ಕೋವರ್ಕೊಲ್ಲಿ ಇಂದ್ರೇಶ್
ಧಾರವಾಡ, ನ. ೩: ರಸ್ತೆ ವಿಸ್ತರಣೆಯಂತಹ ಸಾರ್ವಜನಿಕ ಕಾಮಗಾರಿಗಳಿಗಾಗಿ ಕಾನೂನುಬದ್ಧ ಭೂಸ್ವಾಧೀನ ಪ್ರಕ್ರಿಯೆ ನಡೆಸದೆ, ಪರಿಹಾರವನ್ನೂ ನೀಡದೆ ನಾಗರಿಕರ ಆಸ್ತಿಯನ್ನು ಕೆಡುವುದು ಅಥವಾ ತೆರವುಗೊಳಿಸುವುದು ಸಂವಿಧಾನದ ಅನುಚ್ಛೇದ ೩೦೦ಎ ಅಡಿಯ ಆಸ್ತಿ ಹಕ್ಕಿನ ಉಲ್ಲಂಘನೆ ಎಂದು ಹೈಕೋರ್ಟ್ ಹೇಳಿದೆ.
ಕೊಪ್ಪಳ ಜಿಲ್ಲೆಯ ಮಂಗಳೂರು ಗ್ರಾಮ ಪಂಚಾಯತ್ ಪಿಡಿಒ ಸಲ್ಲಿಸಿದ್ದ ಮೇಲ್ಮನವಿಯನ್ನು ಧಾರವಾಡ ಪೀಠದಲ್ಲಿ ವಜಾಗೊಳಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಹಾಗೂ ನ್ಯಾಯಮೂರ್ತಿ ಹೇಮಾ ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಈ ಪ್ರಕರಣದಲ್ಲಿ ಭೂಮಿಯ ಮಾಲೀಕರಿಗೆ ಪಂಚಾಯ್ತಿ ವತಿಯಿಂದ ಹಾಗೂ ಕಂದಾಯ ಇಲಾಖೆಯಿಂದ ನೀಡಲಾಗಿರುವ ಖಾತಾ ಪತ್ರ ಹಾಗೂ ಇತರ ದಾಖಲೆಗಳೂ ಇದ್ದವು. ತಾವು ೧೫೮೪ ಚದರ ಅಡಿಗಳಷ್ಟು ಜಾಗವನ್ನು ೧೫ ವರ್ಷಗಳ ಹಿಂದೆ ಬೇರೆಯವರಿಂದ ಖರೀದಿಸಿದ್ದಾಗಿ ಅರ್ಜಿದಾರರು ವಾದಿಸಿದ್ದರಲ್ಲದೆ ಕ್ರಯ ಪತ್ರದ ದಾಖಲೆಗಳನ್ನೂ ಒದಗಿಸಿದ್ದರು. ಆದರೆ ಗ್ರಾಮ ಪಂಚಾಯ್ತಿಯು ರಸ್ತೆಯ ಎರಡು ಅಡಿಗಳಷ್ಟು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಅಂಗಡಿ ಮಳಿಗೆ ನಿರ್ಮಿಸಿದ್ದಾರೆಂದು ಆರೋಪಿಸಿದಲ್ಲದೇ ಕೋರ್ಟಿನಲ್ಲಿ ಅಂತೆಯೇ ವಾದ ಮಂಡಿಸಿತ್ತು. ಆದರೆ ಅರ್ಜಿದಾರರ ಬಳಿ ಇದ್ದ ಮೂಲ ದಾಖಲಾತಿ ಪತ್ರಗಳನ್ನು ಪರಿಶೀಲಿಸಿದ ಪೀಠ, ಪಂಚಾಯಿತಿಯ ವಾದವನ್ನು ತಳ್ಳಿ ಹಾಕಿದೆ. ರಸ್ತೆಗೆ ಭೂಮಿ ಬೇಕಾಗಿದ್ದಲ್ಲಿ ಕಾನೂನು ರೀತಿ ಭೂ ಸ್ವಾಧೀನ ಪ್ರಕ್ರಿಯೆ ನಡೆಸಿ ಸೂಕ್ತ ಪರಿಹಾರ ನೀಡಿ ವಶಪಡಿಸಿಕೊಳ್ಳಬೇಕಿತ್ತು ಎಂದು ಹೇಳಿದೆ.
ಅಂಗಡಿ ತೆರವುಗೊಳಿಸಿದ ಪ್ರಕರಣದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಮಂಗಳೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಮೇಲ್ಮನವಿ ವಜಾಗೊಳಿಸಿದೆ. ಜೊತೆಗೆ, ಪಿಡಿಒಗೆ ೫೦ ಸಾವಿರ ರೂಪಾಯಿ ದಂಡ ವಿಧಿಸಿರುವ ನ್ಯಾಯಾಲಯ, ದಂಡದ ಮೊತ್ತವನ್ನು ಪಂಚಾಯತ್ ನಿಧಿಯಿಂದಲ್ಲ, ಪಿಡಿಒ ತನ್ನ ಸ್ವಂತ ಜೇಬಿನಿಂದ ನಾಲ್ಕು ವಾರಗಳಲ್ಲಿ ಸಂತ್ರಸ್ತರಿಗೆ ಪಾವತಿಸಬೇಕು ಎಂದು ನಿರ್ದೇಶಿಸಿದೆ. ಅಲ್ಲದೆ, ಕೆಡವಲಾದ ಆಸ್ತಿಯ ಭಾಗಕ್ಕೆ ಸಂಬAಧಿಸಿದAತೆ ಸ್ವಾಧೀನ ಪ್ರಕ್ರಿಯೆ ಆರಂಭಿಸಿ, ಪರಿಹಾರ ನಿರ್ಧರಿಸಿ ಪಾವತಿಸಬೇಕೆಂದು ಏಕ ಸದಸ್ಯಪೀಠ ನೀಡಿದ್ದ ಆದೇಶವನ್ನೂ ಎತ್ತಿಹಿಡಿದಿದೆ. ನ್ಯಾಯಾಲಯದ ಆದೇಶಗಳಿಗೆ ವಿರುದ್ಧವಾಗಿ ಆಸ್ತಿ ಕೆಡವಿರುವ ಪ್ರಕರಣದಲ್ಲಿ ಪರಿಹಾರ ಪಾವತಿಗೆ ನಿರ್ದೇಶಿಸುವುದರಿಂದ ಮಾತ್ರ ಸಂತ್ರಸ್ತರಿಗೆ ಸಂಪೂರ್ಣ ನ್ಯಾಯ ಸಂದAತೆ ಆಗುವುದಿಲ್ಲ. ಸ್ವಾಧೀನ ಪ್ರಕ್ರಿಯೆ ಆರಂಭಿಸದೆ ಅಥವಾ ಪರಿಹಾರ ನೀಡದೆ ವಸತಿ ಹಾಗೂ ವಾಣಿಜ್ಯ ಬಳಕೆಯ ಆಸ್ತಿಯನ್ನು ಕೆಡವಿರುವುದು ಸಂವಿಧಾನದ ೩೦೦ಎ ವಿಧಿಯ ಉಲ್ಲಂಘನೆಯಾಗಿದೆ ಎಂದು ವಿಭಾಗೀಯಪೀಠ ಅಭಿಪ್ರಾಯಪಟ್ಟಿದೆ.