ಸುಂಟಿಕೊಪ್ಪ, ನ. ೬: ಕನ್ನಡ ಸಾಹಿತ್ಯ ಇತಿಹಾಸದಲ್ಲಿ ಸುಂಟಿಕೊಪ್ಪಕ್ಕೆ ವಿಶೇಷವಾದ ಸ್ಥಾನ ಇದೆ ಎಂದು ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್ ಹೇಳಿದರು. ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಆಯೋಜಿತಗೊಂಡಿದ್ದ ಕನ್ನಡ ರಾಜ್ಯೋತ್ಸವ ಕಾಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕುವೆಂಪು, ಡಾ. ಕೆ. ಶಿವರಾಮ ಕಾರಂತ, ದರಾ ಬೇಂದ್ರೆ ಹಾಗೂ ಮಾಸ್ತಿ ಸೇರಿದಂತೆ ಹಿರಿಯ, ಕಿರಿಯ ಸಾಹಿತಿಗಳು ಸುಂಟಿಕೊಪ್ಪದಲ್ಲಿ ಓಡಾಡಿದ್ದು, ಹರದೂರು ಗ್ರಾಮದಲ್ಲಿರುವ ಗುಂಡುಗುಟ್ಟಿ ಮಂಜನಾಥಯ್ಯ ಅವರ ಬಂಗಲೆಯಲ್ಲಿ ಉಳಿದು ಸಾಹಿತ್ಯ ರಚನೆ ಮಾಡಿ ತೆರಳುತ್ತಿದ್ದರು ಎಂದು ಸಬಾಸ್ಟಿನ್ ಸ್ಮರಿಸಿದರು. ಹಾಗೇಯೇ ಇಂದಿನ ಕಾಲಘಟ್ಟದಲ್ಲಿ ಸುಂಟಿಕೊಪ್ಪಕ್ಕೆ ಸೇರಿದವರಾದ ಹಿರಿಯ ಸಾಹಿತಿ ಅಬ್ದುಲ್ ರಶೀದ್ ಮತ್ತು ಪ್ರಸ್ತುತ ಶಾಲೆಯಲ್ಲಿ ಶಿಕ್ಷಕರಾಗಿರುವ ಸತೀಶ್ ಕಾಜೂರು ಅವರ ಕವಿತೆಗಳು ವಿಶ್ವ ವಿದ್ಯಾಲಯ ಮಟ್ಟದ ಕನ್ನಡ ಪಠ್ಯಗಳಲ್ಲಿ ಸೇರಿರುವುದು ಅಭಿಮಾನದ ಸಂಗತಿ ಎಂದು ಹೇಳಿದರು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕೂಡ ಸ್ಪಷ್ಟ ಪದಬಳಕೆ ಮಾಡುತ್ತಿರುವುದು ಕನ್ನಡ ಉಳಿವಿಗೆ ಸಹಕಾರಿ ಎಂದು ಅವರು ಅಭಿಪ್ರಾಯಿಸಿದರು. ಇಂಗ್ಲಿಷ್ ಮಾಧ್ಯಮವನ್ನು ಭಾಷೆಯಾಗಿ ಬಳಸಿಕೊಂಡು ಜೀವನ ರೂಪಿಸಿಕೊಳ್ಳಲು ಸಹಕಾರಿಯಾಗಬೇಕೇ ಹೊರತು ಕನ್ನಡವನ್ನು ನಿರ್ಲಕ್ಷ್ಯ ಮಾಡುವಂತಾಗಬಾರದು ಎಂದು ಅವರು ಕಿವಿಮಾತು ಹೇಳಿದರು.

ಶಾಲಾ ವತಿಯಿಂದ ಸನ್ಮಾನ ಸ್ವೀಕರಿಸಿ ಶಾಲೆಯ ಸಹ ಶಿಕ್ಷಕ ಹಾಗೂ ಸಾಹಿತಿ ಸತೀಶ್ ಕಾಜೂರು ಮಾತನಾಡಿ, ಕನ್ನಡ ರಾಜ್ಯೋತ್ಸವದ ಆಚರಣೆಯ ಹುಟ್ಟು ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು. ಕನ್ನಡದಲ್ಲಿ ಮಾತನಾಡಿ, ಕನ್ನಡದಲ್ಲಿ ಓದಿ ಬರೆದು ನಾವು ಕನ್ನಡ ಮತ್ತು ಕರ್ನಾಟಕಕ್ಕೆ ಗೌರವ ತೋರಿಸಬೇಕೆಂದು ಅವರು ಕರೆ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಕುಮಾರ್, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಪ್ರಬಾರ ಉಪಪ್ರಾಂಶುಪಾಲೆ ಶಾಂತ ಹೆಗ್ಡೆ, ದೈಹಿಕ ಶಿಕ್ಷಣ ಶಿಕ್ಷಕ ಪಿ.ಇ. ನಂದ ಮಾತನಾಡಿದರು.

ಸುಂಟಿಕೊಪ್ಪ ಸರಕಾರಿ ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷ ಎಚ್.ಎಸ್. ರವಿ, ಗೌರವಾಧ್ಯಕ್ಷ ಹೆಚ್.ಯು. ರಫೀಕ್ ಖಾನ್, ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷೆ ಲೀಲಾವತಿ ಹಾಗೂ ಶಾಲಾಭಿವೃದ್ಧಿ ಸಮಿತಿ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಕನ್ನಡ ನುಡಿ, ನೆಲ, ಜಲದ ಬಗ್ಗೆ ರಚಿಸಲಾಗಿರುವ ಗೀತೆಗಳು ಹಾಗೂ ಕರ್ನಾಟಕದ ಕವಿಮಹಾರಾಜರು ಕನ್ನಡವನ್ನು ಬೆಳೆಸಿ ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಸಾಹಿತಿಗಳ ಪರಿಚಯವನ್ನು ಮಾಡಿಕೊಟ್ಟರು.ಮಡಿಕೇರಿ, ನ. ೬: ಮಡಿಕೇರಿಯ ಮಹದೇವಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಕನ್ನಡ ರಾಜ್ಯೋತ್ಸವವನ್ನು ಸಂಘದ ಅಧ್ಯಕ್ಷೆ ಸವಿತಾ ಭಟ್ ಅವರ ಅಧ್ಯಕ್ಷತೆಯಲ್ಲಿ ಸಂಭ್ರಮದಿAದ ಆಚರಿಸಲಾಯಿತು.

ಬೆಳಗ್ಗೆ ೯ ಗಂಟೆಗೆ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ನಂತರ ರಾಜ್ಯೋತ್ಸವ ಸಂಭ್ರಮಾಚರಣೆಯನ್ನು ನಡೆಸಲಾಯಿತು. ಉತ್ತುಂಗ ತಂಡದವರು ಪ್ರಾರ್ಥಿಸಿ. ಸಂಘದ ಅಧ್ಯಕ್ಷೆ ಸವಿತಾ ಭಟ್ ಸ್ವಾಗತ ಮತ್ತು ಪ್ರಾಸ್ತಾವಿಕ ಭಾಷಣವನ್ನು ಮಾಡಿದರು. ಉಮಾ ಈಶ್ವರ್ ಕನ್ನಡದ ಇತಿಹಾಸ, ಕನ್ನಡ ನಡೆದು ಬಂದ ದಾರಿಯ ಬಗ್ಗೆ ಭಾಷಣವನ್ನು ಮಾಡಿದರು. ನಂತರ ಕನ್ನಡ ಸಾಹಿತ್ಯ ಲೋಕದಲ್ಲಿ ಚಿರಪರಿಚಿತರಾಗಿರುವ ಟಿ.ಪಿ.ರಮೇಶ್ ಅವರನ್ನು ಸನ್ಮಾನಿಸಲಾಯಿತು. ಅವರನ್ನು ಸಂಘದ ಆಡಳಿತ ಮಂಡಳಿಯ ಸದಸ್ಯೆಯಾದ ಭಾರತಿ ರಮೇಶ್ ಸಭೆಗೆ ಪರಿಚಯಿಸಿದರು. ಶಕ್ತಿ ಪತ್ರಿಕೆಯ ಬಿ.ಜಿ. ಅನಂತಶಯನ ಅವರು ಅತಿಥಿಗಳಾಗಿ ಭಾಗವಹಿಸಿದ್ದರು. ಸನ್ಮಾನ ಸ್ವೀಕರಿಸಿದ ರಮೇಶ್ ಅವರ ಕನ್ನಡ ನಾಡು ಮತ್ತು ಕನ್ನಡ ನುಡಿಯ ಬಗ್ಗೆ ಮಾತನಾಡಿದರು. ನಮ್ಮ ಕನ್ನಡನಾಡು ಬಹಳ ಸಂಪದ್ಭರಿತವಾದ ನಾಡು, ಇಲ್ಲಿ ಎಲ್ಲವೂ ಇದೆ. ಇಲ್ಲಿ ಜನಿಸಿದ ನಾವು ಪುಣ್ಯವಂತರು. ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವುಳ್ಳ ಕನ್ನಡ ಬಲು ಚಂದ ಭಾಷೆ. ಇದು ಹಿಂದಿನ ಕಾಲದಿಂದ ಇಂದಿನವರೆಗೆ ಕಾಲಕಾಲಕ್ಕೆ ಅಭಿವೃದ್ಧಿಯನ್ನು ಹೊಂದಿದೆ. ಮಹಾನ್ ಸಾಹಿತಿಗಳನ್ನೂ, ಕವಿಗಳನ್ನೂ ನೀಡಿದ ಭಾಷೆ ಕನ್ನಡ. ಕನ್ನಡಕ್ಕೆ ೮ ಜ್ಞಾನ ಪೀಠ ಪ್ರಶಸ್ತಿಗಳು ಲಭಿಸಿವೆ.

ಕನ್ನಡ ಒಂದು ಭಾಷೆ ಮಾತ್ರವಲ್ಲ ಅದು ಕನ್ನಡಿಗರ ಶಕ್ತಿ, ಹೆಮ್ಮೆ ಮತ್ತು ನಮ್ಮ ಅಸ್ಮಿತೆ. ಅದನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ತಮ್ಮ ಭಾಷಣದಲ್ಲಿ ತಿಳಿಸಿದರು. ನಂತರ ಸದಸ್ಯೆಯರಿಂದ ಸ್ವರಚಿತ ಕವನ ವಾಚನ ನಡೆಯಿತು. ರಾಜ್ಯೋತ್ಸವದ ಅಂಗವಾಗಿ ನಡೆದ "ಕನ್ನಡಾಂಬೆಗೆ ಒಂದು ಪತ್ರ " ಎಂಬ ಪತ್ರ ಲೇಖನ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕಾರ್ಯಕ್ರಮಗಳನ್ನು ಜಯಶೀಲಾ ಪ್ರಕಾಶ್ ಮತ್ತು ಕಮಲಾ ಮುರುಗೇಶ್ ನಿರೂಪಿಸಿದರೆ, ಸಂಘದ ಉಪಾಧ್ಯಕ್ಷೆ ಶ್ಯಾಮಲಾ ದಿನೇಶ್ ಅವರು ವಂದಿಸಿದರು.

ಕಾರ್ಯಕ್ರಮದಲ್ಲಿ ಸಂಘದ ಆಡಳಿತ ಮಂಡಳಿಯ ಸದಸ್ಯೆಯರಾದ ವಸುಂಧರಾ ಪ್ರಸನ್ನ, ಕಮಲಾ ಸುಬ್ಬಯ್ಯ, ವಸಂತಿ ಪೂಣಚ್ಚ, ಶೈಲಾ ಮಂಜುನಾಥ್, ಪ್ರೇಮಾ ರಾಘವಯ್ಯ, ಆಯಿಷಾ ಹಮೀದ್ ಹಾಗೂ ಸಂಘದ ಇತರ ಸದಸ್ಯೆಯರು ಉಪಸ್ಥಿತರಿದ್ದರು.ಮಡಿಕೇರಿ, ನ. ೬ : ಕೃತಕ ಬುದ್ಧಿ ಮತ್ತೆ ಆಧೀನಕ್ಕೆ ನಮ್ಮ ಬುದ್ದಿಯನ್ನು ಕೊಟ್ಟು ಆ ಬುದ್ದಿ ಮತ್ತೆ ಸೃಷ್ಟಿಸುವ ಪದಗಳನ್ನು ನೈಜ ಭಾಷೆಯೆಂದು ಭಾವಿಸಿ ಮೂಲ ಭಾಷೆಯನ್ನು ಇಂದಿನ ಯುವ ಪೀಳಿಗೆ ಮರೆಯುತ್ತಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಹೆಚ್.ಟಿ. ಆತಂಕ ವ್ಯಕ್ತಪಡಿಸಿದ್ದಾರೆ.. ಮಡಿಕೇರಿಯ ಲಯನ್ಸ್ ಸಂಸ್ಥೆ ವತಿಯಿಂದ ಜರುಗಿದ ಕನ್ನಡ ರಾಜ್ಯೋತ್ಸವ ಮತ್ತು ಹಿರಿಯ ನಾಗರಿಕರಿಗೆ ಸನ್ಮಾನದ ಅಮೃತೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಈಗಿನ ಪರಿಸ್ಥಿತಿಯಲ್ಲಿ ಕೃತಕ ಬುದ್ಧಿ ಮತ್ತೆಯ ವ್ಯವಸ್ಥೆ ನಮಗೆ ಬುದ್ದಿ ಕಲಿಸು ವಂತಾಗಿದೆ. ಕನ್ನಡದಂತಹ ಸರಳ ಭಾಷೆ ಕೂಡ ಎ. ಐ. ಮಾಯಾಜಾಲಕ್ಕೆ ಸಿಲುಕಿ ತನ್ನ ನೈಜತೆ ಮತ್ತು ಆಹ್ಲಾದತೆಯನ್ನು ಕಳೆದುಕೊಳ್ಳತ್ತಿದೆ. ಹಲವಾರು ವರ್ಷಗಳಿಂದ ನಾವು ಬಳಸುತ್ತಿದ್ದ ಸುಂದರ ಭಾಷೆಯನ್ನು ಯಂತ್ರದ ಕೈಗೆ ನೀಡಿ ಅದು ಹೇಳಿದ್ದೆ ಸರಿ ಎಂಬ ಭ್ರಮೆಯಲ್ಲಿ ನಾವಿದ್ದೇವೆ ಎಂದು ಅನಿಲ್ ನುಡಿದರು. ನಿತ್ಯದ ಬಳಕೆಯಲ್ಲಿ ಕನ್ನಡವನ್ನೇ ಹೆಚ್ಚು ಬಳಸುವ ಮೂಲಕ, ಕನ್ನಡ ಪತ್ರಿಕೆಗಳನ್ನು ಹೆಚ್ಚು ತರಿಸಿ ಓದುವ ಮೂಲಕ, ಕನ್ನಡ ಸಾಹಿತ್ಯವನ್ನು ಪೋತ್ಸಾಹಿಸುವ ಮೂಲಕ ಕನ್ನಡ ಭಾಷೆಯನ್ನು ಪ್ರತಿಯೋರ್ವ ಕನ್ನಡಿಗನು ರಕ್ಷಿಸಲು ಸಾಧ್ಯ ಎಂದು ಅನಿಲ್ ಹೇಳಿದರು.

ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎಲ್. ಮೋಹನ್ ಕುಮಾರ್ ಮಾತನಾಡಿ ಸಮಾಜಕ್ಕೆ ಹಿರಿಯರು ನೀಡಿರುವ ಕೊಡುಗೆ ಮತ್ತು ಮಾರ್ಗದರ್ಶನ ಅಮೂಲ್ಯವಾಗಿದೆ. ಹಿರಿಯರ ಸೇವೆಯನ್ನು ಯಾರೋಬ್ಬರು ಮರೆಯದೆ ಅವರ ಸೇವೆಯನ್ನು ಸದಾ ಸ್ಮರಿಸಬೇಕೆಂದು ಹೇಳಿದರು.

ಕಮಲ ಮುರುಗೇಶ್ ಪ್ರಾರ್ಥಿಸಿ, ಪ್ರೇಮಾ ಕೋಟಿ ಧ್ವಜವಂದನೆ ನಿರ್ವಹಿಸಿ, ಸತೀಶ್ ರೈ ಲಯನ್ಸ್ ನ ನೀತಿ ಸಂಹಿತೆ ವಾಚಿಸಿದ ಕಾರ್ಯಕ್ರಮವನ್ನು ಕಾರ್ಯದರ್ಶಿ ಕೆ. ಮಧುಕರ್ ಕೆ.ಕೆ. ದಾಮೋದರ್, ಗೀತಾ ಮಧುಕರ್ ನಿರ್ವಹಿಸಿದರು. ಮಡಿಕೇರಿ ಲಯನ್ಸ್ ಸಂಸ್ಥೆಯ ಖಜಾಂಚಿ . ನವೀನ್ ಅಂಬೆಕಲ್ ವಂದಿಸಿದರು. ಲಯನ್ಸ್ ಸಂಸ್ಥೆಯ ವಲಯ ಅಧ್ಯಕ್ಷ ಮದನ್ ವೇದಿಕೆಯಲ್ಲಿ ಇದ್ದರು.

ಹಿರಿಯರಿಗೆ ಸನ್ಮಾನ : ೭೫ ವರ್ಷ ಪೂರೈಸಿರುವ ಲಯನ್ಸ್ ಸಂಸ್ಥೆಯಲ್ಲಿ ಸದಸ್ಯರಾಗಿ ಸಕ್ರಿಯರಾಗಿ ಕಾರ್ಯ ನಿರ್ವಹಿಸುತ್ತಿರುವ ಬಿ. ವಿ. ಮೋಹನ್ ದಾಸ್, ಪಿ. ಪಿ. ಸೋಮಣ್ಣ, ಎಸ್. ಬಿ. ಮುರುಗೇಶ್, ಮತ್ತು ಜೆ. ವಿ. ಕೋಟಿ ಅವರನ್ನು ಇದೇ ಸಂದರ್ಭದಲ್ಲಿ ಅಮೃತೋತ್ಸವ ಯೋಜನೆಯಡಿಯಲ್ಲಿ ಸನ್ಮಾನಿಸಲಾಯಿತು.