ಚೆಯ್ಯAಡಾಣೆ, ನ. ೬: ಕನ್ನಡ ರಾಜ್ಯೋತ್ಸವದ ಅಂಗವಾಗಿ ಚೆಯ್ಯಂಡಾಣೆ ರಾಜ್ಯೋತ್ಸವ ಕ್ರೀಡಾ ಸಮಿತಿಯ ವತಿಯಿಂದ ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿರುವ ರಾಜ್ಯೋತ್ಸವ ಕ್ರೀಡಾ ಸಂಭ್ರಮಕ್ಕೆ ಚಾಲನೆ ದೊರೆತಿದೆ.
ತಾ. ೮ ರವರೆಗೆ ನಡೆಯಲಿರುವ ಕ್ರೀಡಾಕೂಟವು ಚೆಯ್ಯಂಡಾಣೆ ಗ್ರಾಮದಲ್ಲಿ ಹಬ್ಬದ ಸಂಭ್ರಮ ಮನೆಮಾಡಿದೆ. ನರಿಯಂದಡ, ಕೋಕೇರಿ ಹಾಗೂ ಚೇಲಾವರ ಗ್ರಾಮಗಳ ತಂಡಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಕ್ರೀಡಾಸ್ಫೂರ್ತಿಯೊಂದಿಗೆ ಗೆಲುವಿಗಾಗಿ ಸೆಣಸಾಡುತ್ತಿವೆ.
ಚೆಯ್ಯಂಡಾಣೆ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಅಂಚು ಗೌತಮಿ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಕ್ರೀಡಾಕೂಟಕ್ಕೆ ಅಧಿಕೃತ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಇಂತಹ ಕ್ರೀಡಾಕೂಟಗಳು ಗ್ರಾಮೀಣ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಿದ್ದು, ಮೂರು ದಿನಗಳ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.
ರಾಜ್ಯೋತ್ಸವ ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಚೇನಂಡ ಸಂಪತ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕ್ರೀಡೆಯು ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಅತ್ಯಂತ ಮುಖ್ಯವಾಗಿದೆ. ೧೯೮೦ರಿಂದ ನಮ್ಮ ಹಿರಿಯರು ಆರಂಭಿಸಿದ ಈ ಕ್ರೀಡಾಕೂಟ ಇಂದಿಗೂ ನಿರಂತರವಾಗಿ ಮುಂದುವರಿಯುತ್ತಿರುವುದು ಹೆಮ್ಮೆಯ ವಿಚಾರ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕ್ರೀಡಾಕೂಟ ಮುಂದುವರಿಯಲು ಮೂರು ಗ್ರಾಮಗಳ ಜನರ ಬೆಂಬಲ ಹಾಗೂ ಸಹಕಾರ ಅಗತ್ಯ ಎಂದರು.
ಕ್ರೀಡಾಕೂಟದ ಮೊದಲ ದಿನ ಹಾಕಿ, ಥ್ರೋಬಾಲ್, ವಾಲಿಬಾಲ್, ಟೆನ್ನಿಕಾಯ್ಟ್ ಹಾಗೂ ಮಹಿಳೆಯರ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆದವು. ಮೂರು ಗ್ರಾಮಗಳ ತಂಡಗಳು ಸಮಬಲದ ಪೈಪೋಟಿ ನೀಡುವ ಮೂಲಕ ಕ್ರೀಡಾಭಿಮಾನಿಗಳ ಗಮನ ಸೆಳೆದವು.
ಹಾಕಿಯಲ್ಲಿ ಕೋಕೇರಿ ತಂಡಕ್ಕೆ ಪ್ರಶಸ್ತಿ
ನರಿಯಂದಡ ಹಾಗೂ ಕೋಕೇರಿ ತಂಡಗಳ ನಡುವಿನ ಮೊದಲ ಹಾಕಿ ಪಂದ್ಯಕ್ಕೆ ಚೇನಂಡ ಜೆಪ್ಪು ದೇವಯ್ಯ ಹಾಗೂ ಮಚ್ಚಂಡ ರಂಜು ಚಂಗಪ್ಪ ಅವರು ಸ್ಟಿಕ್ ಮೂಲಕ ಚೆಂಡನ್ನು ಚಲಾಯಿಸುವ ಮೂಲಕ ಚಾಲನೆ ನೀಡಿದರು. ಪಂದ್ಯದಲ್ಲಿ ಕೋಕೇರಿ ತಂಡವು ನರಿಯಂದಡ ತಂಡವನ್ನು ೪-೧ ಗೋಲುಗಳ ಅಂತರದಿAದ ಸೋಲಿಸಿ ಫೈನಲ್ ಪ್ರವೇಶಿಸಿತು.
ಫೈನಲ್ ಪಂದ್ಯದಲ್ಲಿ ಚೇಲಾವರ ತಂಡವನ್ನು ೩-೦ ಗೋಲುಗಳಿಂದ ಮಣಿಸಿದ ಕೋಕೇರಿ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಚೇಲಾವರ ತಂಡ ರನ್ನರ್ಸ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಇತರ ಸ್ಪರ್ಧೆಗಳ ಫಲಿತಾಂಶ
ಥ್ರೋಬಾಲ್ನಲ್ಲಿ ಚೇಲಾವರ ಹಾಗೂ ನರಿಯಂದಡ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿದ ಚೇಲಾವರ ತಂಡ ಫೈನಲ್ ಪ್ರವೇಶಿಸಿತು. ಫೈನಲ್ನಲ್ಲಿ ಕೋಕೇರಿ ತಂಡವನ್ನು ಎದುರಿಸಲಿದೆ.
ಪುರುಷರ ವಾಲಿಬಾಲ್ನಲ್ಲಿ ನರಿಯಂದಡ ತಂಡವು ಚೇಲಾವರ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿದ್ದು, ಪ್ರಶಸ್ತಿಗಾಗಿ ಕೋಕೇರಿ ತಂಡದ ವಿರುದ್ಧ ಸೆಣಸಾಡಲಿದೆ.
ಟೆನ್ನಿಕಾಯ್ಟ್ನಲ್ಲಿ ಕೋಕೇರಿ ತಂಡದ ವಿರುದ್ಧ ಜಯ ಸಾಧಿಸಿದ ಚೇಲಾವರ ತಂಡ ಫೈನಲ್ಗೆ ಅರ್ಹತೆ ಪಡೆದುಕೊಂಡಿತು. ಫೈನಲ್ನಲ್ಲಿ ನರಿಯಂದಡ ತಂಡವನ್ನು ಎದುರಿಸಲಿದೆ.
ಮಹಿಳೆಯರ ಹಗ್ಗಜಗ್ಗಾಟದಲ್ಲಿ ಕೋಕೇರಿ ಹಾಗೂ ನರಿಯಂದಡ ತಂಡಗಳ ನಡುವೆ ನಡೆದ ರೋಚಕ ಸ್ಪರ್ಧೆಯಲ್ಲಿ ಜಯಗಳಿಸಿದ ಕೋಕೇರಿ ತಂಡ ಫೈನಲ್ ಪ್ರವೇಶಿಸಿತು.
ಈ ಸಂದರ್ಭ ಚೇನಂಡ ಜೆಪ್ಪು ದೇವಯ್ಯ, ಮಚ್ಚಂಡ ರಂಜು ಚಂಗಪ್ಪ, ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ರಾಜ್ಯೋತ್ಸವ ಕ್ರೀಡಾ ಸಮಿತಿಯ ಅಧ್ಯಕ್ಷ ಚೇನಂಡ ಸಂಪತ್, ಉಪಾಧ್ಯಕ್ಷ ಚೆಯ್ಯಂಡ ನಂದ ನಾಚಪ್ಪ, ಕಾರ್ಯದರ್ಶಿ ಕುಟ್ಟನ ಸುನಿಲ್, ಕೋಶಾಧಿಕಾರಿ ಬಿದ್ದಂಡ ನಮೂ ಚೀಯಣ್ಣ, ಸಂಚಾಲಕ ಬೆಳಿಯಂಡ್ರ ಹರಿಪ್ರಸಾದ್, ಬಿದ್ದಂಡ ರಾಜೇಶ್ ಅಚ್ಚಯ್ಯ, ಚೆರುವಾಳಂಡ ಆಶಾ, ಶಿಕ್ಷಕಿ ಚೆಯ್ಯಂಡ ಲೀಲಾವತಿ, ಕ್ರೀಡಾಕೂಟ ಸಮಿತಿಯ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. - ಅಶ್ರಫ್