ಸೋಮವಾರಪೇಟೆ, ನ. ೬: ಮನುಷ್ಯನು ಇಂದು ತನ್ನ ಆಸೆ ಮತ್ತು ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ಮೇಲೆ ನಡೆಸುತ್ತಿರುವ ಹಸ್ತಕ್ಷೇಪದಿಂದ ಪರಿಸರ ಕಲುಷಿತಗೊಂಡು ಮಾಲಿನ್ಯಗೊಳ್ಳುತ್ತಿದೆ. ಈ ದಿಸೆಯಲ್ಲಿ ನಾವು ಪರಿಸರ ಮತ್ತು ಭೂಮಿಯ ಮೇಲೆ ಉಂಟಾಗುತ್ತಿರುವ ಮಾಲಿನ್ಯವನ್ನು ತಡೆಗಟ್ಟಿ ಉತ್ತಮ ಪರಿಸರ ನಿರ್ಮಾಣ ಮಾಡಬೇಕು ಎಂದು ಜಿಲ್ಲಾ ಪರಿಸರ ಜಾಗೃತಿ ಆಂದೋಲನದ ಜಿಲ್ಲಾ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಹೇಳಿದರು.
ತಾಲೂಕಿನ ಮಾದಾಪುರದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆಯ ವತಿಯಿಂದ ಮಾದಾಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆಯ ಚಿಗುರು ಇಕೋ ಕ್ಲಬ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ವಿಶೇಷ ಶಿಬಿರದಲ್ಲಿ ಪರಿಸರ ಸಂರಕ್ಷಣೆ ಮತ್ತು ಮಾಲಿನ್ಯ ತಡೆಗಟ್ಟುವುದು ಎಂಬ ವಿಷಯದ ಕುರಿತು ಏರ್ಪಡಿಸಿದ್ದ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ನಾವು ಮುಂದಿನ ಪೀಳಿಗೆಗಾಗಿ ಮಾಲಿನ್ಯ ತಡೆಗಟ್ಟಿ ಶುದ್ಧ ಹಾಗೂ ಸುರಕ್ಷಿತ ವಾತಾವರಣವನ್ನು ಒದಗಿಸುವ ಮೂಲಕ ಉತ್ತಮ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು. ನಾಳೆಯ ಉತ್ತಮ ಭವಿಷ್ಯಕ್ಕಾಗಿ ಸ್ವಚ್ಛ, ಹಸಿರು ಸುಂದರ ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರಕೃತಿಯು ನಮಗೆ ಅನಿವಾರ್ಯತೆ. ಅದು ನಮ್ಮ ಆಸ್ತಿಯಲ್ಲ. ಪ್ರಕೃತಿಯನ್ನು ನಾವು ರಕ್ಷಿಸಿದರೆ ಮಾತ್ರ ಪ್ರಕೃತಿ ನಮ್ಮನ್ನು ರಕ್ಷಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಪರಿಸರ ಸಂರಕ್ಷಣೆಗಾಗಿ ಸಣ್ಣ ಸಣ್ಣ ಹೆಜ್ಜೆಯಿಟ್ಟರೆ ನಾವು ದೊಡ್ಡ ಬದಲಾವಣೆಯನ್ನು ತರಲು ಸಾಧ್ಯ ಎಂದರು.
ದಿನನಿತ್ಯ ಮಾಲಿನ್ಯಕಾರಿ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ತ್ಯಜಿಸಿ ಪರಿಸರ ಸ್ನೇಹಿ ವಸ್ತುಗಳಾದ ಬಟ್ಟೆ, ಕಾಗದ ಅಥವಾ ಸೆಣಬಿನ ಕೈ ಚೀಲಗಳನ್ನು ಬಳಸುವ ಮೂಲಕ ಮಾಲಿನ್ಯ ತಡೆಗಟ್ಟಲು ಸಂಘಟಿತ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಎಂ. ಭರತ್ ಕುಮಾರ್, ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಎ. ನಾಚಪ್ಪ, ಶಿಬಿರಾಧಿಕಾರಿ ಎನ್.ಎನ್. ಮನೋಹರ್, ಉಪನ್ಯಾಸಕಿ ಪ್ರಫುಲ್ಲ, ಶಾಲಾ ಶಿಕ್ಷಕರಾದ ಪಿ.ಜೆ. ಗ್ರೇಸಿ, ಬಿ.ಎಸ್. ಅನಿತ, ಕೆ. ಭವಾನಿ, ಅನ್ವರ್ ಪಾಷ, ಸಬೀನ, ನೇತ್ರಾವತಿ, ಸಿಬ್ಬಂದಿ ಬಿ.ಎ. ಕಮಲ ಇತರರು ಇದ್ದರು. ಇದಕ್ಕೂ ಮುನ್ನ ಪರಿಸರ ಸಂರಕ್ಷಣೆ ಕುರಿತ ಭಿತ್ತಿಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸಿದರು.