ಮಡಿಕೇರಿ, ನ. ೬: ಕೊಡಗು ಗೌಡ ಮಹಿಳಾ ಒಕ್ಕೂಟದಲ್ಲಿ ೨೭ ವರ್ಷಗಳಿಂದ ನಿರ್ದೇಶಕರಾಗಿ, ಉಪಾಧ್ಯಕ್ಷರಾಗಿ ಹಲವು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದ ಸಾಹಿತಿ ಬೈತಡ್ಕ ಜಾನಕಿ ಬೆಳ್ಯಪ್ಪ ಅವರನ್ನು ಅವರ ಸ್ವಗೃಹದಲ್ಲಿ ಒಕ್ಕೂಟದ ವತಿಯಿಂದ ಬೀಳ್ಕೊಡಲಾಯಿತು.
ಜಾನಕಿಯವರು ಅರೆಭಾಷೆ ಹಾಗೂ ಕನ್ನಡದಲ್ಲಿ ಹಲವು ಪುಸ್ತಕಗಳನ್ನು ಬರೆದಿದ್ದು ಅವರು ರಚಿಸಿದ ಸೋಬಾನೆ ಪುಸ್ತಕದ ಮೂಲಕ ಸೋಬಾನೆ ಪದಗಳು ಗೌಡ ಜನಾಂಗದಲ್ಲಿ ಇಂದಿಗೂ ಉಳಿಯುವಂತಾಗಿದೆ. ಕರ್ನಾಟಕ ಸರ್ಕಾರದಿಂದ ಕೊಡಲಾಗುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಯಲ್ಲದೆ ೧೦ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದು, ಎರಡು ಬಾರಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿರುವರು. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಗೌಡ ಮಹಿಳಾ ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು.
ಒಕ್ಕೂಟ ಅಧ್ಯಕ್ಷೆ ಅಮೆ ದಮಯಂತಿ, ನಿರ್ದೇಶಕರಾದ ಕೂಡಕಂಡಿ ಕಾವೇರಮ್ಮ, ಕುದುಪಜೆ ರೋಹಿಣಿ, ಬಾರನ ಶೋಭಾ, ಕೋಳಿಬೈಲು ಹರಿಣಿ, ಪೇರಿಯನ ಮುತ್ತಮ್ಮ, ನಾರೋಳನ ಭಾಗೀರಥಿ, ಕೇಕಡ ಇಂದುಮತಿ, ಮುದ್ಯನ ಜ್ಯೋತಿ, ಕರ್ಣಯ್ಯನ ಪದ್ಮಿನಿ, ಕಡ್ಲೆರಾ ಆಶಾ ಹಾಗೂ ಸುಳ್ಯಕೋಡಿ ಶಿವದೇವಿ, ಮೂಲೆಮಜಲು ಅಮಿತಾ, ಪರ್ಲಕೋಟಿ ಸೋನಾ ಹಾಜರಿದ್ದರು.