ಮಡಿಕೇರಿ, ನ. ೨: ಜನರು ನಿತ್ಯ ಉಪಯೋಗಿಸುವ ಹಾಲಿನ ದರವನ್ನು ಹೆಚ್ಚಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ ನಿಲುವನ್ನು ಖಂಡಿಸಿ ಕೊಡಗು ಜಿಲ್ಲಾ ಬಿಜೆಪಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭ ರೈತ ಸಮುದಾಯಕ್ಕೆ ಬೆಂಬಲ ಬೆಲೆ ಸೇರಿದಂತೆ ಅಗತ್ಯ ನೆರವು ನೀಡುವುದಾಗಿ ಕಾಂಗ್ರೆಸ್ ಘೋಷಿಸಿತ್ತು. ಆದರೆ, ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರ ಹಾಲಿನ ಬೆಲೆ ಹೆಚ್ಚಿಸುವ ಮೂಲಕ ನೇರವಾಗಿ ಗ್ರಾಹಕರ ಜೇಬಿಗೆ ಕತ್ತರಿ ಹಾಕಿ, ಅಲ್ಲಿಂದ ಸಂಗ್ರಹಿಸಿದ ಹಣವನ್ನು ರೈತರಿಗೆ ಬೆಂಬಲ ಬೆಲೆಯಾಗಿ ನೀಡುತ್ತಿದೆ ಎಂದು ಆರೋಪಿಸಿದರು.
ರೈತ ಸಮುದಾಯಕ್ಕೆ ಬೆಂಬಲ ಬೆಲೆ ನೀಡುವುದಕ್ಕೆ ಬಿಜೆಪಿಯ ಯಾವುದೇ ಆಕ್ಷೇಪವಿಲ್ಲ. ಆದರೆ, ಗ್ರಾಹಕರ ಮೇಲೆ ನೇರವಾಗಿ ಹೊರೆ ಹಾಕಿ, ಅವರಿಂದ ಸಂಗ್ರಹವಾಗುವ ಹಣವನ್ನು ರೈತರಿಗೆ ಬೆಂಬಲ ಬೆಲೆಯಾಗಿ ನೀಡುವುದಕ್ಕೆ ನಮ್ಮ ವಿರೋಧವಿದೆ. ರೈತರಿಗೆ ನೀಡುವ ಬೆಂಬಲ ಬೆಲೆಯ ವೆಚ್ಚವನ್ನು ಸರ್ಕಾರವು ತಾನೇ ಭರಿಸಬೇಕು. ಗ್ರಾಹಕರಿಗೆ ಹೊರೆಯಾಗಿರುವ ಹಾಲಿನ ಬೆಲೆ ಏರಿಕೆಯನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು. ಹಾಲನ್ನು ಸಮಾಜದ ಎಲ್ಲ ವರ್ಗದ ಜನರು ಬಳಸುತ್ತಾರೆ. ಹಾಲಿನ ದರವನ್ನು ಒಂದೆರಡು ರೂಪಾಯಿ ಹೆಚ್ಚಿಸಿದ್ದರೆ ಆಕ್ಷೇಪವಿರಲಿಲ್ಲ. ಆದರೆ, ವಿವಿಧ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಮಾದರಿಯ ಹಾಲಿನ ಪ್ರತಿ ಲೀಟರ್ಗೆ ೬ ರಿಂದ ೧೪ ರೂಪಾಯಿವರೆಗೆ ದರ ಹೆಚ್ಚಿಸುವ ಮೂಲಕ ಜನಸಾಮಾನ್ಯರ ಮೇಲೆ ಆರ್ಥಿಕ ಹೊರೆ ಹೇರಲಾಗಿದೆ. ರೈತ ಸಮುದಾಯಕ್ಕೆ ಬೆಂಬಲ ಬೆಲೆ ನೀಡಲೂ ಸಾಧ್ಯವಾಗದ ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರ ಮೇಲೆ ಹೆಚ್ಚುವರಿ ಆರ್ಥಿಕ ಹೊರೆ ಹೇರುತ್ತಿದೆ ಎಂದು ಟೀಕಿಸಿದರು.
ಮುಂಗಾರು ವೈಫಲ್ಯದಿಂದ ರಾಜ್ಯದಾದ್ಯಂತ ಬರಗಾಲದ ಛಾಯೆ ಮೂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಜನರ ನೆರವಿಗೆ ಧಾವಿಸಬೇಕಾದ ಸರ್ಕಾರ ಬರ ಪರಿಸ್ಥಿತಿಯ ಪರಿಶೀಲನೆಯ ಹೆಸರಿನಲ್ಲಿ ಪ್ರವಾಸದ ಪ್ರಹಸನ ನಡೆಸುತ್ತಿದೆಯೇ ಹೊರತು, ಜನರಿಗೆ ಯಾವುದೇ ಗಮನಾರ್ಹ ನೆರವು ನೀಡುತ್ತಿಲ್ಲ ಎಂದು ಆರೋಪಿಸಿದರು.
ಖಂಡನೆ : ಕೊಡಗಿನ ಹಿರಿಯ ರಂಗಕರ್ಮಿ ಅಡ್ಡಂಡ ಕಾರ್ಯಪ್ಪ ಅವರು ಬೆಂಗಳೂರಿನಲ್ಲಿ ನಾಟಕ ಪ್ರದರ್ಶನಕ್ಕೆ ಮುಂದಾದ ಸಂದರ್ಭದಲ್ಲಿ ಸರ್ಕಾರಿ ವಾಹನದಲ್ಲಿ ಬಂದ ಕೆಲವರು ಅವರಿಗೆ ಮಸಿ ಬಳಿದು ಅವಮಾನ ಮಾಡಿದ್ದಾರೆ. ಇದು ಕಾಂಗ್ರೆಸ್ ಪ್ರೇರಿತ ಕೃತ್ಯವಾಗಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಆರ್ಥಿಕವಾಗಿ ದಿವಾಳಿಯಾಗಿರುವ ಕರ್ನಾಟಕ ಸರ್ಕಾರ ಎಲ್ಲ ಕ್ಷೇತ್ರಗಳಲ್ಲಿಯೂ ಸಂಪೂರ್ಣ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಷ್ಟçಪತಿ ಆಡಳಿತ ಹೇರಬೇಕೆಂಬ ಬೇಡಿಕೆಯನ್ನು ಪ್ರತಿಭಟನೆಯ ಮೂಲಕ ಮುಂದಿಡಲಾಗುತ್ತಿದೆ ಎಂದು ಹೇಳಿದರು.
ಇದೇ ಸಂದರ್ಭ ಅಪರ ಜಿಲ್ಲಾಧಿಕಾರಿ ಜಯಲಕ್ಷಿö್ಮ ರಾಯಕೋಡ ಅವರ ಮೂಲಕ ರಾಷ್ಟçಪತಿಗಳಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಪಕ್ಷದ ಪ್ರಮುಖರಾದ ಸುನಿಲ್ ಸುಬ್ರಮಣಿ, ಶಾಂತೆಯAಡ ರವಿ ಕುಶಾಲಪ್ಪ, ಪಿ. ಕಲಾವತಿ, ಯಮುನಾ ಚಂಗಪ್ಪ, ಎಡಿಕೇರಿ ಪ್ರಸನ್ನ, ಮಹೇಶ್ ಜೈನಿ, ಉಮೇಶ್ ಸುಬ್ರಮಣಿ, ಬಿ.ಕೆ. ಅರುಣ್ ಕುಮಾರ್, ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ಪೂವಯ್ಯ, ಪಾಂಡಿರ ಪೂಣಚ್ಚ, ಕನ್ನಂಡ ಸಂಪತ್, ಪಿ.ಎಂ. ರವಿ, ಬಿ.ಕೆ. ಜಗದೀಶ್, ಡೀನ್ ಬೋಪಣ್ಣ, ಸಜಿಲ್ ಕೃಷ್ಣನ್, ಬಿ.ಪಿ. ಡಿಶು, ಸುವಿನ್ ಗಣಪತಿ, ಜಿ.ಎಂ. ಸತೀಶ್ ಪೈ, ಉಮಾ ಪ್ರಭು, ಮನು ಮಹೇಶ್, ಕುಟ್ಟಂಡ ಅಜಿತ್, ಸಬಿತಾ, ಮಂಜುಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.