ಚೆಯ್ಯಂಡಾಣೆ, ನ. ೬: ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ಪೋಸ್ಟ್ ಮಾಸ್ಟರ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಸತೀಶ್ ಕೆ.ಎಲ್. ಅವರನ್ನು ಅಂಚೆ ಇಲಾಖೆ ವತಿಯಿಂದ ಸನ್ಮಾನಿಸಿ, ಬೀಳ್ಕೊಡಲಾಯಿತು.
ಚೆಯ್ಯಂಡಾಣೆ ಅಂಚೆ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಡಿಕೇರಿ ಅಂಚೆ ಇಲಾಖೆಯ ಅಂಚೆ ನಿರೀಕ್ಷಕ ಶ್ರೀಧರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸತೀಶ್ ಅವರು ಅಂಚೆ ಇಲಾಖೆಯಲ್ಲಿ ೧೯ ವರ್ಷಗಳ ಕಾಲ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇದಕ್ಕೂ ಮೊದಲು ಭಾರತೀಯ ವಾಯುಪಡೆಯಲ್ಲಿ ೨೦ ವರ್ಷಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿಯ ನಂತರವೂ ಅಂಚೆ ಇಲಾಖೆಯಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿರು ವುದು ಶ್ಲಾಘನೀಯ. ಅವರ ನಿವೃತ್ತಿ ಜೀವನ ಸುಖ, ಶಾಂತಿ ಹಾಗೂ ಆರೋಗ್ಯದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಪೋಸ್ಟ್ ಮಾಸ್ಟರ್ ಸತೀಶ್, ಅಂಚೆ ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಅನುಭವಗಳನ್ನು ಹಂಚಿ ಕೊಂಡರು. ವಿಶೇಷವಾಗಿ ಕೊಡಗು ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸಿದ ದಿನಗಳ ಸ್ಮರಣೀಯ ಕ್ಷಣಗಳನ್ನು ಮೆಲುಕು ಹಾಕಿದರು. ಈ ಸಂದರ್ಭ ಇಲಾಖೆಯ ಮೇಲ್ವಿಚಾರಕ ಹರೀಶ್, ಅಂಚೆ ಸಹಾಯಕಿ ಮೀನಾಕ್ಷಿ ಹಾಗೂ ಅಂಚೆ ವಿತರಕ ಉತ್ತಪ್ಪ ಮಾತನಾಡಿ, ಸತೀಶ್ ಅವರ ಸೇವೆ ಮತ್ತು ಕರ್ತವ್ಯನಿಷ್ಠೆಯನ್ನು ಶ್ಲಾಘಿಸಿ, ನಿವೃತ್ತಿ ಜೀವನ ಸುಖಕರ ವಾಗಿರಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಚೆಯ್ಯಂಡಾಣೆ ಅಂಚೆ ಕಚೇರಿಯ ಸಿಬ್ಬಂದಿಗಳು ಹಾಗೂ ಚೆಯ್ಯಂಡಾಣೆ ವ್ಯಾಪ್ತಿಗೆ ಒಳಪಡುವ ವಿವಿಧ ಅಂಚೆ ಕಚೇರಿಗಳ ಸಿಬ್ಬಂದಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಹರೀಶ್ ಸ್ವಾಗತಿಸಿ, ವಂದಿಸಿದರು.