ಮಡಿಕೇರಿ, ನ. ೬: ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಆವರಣದಲ್ಲಿ ಸೋಮವಾರ ವಾಯು ಮಾಲಿನ್ಯ ನಿಯಂತ್ರಣ ಜಾಗೃತಿ ಮಾಸಾಚರಣೆಯನ್ನಾಗಿ ಆಚರಿಸುವ ಸಂಬAಧ ಉದ್ಘಾಟನಾ ಸಮಾರಂಭವು ನಡೆಯಿತು.

ಈ ಸಂದರ್ಭದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶುಭ ಅವರು ಮಾತನಾಡಿ ವಾಹನಗಳನ್ನು ಪೂಲಿಂಗ್ ಸಿಸ್ಟಮ್‌ನಲ್ಲಿ ಬಳಸುವುದು, ಕಸ ವಿಲೇವಾರಿ ಸಂದರ್ಭದಲ್ಲಿ ಹಸಿ ಮತ್ತು ಒಣ ತ್ಯಾಜ್ಯಗಳ ವಿಂಗಡಣೆ, ಸೈಕಲ್ ಬಳಕೆ, ವಾಹನಗಳ ಸ್ವಚ್ಛತೆ ಇನ್ನಿತರ ವಿಷಯವನ್ನು ವಿವರಿಸಿದರು.

ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ೧೯೯೧ ರಿಂದ ೨೦೨೫ ರವರೆಗೆ ಇರುವ ಸಾರಿಗೆ ಇಲಾಖೆಯ ಪ್ರಕರಣಗಳಿಗೂ ಶೇ.೫೦ ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸಿ ಪ್ರಕರಣ ಮುಕ್ತಾಯಗೊಳಿಸಬೇಕಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಹ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

ಪ್ರಾದೇಶಿಕ ಸಾರಿಗೆ ಅಧಿಕಾರಿ ಸತೀಶ್ ಅವರು ಮಾತನಾಡಿ ಸರ್ಕಾರಿ ಕಾರ್ಯಕ್ರಮದ ಯಶಸ್ಸಿಗೆ ಎಲ್ಲರ ಸಹಕಾರದೊಂದಿಗೆ ವಾಹನಗಳ ನಿರ್ವಹಣೆ, ಗಿಡ ನೆಡುವುದು, ಶಾಲಾ ಮಕ್ಕಳಲ್ಲಿ ವಾಯು ಮಾಲಿನ್ಯದ ಬಗ್ಗೆ ಜಾಗೃತಿ ಸಂಬAಧ ವಿವಿಧ ಸ್ಪರ್ಧೆಗಳನ್ನು ಆಯೋಜಿಸುವುದು, ಮತ್ತಿತರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಕೆಎಸ್‌ಆರ್‌ಟಿಸಿ ಮಡಿಕೇರಿ ಘಟಕ ವ್ಯವಸ್ಥಾಪಕರಾದ ದರ್ಶನ್, ಕಚೇರಿಯ ಅಧೀಕ್ಷಕರುಗಳಾದ ಸಲೀಮಾ, ಮೋಹನ್ ಕುಮಾರ್, ಮೋಟಾರು ವಾಹನ ನಿರೀಕ್ಷಕರುಗಳಾದ ಮೋಹನ್ ಕುಮಾರ್, ಪ್ರದೀಪ್, ಶಶಿಕುಮಾರ್, ರೀಟಾ ಇತರರು ಇದ್ದರು.