ಮಡಿಕೇರಿ, ನ. ೪: ಕನ್ನಡವೆಂಬುದು ಕೇವಲ ಸಂವಹನದ ಭಾಷೆಯಲ್ಲ, ಅದು ನಮ್ಮ ಅಸ್ಮಿತೆ, ಆತ್ಮಗೌರವ, ಸಂಸ್ಕೃತಿ, ಸಂಸ್ಕಾರ ಹಾಗೂ ಬದುಕಿನ ಜೀವನಾಡಿಯಾಗಿದೆ. ಕನ್ನಡವನ್ನು ಉಳಿಸುವುದು ಎಂದರೆ ನಮ್ಮ ನಾಡಿನ ಇತಿಹಾಸ, ಸಾಹಿತ್ಯ, ಜನಪದ, ಕಲೆ ಹಾಗೂ ಶ್ರೀಮಂತ ಪರಂಪರೆಯನ್ನು ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಅಧ್ಯಕ್ಷೆ ಈರಮಂಡ ಹರಿಣಿ ವಿಜಯ್ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ಮೂರ್ನಾಡು ಹೋಬಳಿ ಘಟಕದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕನ್ನಡಪರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡ ಭಾಷೆ ಮತ್ತು ಸಾಹಿತ್ಯದ ಉಳಿವು ಹಾಗೂ ಬೆಳವಣಿಗೆಯ ಉದ್ದೇಶದಿಂದ ಘಟಕದ ವತಿಯಿಂದ ಪ್ರತಿವರ್ಷ ಕನ್ನಡಪರ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಸಾರ್ವಜನಿಕರು ಹಾಗೂ ಸಂಘ-ಸAಸ್ಥೆಗಳ ಸಹಕಾರದೊಂದಿಗೆ ಅದ್ದೂರಿಯಾಗಿ ಕನ್ನಡ ರಾಜ್ಯೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಪರಿಷತ್ತಿನ ಪ್ರತಿಯೊಂದು ಕಾರ್ಯಕ್ರಮವೂ ಕೇವಲ ಪದಾಧಿಕಾರಿಗಳಿಗೆ ಸೀಮಿತವಾಗಿರದೆ ಇಡೀ ಹೋಬಳಿಯ ಕನ್ನಡಾಭಿಮಾನಿಗಳ ಕಾರ್ಯಕ್ರಮವಾಗಿದೆ ಎಂದರು.

ಪ್ರತಿಯೊಬ್ಬರೂ ಕನ್ನಡದ ಮೇಲಿನ ಪ್ರೀತಿ ಮತ್ತು ಅಭಿಮಾನದಿಂದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕನ್ನಡದ ಕೈಂಕರ್ಯಕ್ಕೆ ಕೈಜೋಡಿಸಬೇಕು ಎಂದರು. ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ ಅವರು ಧ್ವಜಾರೋಹಣ ನೆರವೇರಿಸುವ ಮೂಲಕ ಉದ್ಘಾಟಿಸಿ, ತಾಯಿ ಭುವನೇಶ್ವರಿಗೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

ಬೆಟ್ಟಗುಡ್ಡಗಳ ಸೌಂದರ್ಯ, ವೈವಿಧ್ಯಮಯ ಸಂಸ್ಕೃತಿ, ಸಾಹಿತ್ಯ ಮತ್ತು ಪರಂಪರೆಯನ್ನು ಹೊಂದಿರುವ ಕರ್ನಾಟಕದಲ್ಲಿ ಕನ್ನಡಕ್ಕೆ ವಿಶಿಷ್ಟ ಸ್ಥಾನವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯ ಬಳಕೆ ಹಾಗೂ ಒಲವು ಕಡಿಮೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಸಾಹಿತಿ ಕಿಗ್ಗಾಲು ಗಿರೀಶ್ ಮಾತನಾಡಿ, ಕನ್ನಡದ ಬಗ್ಗೆ ಮಾತನಾಡುವಾಗ ಪ್ರತಿಯೊಬ್ಬ ಕನ್ನಡಿಗನ ಎದೆಯಲ್ಲಿ ಅಭಿಮಾನದ ಬಡಿತ ಹೆಚ್ಚಾಗಬೇಕು. ಶ್ರೀಮಂತ ಇತಿಹಾಸ ಮತ್ತು ಸಾಹಿತ್ಯ ಪರಂಪರೆಯನ್ನು ಹೊಂದಿರುವ ಕನ್ನಡ ಭಾಷೆಯನ್ನು ಮಾತನಾಡಲು ಯಾರೂ ಹಿಂಜರಿಯಬಾರದು. ನಾವು ಯಾವುದೇ ಊರು, ನಗರ ಅಥವಾ ವಿದೇಶದಲ್ಲಿದ್ದರೂ ನಮ್ಮವರು ಒಂದೆಡೆ ಸೇರಿದಾಗ ಕನ್ನಡದಲ್ಲಿಯೇ ಸಂಭಾಷಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ಭಾಷೆಯನ್ನು ಕೇವಲ ಅಭಿಮಾನದಿಂದ ಹೊಗಳುವುದಷ್ಟೇ ಅಲ್ಲ, ನಿರಂತರವಾಗಿ ಬಳಸುವ ಮೂಲಕ ಉಳಿಸಿ ಬೆಳೆಸಬೇಕು ಎಂದು ತಿಳಿಸಿದರು.

ನಿವೃತ್ತ ಡಿವೈಎಸ್ಪಿ ಲಿಂಗಪ್ಪ ಮಾತನಾಡಿ, ಕನ್ನಡ ನಮ್ಮ ಕಲಿಕೆಯ ಮೂಲಭಾಷೆಯಾಗಿದೆ. ಮನೆಯಲ್ಲಿ ಬೇರೆ ಭಾಷೆಗಳನ್ನು ಮಾತನಾಡಬಹುದು, ಅನೇಕ ಭಾಷೆಗಳನ್ನು ಕಲಿಯಬಹುದು. ಆದರೆ ನಮ್ಮ ಅಕ್ಷರಜ್ಞಾನಕ್ಕೆ ಬುನಾದಿಯಾದ ಕನ್ನಡವನ್ನು ಎಂದಿಗೂ ಮರೆಯಬಾರದು. ತಾಯ್ನುಡಿಯ ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ನಿವೃತ್ತ ಪ್ರಾಂಶುಪಾಲೆ ದಂಬೆಕೋಡಿ ಸುಶೀಲ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಆಂಗ್ಲಭಾಷೆಯ ಜ್ಞಾನ ಅತ್ಯಗತ್ಯ. ವಿವಿಧ ಭಾಷೆಗಳನ್ನು ಕಲಿಯುವುದರಿಂದ ಜ್ಞಾನ ಮತ್ತು ವಿಚಾರವ್ಯಾಪ್ತಿ ಹೆಚ್ಚುತ್ತದೆ. ಆದರೆ ಇತರ ಭಾಷೆಗಳನ್ನು ಕಲಿಯುವ ಭರದಲ್ಲಿ ನಮ್ಮ ತಾಯ್ನುಡಿಯನ್ನು ಕಡೆಗಣಿಸಬಾರದು. ಕನ್ನಡ ನಮ್ಮ ಬದುಕಿನ ಭಾವನೆ, ಸಂಸ್ಕೃತಿ ಮತ್ತು ಅಸ್ಮಿತೆಯ ಭಾಗವಾಗಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ವ ಹಿಂದೂ ಪರಿಷತ್‌ನ ಪದಾಧಿಕಾರಿ ಮಹಾಭಲೇಶ್ವರ ಭಟ್ ಮಾತನಾಡಿ, ಕನ್ನಡವು ಪ್ರಾಚೀನ ಸಾಹಿತ್ಯ ಪರಂಪರೆ, ಶ್ರೀಮಂತ ಸಂಸ್ಕೃತಿ ಹಾಗೂ ವೈವಿಧ್ಯಮಯ ಅಭಿವ್ಯಕ್ತಿಯನ್ನು ಹೊಂದಿರುವ ಭಾಷೆಯಾಗಿದೆ. ಇಂತಹ ಭಾಷೆಯ ಬೆಳವಣಿಗೆಗೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಕನ್ನಡ ಭಾಷೆಯೊಂದಿಗೆ ನಾಡಿನ ಸಂಸ್ಕೃತಿ ಮತ್ತು ಪರಂಪರೆಯನ್ನೂ ಉಳಿಸಿ ಬೆಳೆಸುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದರು.

ತ್ರಿನೇತ್ರ ವಾಹನ ಮಾಲೀಕರು ಹಾಗೂ ಚಾಲಕರ ಸಂಘದ ಅಧ್ಯಕ್ಷ ಅಶ್ವಥ್ ರೈ ಮಾತನಾಡಿ, ಕನ್ನಡದ ಬೆಳವಣಿಗೆಗಾಗಿ ನಡೆಸುವ ಕಾರ್ಯಕ್ರಮಗಳಿಗೆ ಸದಾ ಬೆಂಬಲ ನೀಡುವುದಾಗಿ ತಿಳಿಸಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಕನ್ನಡಪರ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕನ್ನಡ ಸೇವೆ ಸಲ್ಲಿಸುತ್ತಿರುವ ಕನ್ನಡಾಭಿಮಾನಿಗಳಾದ ದಿನೇಶ್ ಪಗ್ಗೋಲಿ ಹಾಗೂ ಧ್ವಜಸ್ತಂಭ ದಾನಿ ಉದಯ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಖಜಾಂಚಿ ಸೂರಜ್ ತಿಮ್ಮಯ್ಯ, ಸಂಘಟನಾ ಕಾರ್ಯದರ್ಶಿ ಕೊಂಪುಳಿರ ಮಮತಾ, ಅಬ್ದುಲ್ ಖಾದರ್, ಸಹ ಕಾರ್ಯದರ್ಶಿ ಸುಚಿತ ಕಾವೇರಪ್ಪ, ಮಠದಮನೆ ಧನಂಜಯ, ಈರಮಂಡ ವಿಜಯ್, ಪದಾಧಿಕಾರಿಗಳಾದ ಭಾರತಿ, ಸಂಧ್ಯಾ, ಡೈಸಿ, ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷ ಚಾರಿಮಂಡ ಚಂಗಪ್ಪ, ಹಿಂದೂ ಮಲಯಾಳಿ ಸಂಘದ ಕಾರ್ಯದರ್ಶಿ ಸಜೀವ್, ಸದಸ್ಯರಾದ ಮಣಿ ಚಂಗಪ್ಪ, ಟೈಲರ್ ಅಸೋಸಿಯೇಷನ್‌ನ ಶೇಕ್ ಅಹ್ಮದ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಈರ ಸುಬ್ಬಯ್ಯ, ಸದಸ್ಯರಾದ ಜಯಂತಿ, ಜಸ್ಮಿ ಚಿಂತು ಸೇರಿದಂತೆ ಪರಿಷತ್ತಿನ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಉಪಸ್ಥಿತರಿದ್ದರು. ಪರಿಷತ್ತಿನ ಪದಾಧಿಕಾರಿಗಳು ನಾಡಗೀತೆ ಹಾಡಿದರು. ದಿನೇಶ್ ಪೆಗ್ಗುಲಿ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಕಟ್ಟೆಮನೆ ಮಹಾಲಕ್ಷಿö್ಮ ವಂದಿಸಿದರು. ಪುದಿಯೊಕ್ಕಡ ರಮ್ಯಾ ವಿಪನ್ ನಿರೂಪಿಸಿದರು.