*ಗೋಣಿಕೊಪ್ಪ, ನ. ೮: ನಮ್ಮ ಧರ್ಮ ಮತ್ತು ಜಾತಿಯನ್ನು ಪ್ರೀತಿಸುವುದರೊಂದಿಗೆ ಇತರ ಸಮುದಾಯಗಳನ್ನೂ ಗೌರವಿಸುವ ಉದಾತ್ತ ಸಂಸ್ಕೃತಿಯನ್ನು ಬೆಳೆಸಿಕೊಳ್ಳಬೇಕು ಎಂದು ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಸಲಹೆ ನೀಡಿದರು.

ಕೊಡಗು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಪರಿಮಳ ಮಂಗಳ ವಿಹಾರದಲ್ಲಿ ಆಯೋಜಿಸಿದ್ದ ಪೊನ್ನೋಣಂ ಕಾರ್ಯಕ್ರಮದಲ್ಲಿ ಸಮಾಜದ ದಶಮಾನೋತ್ಸವದ ವಿಶೇಷ ಲಾಂಛನ ಅನಾವರಣಗೊಳಿಸಿ ಅವರು ಮಾತನಾಡಿದರು.

ಮಕ್ಕಳ ಮೇಲೆ ಅಂಕಗಳಿಗಾಗಿ ಓದುವ ಒತ್ತಡ ಹೇರದೆ, ಅವರಿಗೆ ಉತ್ತಮ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಕಲಿಸಿಕೊಡುವ ಜವಾಬ್ದಾರಿ ಪೋಷಕರ ಮೇಲಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳ ಹವ್ಯಾಸಗಳು ಬದಲಾಗುತ್ತಿದ್ದು, ಅವರು ತಪ್ಪು ದಾರಿಗೆ ಸಾಗದಂತೆ ಪೋಷಕರು ಎಚ್ಚರಿಕೆ ವಹಿಸಬೇಕು. ಉತ್ತಮ ನಡೆ-ನುಡಿ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಮೈಗೂಡಿಸಿಕೊಂಡ ಮಕ್ಕಳು ದೇಶದ ಭವಿಷ್ಯವಾಗುತ್ತಾರೆ. ಈ ನಿಟ್ಟಿನಲ್ಲಿ ಮಕ್ಕಳಲ್ಲಿ ದೇಶಪ್ರೇಮ ಬೆಳೆಸಬೇಕು ಎಂದರು.

ಸಮಾಜದ ಒಗ್ಗಟ್ಟನ್ನು ಒಡೆಯಲು ಕೆಲವೊಂದು ದುಷ್ಟಶಕ್ತಿಗಳು ಪ್ರಯತ್ನಿಸುತ್ತವೆ. ಇಂತಹ ಸಂದರ್ಭಗಳಲ್ಲಿ ಭಿನ್ನಾಭಿಪ್ರಾಯಗಳಿಗೆ ಅವಕಾಶ ನೀಡದೆ ಒಗ್ಗಟ್ಟಿನಿಂದ ಇರಬೇಕು. ಸಮಾರಂಭಗಳಲ್ಲಿ ರಾಜಕೀಯ ಬೆರೆಸದೆ ಸಮಾಜದ ಅಭಿವೃದ್ಧಿ ಹಾಗೂ ಹಿತದೃಷ್ಟಿಯಿಂದ ಎಲ್ಲರೂ ಒಂದಾಗಿ ಕಾರ್ಯನಿರ್ವಹಿಸಬೇಕು. ಜಾತಿ, ಧರ್ಮ, ಸಂಸ್ಕೃತಿ ಹಾಗೂ ಆಚಾರ-ವಿಚಾರಗಳು ವಿಭಿನ್ನವಾಗಿದ್ದರೂ ಪರಸ್ಪರ ಗೌರವ ಮತ್ತು ಪ್ರೀತಿಯಿಂದ ಬದುಕುವುದೇ ನಮ್ಮ ದೇಶದ ವೈಶಿಷ್ಟ್ಯವಾಗಿದೆ ಎಂದು ಹೇಳಿದರು.

ಎಸ್‌ಎನ್‌ಡಿಪಿ ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಸಮಾಜದ ಮುಂದಿನ ಮೂರು ವರ್ಷಗಳ ಯೋಜನೆ ಹಾಗೂ ಕಾರ್ಯಕ್ರಮಗಳ ವಿವರಗಳನ್ನು ಒಳಗೊಂಡ ಪಟ್ಟಿಯನ್ನು ಅನಾವರಣಗೊಳಿಸಿ ಮಾತನಾಡಿ, ಮಕ್ಕಳಿಗೆ ನೈತಿಕ ಶಿಕ್ಷಣದೊಂದಿಗೆ ಗುಣಮಟ್ಟದ ಶಿಕ್ಷಣವನ್ನೂ ನೀಡಬೇಕು. ಸಮುದಾಯದ ಜನರು ನಾಯಕತ್ವದ ಗುಣಗಳನ್ನು ಬೆಳೆಸಿಕೊಂಡಾಗ ಮಾತ್ರ ಸಮಾಜದಲ್ಲಿ ಉತ್ತಮ ಹೆಸರು ಗಳಿಸಲು ಸಾಧ್ಯ. ಕೊಡಗಿನ ಜನತೆಗೆ ಯಾವುದೇ ಸಮಸ್ಯೆಗಳು ಎದುರಾದರೂ ಹಿಂದೂ ಮಲಯಾಳಿ ಸಮಾಜ ಸದಾ ನೆರವಿನ ಹಸ್ತ ಚಾಚಲಿದೆ ಎಂದು ಭರವಸೆ ನೀಡಿದರು.

ಮಲಯಾಳಿ ಚಿತ್ರನಟಿ ಪ್ರಿಯಾಂಕಾ ನಾರಾಯಣ್ ಮಾತನಾಡಿ, ನಮ್ಮ ಸಂಸ್ಕೃತಿ ಬದಲಾಗದಿದ್ದರೂ ಅದನ್ನು ಆಚರಿಸುವ ವಿಧಾನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪರಸ್ಪರ ಭೇಟಿಯಾಗಿ ಬೆರೆಯುವ ಸಂಪ್ರದಾಯ ಮರೆಯಾಗುತ್ತಿದೆ ಎಂದು ವಿಷಾದಿಸಿದರು.

ಸಮಾಜದ ದಶಕದ ಸಂಭ್ರಮಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಿರುವ ಹತ್ತು ಪ್ರಮುಖ ಕಾರ್ಯಕ್ರಮಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ ಸಾಹಿತಿ ಹಾಗೂ ಸಮಾಜ ಸೇವಕಿ ಪುಷ್ಪಲತಾ ಶಿವಪ್ಪ ಮಾತನಾಡಿ, ಸಮುದಾಯದ ಅಸ್ಮಿತೆ, ಆಚಾರ-ವಿಚಾರ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಒಗ್ಗಟ್ಟು ಮತ್ತು ಸಹಬಾಳ್ವೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಅಧ್ಯಕ್ಷ ಕೆ.ಪಿ. ಪ್ರಶಾಂತ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕ ಅಧ್ಯಕ್ಷ ಶರತ್ ಕಾಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಸಾಧಕರಿಗೆ ಸನ್ಮಾನ

ಕಳೆದ ೧೨ ವರ್ಷಗಳಿಂದ ೧,೪೧೦ ರೋಗಿಗಳಿಗೆ ವಿವಿಧ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ದೊರಕಿಸಿಕೊಡಲು ನೆರವಾದ ಸಮಾಜಸೇವಕ ಚೋಕಂಡ ಸಂಜು ಸುಬ್ಬಯ್ಯ, ರಕ್ತದಾನಿ ಪ್ರಿಯಾ ಮೋಹನ್, ಸಮಾಜಸೇವಕ ಹಾಗೂ ಪತ್ರಕರ್ತ ವಿ.ವಿ. ಅರುಣ್ ಕುಮಾರ್, ನಿವೃತ್ತ ಸೈನಿಕ ಕೆ.ಕೆ. ಮೋಹನ್‌ದಾಸ್, ಪತ್ರಕರ್ತ ಪುತ್ತಮ್ ಪ್ರದೀಪ್, ಕೆ.ಕೆ. ಸುಷಾ, ಲಿಧಿನಾ ಸುಹಾಸ್, ಟಿ.ಆರ್. ವಿನೋದ್, ರಾಮಕೃಷ್ಣ, ಟಿ.ವಿ. ಭಾಗ್ಯವತಿ ಹಾಗೂ ಪಿ.ಜಿ. ಬಿಂದು ಅವರನ್ನು ಗೌರವಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿದ ಹಾಗೂ ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜದ ಸದಸ್ಯರ ಮಕ್ಕಳನ್ನು ಸನ್ಮಾನಿಸಲಾಯಿತು.

ನಾಟ್ಯ ಕಲಾವಿದೆ ಲಿಧಿನಾ ಸುಹಾಸ್ ಸ್ವಾಗತ ನೃತ್ಯ ಪ್ರದರ್ಶಿಸಿದರು. ತಿರುವಾದಿರ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ರಜನಿ ಮದುರಾಜನ್, ಸಮಾಜದ ಕಾರ್ಯದರ್ಶಿ ಸುಬ್ರಮಣಿ, ಶಾಜಿ ಅಚ್ಚುತ್ತನ್, ಜ್ಯೋತಿ ಅರುಣ್ ಕುಮಾರ್ ಸೇರಿದಂತೆ ಸಮಾಜದ ಪದಾಧಿಕಾರಿಗಳು, ಸದಸ್ಯರು ಹಾಗೂ ಸಮುದಾಯದವರು ಉಪಸ್ಥಿತರಿದ್ದರು.