ನಾಪೋಕ್ಲು, ನ. ೬: ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಟ್ರಸ್ಟ್ ವತಿಯಿಂದ ಪವಿತ್ರ ರಾಜೇಶ್‌ಗೆ ಪ್ರತಿಷ್ಠಿತ ಯೋಗ ಜ್ಯೋತಿ ಪ್ರಶಸ್ತಿ-೨೦೨೬ ನೀಡಿ ಗೌರವಿಸಲಾಯಿತು.

ಬಲ್ಲಮಾವಟಿಯ ಎಡಿಕೇರಿಯವರಾದ ಪವಿತ್ರ ರಾಜೇಶ್ ಅವರು ಕಳೆದ ೯ ವರ್ಷಗಳಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನಿರಂತರವಾಗಿ ಉಚಿತ ಯೋಗ ತರಬೇತಿ ನೀಡುತ್ತಾ ಸಲ್ಲಿಸುತ್ತಿರುವ ವಿಶಿಷ್ಟ ಸೇವೆಯನ್ನು ಗುರುತಿಸಿ, ರೋಟರಿ ಬೆಂಗಳೂರು ಗ್ಲೋಬಲ್ ಯೋಗ ಟ್ರಸ್ಟ್ ವತಿಯಿಂದ ಪ್ರತಿಷ್ಠಿತ ಯೋಗ ಜ್ಯೋತಿ ಪ್ರಶಸ್ತಿ-೨೦೨೬ ನೀಡಿ ಗೌರವಿಸಲಾಗಿದೆ.

ಪವಿತ್ರ ಕೆ.ಬಿ. ಅವರು ಬಲ್ಲಮಾವಟಿ ಎಡಿಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಹಾಗೂ ಆಯುಷ್ ಇಲಾಖೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದಾರೆ. ವೃತ್ತಿಯ ಜೊತೆಗೆ ಸತತ ೯ ವರ್ಷಗಳಿಂದ ವಿದ್ಯಾರ್ಥಿಗಳಲ್ಲಿ ಯೋಗದ ಮಹತ್ವವನ್ನು ತಿಳಿಸಿಕೊಡುತ್ತಾ, ಅವರಲ್ಲಿ ಆರೋಗ್ಯ ಜಾಗೃತಿ ಮೂಡಿಸುವಲ್ಲಿ ಶ್ರಮಿಸುತ್ತಿದ್ದಾರೆ. ಅವರ ಈ ಬದ್ಧತೆ, ಜ್ಞಾನ, ಅನುಭವ, ಶಿಸ್ತು ಹಾಗೂ ನಿಸ್ವಾರ್ಥ ಸೇವಾ ಮನೋಭಾವನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರಶಸ್ತಿ ಪ್ರದಾನ ಹಾಗೂ ಅಭಿನಂದನಾ ಸಮಾರಂಭದಲ್ಲಿ ರೋಟರಿ ಗ್ಲೋಬಲ್ ಯೋಗದ ಸಂಸ್ಥಾಪಕ ಡಾ. ಯೋಗಿ ದೇವರಾಜ್ ಗುರೂಜಿ ಅವರು ಪವಿತ್ರಾ ರಾಜೇಶ್ ಅವರಿಗೆ ಪ್ರಶಸ್ತಿ ವಿತರಿಸಿ ಅವರ ಯೋಗ ಸೇವೆ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಹಾರೈಸಿದರು.