಸುವ ಪ್ರವಾಸಿಗರ ಪಾಲಿಗೆ ಸ್ವರ್ಗದಂತಿದೆ. ಕಂಡಷ್ಟೂ ದೂರ ಕಣ್ಣಿಗೆ ಹಿತ. ಮನಸ್ಸಿಗೆ ಆನಂದ. ಹಸಿರ ಸಿರಿಯೊಳಗೆ ನಳ ನಳಿಸುವ ಈ ಜಲಾಗಾರ ನಯನಮನೋಹರ. ೦.೧೮ ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯದ ಜಲಾಶಯದಲ್ಲಿ ಬಲ ದಂಡೆ ಕಾಲುವೆ ೧೧.೮ ಕಿಮೀ ಉದ್ದ ಹಾಗೂ ಎಡದಂಡೆ ಕಾಲುವೆ ೨೮ ಕಿಮೀ ಉದ್ದವಿದೆ. ಜೊತೆಗೆ ಜಲಾಶಯದ ಆರಂಭದಲ್ಲಿ ನಿರ್ಮಾಣವಾದ ಹಳೆಯ ಕಾಲುವೆ ೧೬ ಕಿಮೀ ಉದ್ದವಿದೆ. ನಂಜರಾಯಪಟ್ಟಣ, ವಾಲ್ನೂರು, ರಂಗಸಮುದ್ರ, ಬೆಟ್ಟಗೇರಿ, ಗುಡ್ಡೆಹೊಸೂರು, ಬಸವನಹಳ್ಳಿ, ಬಳ್ಳೂರು ಮೊದಲಾದ ಗ್ರಾಮಗಳ ಕೃಷಿಕರಿಗೆ ನೀರೊದಗಿಸಬೇಕಿದ್ದ ಈ ಜಲಾಶಯ ಇಂದು ಹಳ್ಳ ಹಿಡಿದಿದುದು ಮಾತ್ರ ವಿಪರ್ಯಾಸ.
೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಉಚಿತ ಪ್ರವೇಶ
ನೀರಾವರಿ ನಿಗಮದ ಅನಾದರಕ್ಕೆ ಒಳಗಾಗಿರುವ ಈ ಜಲಾಶಯದ ಪರಿಸರವನ್ನು ನಾವು ನಿರ್ವಹಿಸುತ್ತೇವೆ. ಪ್ರವಾಸಿಗರಿಂದ ಪ್ರವೇಶ ಶುಲ್ಕ ಪಡೆದು ಪ್ರವಾಸಿಗರಿಗೆ ಇನ್ನಷ್ಟು ಅನುಕೂಲ ಕಲ್ಪಿಸುತ್ತೇವೆ. ನಮಗೆ ಕೊಡಿ ಎಂದು ಸ್ಥಳೀಯ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ನೀರಾವರಿ ನಿಗಮಕ್ಕೆ ಕೋರಿಕೆ ಸಲ್ಲಿಸಿತ್ತು. ಆದರೆ ನಿಗಮದ ಅಧಿಕಾರಿಗಳು ಇದು £ಮ್ಮ ವ್ಯಾಪ್ತಿ ಮೀರಿರುವ ಸಂಗತಿಯಾಗಿದೆ. ಏನಿದ್ದರೂ ಮೇಲಿಂದ ಆದೇಶವಾಗಬೇಕು. ಅದು ಅಸಾಧ್ಯ ಎಂದು ಸ್ಥಳೀಯ ಅಧಿಕಾರಿಗಳು ನಯವಾಗಿ ತಿರಸ್ಕರಿಸಿದ್ದಾರೆ. ನಾನೂ ಮಾಡೆನು. ಯಾರಿಗೂ ಕೊಡೆನು ಎಂಬAತೆ ನಿಗಮ ಕೈ ಕಟ್ಟಿ ಕುಳಿತಿದೆ.
-