ಮಡಿಕೇರಿ, ನ.೬: ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪದಡಿ ೨೫ ಪ್ರಕರಣಗಳನ್ನು ಎದುರಿಸುತ್ತಿರುವ ಆರೋಪಿಯನ್ನು ಕೊಡಗು ಜಿಲ್ಲಾಡಳಿತ ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕಳುಹಿಸಿದೆ.

ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಕಕ್ಕಬ್ಬೆ ಸಮೀಪದ ನಾಲಡಿ ಗ್ರಾಮದ ನಿವಾಸಿ ಕೆ.ಸಿ. ಆಶೋಕ್ ಅಲಿಯಾಸ್ ಕುಡಿಯರ ಆಶೋಕ್ (೩೬) ಬಂಧಿತ ಆರೋಪಿ.

ಆಶೋಕ್ ವಿರುದ್ಧ ೨೦೧೪ರಿಂದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮನೆಗೆ ನುಗ್ಗಿ ಕಳವು ಹಾಗೂ ಸಾಮಾನ್ಯ ಕಳವು ಸೇರಿದಂತೆ ಒಟ್ಟು ೨೫ ಪ್ರಕರಣಗಳು ದಾಖಲಾಗಿದ್ದು, ಈ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿವೆ. ಅಲ್ಲದೆ, ೨೦೨೬ರಲ್ಲಿ ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ ೮೪/೨೦೨೬ರ ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆಯ ಕಲಂ ೩೩೧(೩), ೩೩೧(೪) ಹಾಗೂ ೩೦೫(೨)ರಂತೆ ಮತ್ತೊಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದನು.

ಆರೋಪಿಯು ರೂಢಿಗತ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ, ಜಾಮೀನಿನ ಮೇಲೆ ಬಿಡುಗಡೆಯಾದ ಬಳಿಕವೂ ಮತ್ತೆ ಅಪರಾಧ ಕೃತ್ಯಗಳಲ್ಲಿ ತೊಡಗುವ ಸಾಧ್ಯತೆಯನ್ನು ಪರಿಗಣಿಸಿ ಕರ್ನಾಟಕ ಕಳ್ಳಭಟ್ಟಿ ಸಾರಾಯಿ ವ್ಯವಹಾರÀ, ಮಾದಕ ವಸ್ತು ಅಪರಾಧಿಗಳು, ಜೂಜುಕೋರರ, ಗೂಂಡಾಗಳ, ಅನೈತಿಕ ವ್ಯವಹಾರಗಳ ಅಪರಾಧಗಳ ಮತ್ತು ಕೊಳಚೆ ಪ್ರದೇಶಗಳನ್ನು ಕಬಳಿಸುವವರ ಹಾಗೂ ವೀಡಿಯೋ ಅಥವಾ ಆಡಿಯೋ ಪೈರೇಟ್ಸ್ ಅಧಿನಿಯಮ ೧೯೮೫ರ ಕಲಂ ೩ರ ಉಪಕಲಂ (೧) ಮತ್ತು (೨)ರ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಈ ಸಂಬAಧ ಕೊಡಗು ಜಿಲ್ಲಾಧಿಕಾರಿ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಹಾಗೂ ಜಿಲ್ಲಾ ದಂಡಾಧಿಕಾರಿಗಳು ತಾ. ೨ರಂದು ಕೆ.ಸಿ. ಆಶೋಕ್‌ನನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಇರಿಸುವಂತೆ ಆದೇಶ ಹೊರಡಿಸಿದ್ದರು.

ಜಿಲ್ಲಾಧಿಕಾರಿಗಳ ಆದೇಶದಂತೆ ತಾ.೩ರಂದು ಆರೋಪಿಯನ್ನು ಗೂಂಡಾ ಕಾಯ್ದೆಯಡಿ ಬಂಧಿಸಿ ಬಳ್ಳಾರಿ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಲಾಗಿದೆ ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.