ಗೋಣಿಕೊಪ್ಪಲು. ನ. ೬: ಗೋಣಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ ೪ನೇ ವಾರ್ಡ್ ಬಳಿ ಇರುವ ಕೀರೆಹೊಳೆಗೆ ತಡೆಗೋಡೆ ನಿರ್ಮಾಣ ಕಾಮಗಾರಿಗೆ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್ ಪೊನ್ನಣ್ಣ ಭೂಮಿ ಪೂಜೆ ನೆರವೇರಿಸಿದರು.

೪ನೇ ವಿಭಾಗದಲ್ಲಿ ಕೀರೆಹೊಳೆಯ ನೀರು ಹೆಚ್ಚಾಗಿ ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗಿ ನಿವಾಸಿಗಳಿಗೆ ಹಾಗೂ ಮನೆಗಳಿಗೆ ತೊಂದರೆಯಾಗುತ್ತಿತ್ತು. ಈ ಹಿನ್ನಲೆಯಲ್ಲಿ ತುರ್ತಾಗಿ ಈ ಭಾಗದ ೭೫ ಮೀ ಉದ್ದಕ್ಕೆ ತಡೆಗೋಡೆ ನಿರ್ಮಾಣ ಮಾಡಲು ಗೋಣಿಕೊಪ್ಪ ಗ್ರಾ.ಪಂ ಮಾಜಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮನವಿ ಸಲ್ಲಿಸಿದ್ದರು.

ಮನವಿ ಹಿನ್ನಲೆಯಲ್ಲಿ ನೂತನ ಕಾಮಗಾರಿಗೆ ಶಾಸಕ ಪೊನ್ನಣ್ಣ ರೂ.೧ ಕೋಟಿ ಅನುದಾನ ಬಿಡುಗಡೆಗೊಳಿಸಿದ್ದರು. ಈ ನೂತನ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಶಾಸಕ ಪೊನ್ನಣ್ಣ, ಜನರ ಅಗತ್ಯಕ್ಕೆ ತಕ್ಕಂತೆ ತಡೆಗೋಡೆ ನಿರ್ಮಾಣಕ್ಕೆ ಅನುದಾನ ನೀಡಲಾಗಿದೆ. ಉತ್ತಮ ಗುಣಮಟ್ಟದಲ್ಲಿ ಕಾಮಗಾರಿ ನಡೆಸುವಂತೆ ಅಧಿಕಾರಿಗಳಿಗೆ ಹಾಗೂ ಗುತ್ತಿಗೆದಾರರಿಗೆ ಸೂಚನೆ ನೀಡಿದರು.

ಭೂಮಿಪೂಜೆ ಸಂದರ್ಭ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮಿದೇರಿರ ನವೀನ್, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಪ್ರಮೋದ್ ಗಣಪತಿ, ೪ನೇ ವಾರ್ಡ್ನ ಮಾಜಿ ಸದಸ್ಯ ಧ್ಯಾನ್ ಸುಬ್ಬಯ್ಯ, ಮಾಜಿ ಉಪಾಧ್ಯಕ್ಷೆ ಮಂಜುಳ, ಪಕ್ಷದ ಪ್ರಮುಖರುಗಳಾದ ವಿ.ಟಿ ವಾಸು, ಬಿ.ಎನ್ ಪ್ರಕಾಶ್, ನಾಯಂದಿರ ಶಿವಾಜಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಮೂಕಳೇರ ಆಶಾ ಪೂಣಚ್ಚ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್ ಪಂಕಜ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.