ಸೋಮವಾರಪೇಟೆ,ನ.೨: ರೈತ ಪರ ಹೋರಾಟಗಳನ್ನು ಹತ್ತಿಕ್ಕುವ ಉದ್ದೇಶದಿಂದ ರೈತ ಹೋರಾಟ ಸಮಿತಿ ಅಧ್ಯಕ್ಷರ ಮನೆ ಮೇಲೆ ಅರಣ್ಯ ಇಲಾಖೆಯವರು ಸುಖಾಸುಮ್ಮನೆ ದಾಳಿ ನಡೆಸಿ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ನೂರಾರು ರೈತರು ಸೋಮವಾರಪೇಟೆ ವಲಯ ಅರಣ್ಯಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್ ಅವರ ಮನೆ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ಅಕ್ರಮವಾಗಿ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಭಾಗಿಯಾದ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಅಗ್ರಹಿಸಿ ರೈತ ಹೋರಾಟ ಸಮಿತಿ ಹಾಗೂ ತಾಲೂಕು ರೈತ ಸಂಘದ ನೇತೃತ್ವದಲ್ಲಿ ನೂರಾರು ರೈತರು ಕಚೇರಿ ಎದುರು ಧರಣಿ ಆರಂಭಿಸಿದರು.
ದಾಳಿ ಮಾಡಲು ಆದೇಶ ನೀಡಿದವರು ಇಲ್ಲಿಗೆ ಬರಬೇಕು. ಅಲ್ಲಿಯವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಸ್ಥಳಕ್ಕೆ ಬರುವುದು ತಡವಾದ್ದರಿಂದ ರೈತರ ಆಕ್ರೋಶದ ಕಟ್ಟೆಯೊಡೆಯಿತು. ಕಚೇರಿ ದ್ವಾರಕ್ಕೆ ಪೊಲೀಸರು ಅಡ್ಡಲಾಗಿ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಕಿತ್ತು ಕಚೇರಿ ಒಳಗೆ ನುಗ್ಗಲು ರೈತರು ಯತ್ನಿಸಿದರು. ಈ ಸಂದರ್ಭ ರೈತರು ಮತ್ತು ಪೊಲೀಸರು - ಅರಣ್ಯ ಅಧಿಕಾರಿಗಳ ಜೊತೆ ವಾಗ್ವಾದ ನಡೆಯಿತು. ಪೊಲೀಸರು ಎಷ್ಟೇ ಮನವೊಲಿಸಿದರೂ ಪ್ರಯೋಜನವಾಗಲಿಲ್ಲ.
ನಂತರ ಮನೆ ಮೇಲೆ ದಾಳಿ ಮಾಡಿದ ಅರಣ್ಯ ಇಲಾಖೆಯ ಅಧಿಕಾರಿ ಪೂಜಾಶ್ರೀ ಸ್ಥಳಕ್ಕೆ ಆಗಮಿಸಿದಾಗ ರೈತರು ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕಾನೂನಿನ ಅಡಿಯಲ್ಲಿ ನೀವು ಕಾರ್ಯಾಚರಣೆ ಮಾಡಿಲ್ಲ; ಸಮವಸ್ತ್ರಗಳಿಲ್ಲದೇ ಕೆಲವು ಗೂಂಡಾಗಳನ್ನು ಕರೆದುಕೊಂಡು ಬಂದು ಮನೆಯವರಿಗೆ ಬೆದರಿಕೆ ಹಾಕಿದ್ದೀರ ಎಂದು ರೈತರು ತರಾಟೆಗೆತ್ತಿಕೊಂಡರು. ಅಧಿಕಾರಿ ಸಮಜಾಯಿಷಿಕೆ ನೀಡಲು ಪ್ರಯತ್ನಿಸಿದಾಗ ರೈತರು ಮತ್ತಷ್ಟು ಕೆರಳಿದರಲ್ಲದೆ, ಕಾನೂನು ಬಾಹಿರ ದಾಳಿ ಮಾಡಿದ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭ ಇಲಾಖೆಯ ವಿರುದ್ಧ ಆಕ್ರೋಶಭರಿತ ಘೋಷಣೆ ಕೂಗಿದ್ದರಿಂದ ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭ ಮಾತನಾಡಿದ ರೈತ ಹೋರಾಟ ಸಮಿತಿ ಅಧ್ಯಕ್ಷ ಚಕ್ರವರ್ತಿ ಸುರೇಶ್,
ತಾನು ಮನೆಯಲ್ಲಿ ಇಲ್ಲದ ಸಂದರ್ಭ ಯಾವುದೇ ನೋಟೀಸ್ ನೀಡದೆ ಮನೆಗೆ ಆಗಮಿಸಿರುವ ಅಧಿಕಾರಿ ಹಾಗೂ ಸಿಬ್ಬಂದಿಗಳು ನನ್ನ ಪತ್ನಿ ಹಾಗೂ ಮಗನಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದರು. ಮನೆಯಲ್ಲಿ ತೇಗದ ಮರ ಇದೆ ಎಂದು ಸುಳ್ಳು ಹೇಳಿ ಶೋಧ ನಡೆಸಿದ್ದಾರೆ. ಅಧಿಕಾರಿಗಳೇ ಜಿಂಕೆ ಕೊಂಬು ಅಥವಾ ಹುಲಿ ಉಗುರು ತಂದು ನನ್ನ ಮನೆಯಲ್ಲಿ ಇಟ್ಟು ಬಂಧಿಸುವ ಸಂಚು ರೂಪಿಸಿದ್ದರು. ಆದರೆ ಮನೆಯಲ್ಲಿ ಸಿಸಿ ಕ್ಯಾಮೆರಾ ಇರುವುದರಿಂದ ಕುತಂತ್ರ ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ರೈತರನ್ನು ಕಾಡುತ್ತಿರುವ ಸಿ ಮತ್ತು ಡಿ ಲ್ಯಾಂಡ್ ಸಮಸ್ಯೆ, ಸೆಕ್ಷನ್-೪, ಕಸ್ತೂರಿ ರಂಗನ್ ವರದಿ ವಿರುದ್ಧ ಕೊಡಗು ಜಿಲ್ಲೆಯ ೨೯೬ ಗ್ರಾಮಗಳ ಒಳಿತಿಗಾಗಿ, ರೈತರ ಭೂಮಿ ಉಳಿಸಲು ಹೋರಾಟ ಮಾಡುತ್ತಿದ್ದೇವೆ. ಹೋರಾಟವನ್ನು ಹತ್ತಿಕ್ಕಲು ಈ ದಾಳಿ ನಡೆದಿದೆ. ಹೋರಾಟ ಮಾಡುವವರನ್ನು ಮುಗಿಸಿದರೆ ಹೋರಾಟ ನಿಲ್ಲುತ್ತದೆ ಎಂಬ ದುರುದ್ದೇಶವನ್ನು ಇಲಾಖೆ ಹೊಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ರೈತ ಸಂಘದ ಅಧ್ಯಕ್ಷ ಕೆ.ಎಂ. ದಿನೇಶ್ ಮಾತನಾಡಿ, ದಾಳಿ ನಡೆಸಲು ಆದೇಶ ಮಾಡಿದ್ದು ಯಾರು? ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ರೈತರನ್ನು ದುರ್ಬಲಗೊಳಿಸುವ ಯತ್ನ ಮುಂದುವರೆದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾನೂನು ಸಲಹೆಗಾರ ಬಿ.ಜೆ. ದೀಪಕ್ ಮಾತನಾಡಿ, ರೈತ ಸುರೇಶ ಮನೆ ಮೇಲೆ ಅರಣ್ಯ ಇಲಾಖೆ ನಡೆಸಿದ ದಾಳಿ ಸಂಪೂರ್ಣ ಅಕ್ರಮ ಹಾಗೂ ಕಾನೂನು ಬಾಹಿರವಾಗಿದೆ. ಯಾವುದೇ ಸರ್ಚ್ ವಾರಂಟ್ ಇಲ್ಲದೆ ಮಹಿಳೆಯರು ಇದ್ದ ಮನೆಗೆ ನುಗ್ಗುವುದು ಕಾನೂನುಬಾಹಿರ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಆರ್.ಎಫ್.ಓ. ಮತ್ತು ಡಿ.ಎಫ್.ಓ. ಸ್ಥಳಕ್ಕೆ ಅಗಮಿಸಿ ಉತ್ತರಿಸಬೇಕು. ಮೇಲಧಿಕಾರಿಗಳು ಬರುವವರೆಗೆ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟುಹಿಡಿದು ಧರಣಿ ಮುಂದುವರೆಸಿದರು.
ಡಿಸಿಎಫ್ ಅವರನ್ನು ಸ್ಥಳಕ್ಕೆ ಕರೆಸುವಂತೆ ರೈತರು ಆಗ್ರಹಿಸಿದರು. ಈ ಸಂದರ್ಭ ದೂರವಾಣಿ ಮೂಲಕ ರೈತರೊಂದಿಗೆ ಮಾತನಾಡಿದ ಡಿಸಿಎಫ್, ಒಂದು ವಾರದೊಳಗೆ ಮನೆ ಮೇಲೆ ದಾಳಿ ಮಾಡಿದ ಅಧಿಕಾರಿಗಳ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಒಪ್ಪಿದ ರೈತ ಸಂಘಟನೆಗಳು, ಮುಂದಿನ ಸೋಮವಾರದೊಳಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮವಾಗದಿದ್ದರೆ ಮತ್ತೆ ಅರಣ್ಯ ಕಚೇರಿ ಮುಂಭಾಗ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿ, ಪ್ರತಿಭಟನೆಯನ್ನು ಮೊಟಕುಗೊಳಿಸಲಾಯಿತು.
ಈ ಸಂದರ್ಭ ರೈತ ಹೋರಾಟ ಸಮಿತಿ ಕಾರ್ಯದರ್ಶಿ ದಿವಾಕರ್ ಕೂತಿ, ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ಹೂವಯ್ಯ ಮಾಸ್ಟರ್, ಪ್ರಮುಖರಾದ ಕೆ.ಎಂ. ಲೋಕೇಶ್, ಪ್ರಕಾಶ್ ಕಲ್ಕಂದೂರು, ಮಿಥುನ್ ಹರಗ, ಎಸ್.ಬಿ. ಭರತ್ ಕುಮಾರ್, ತ್ರಿಶೂಲ್, ಬಸವರಾಜ್, ಅದರ್ಶ್ ತಮ್ಮಯ್ಯ, ಬಿ.ಎ. ಧರ್ಮಪ್ಪ, ಕೆ.ಟಿ. ರಾಜಶೇಖರ್, ಬೋಜೇಗೌಡ, ಸುನೀಲ್, ಬಗ್ಗನ ಅನಿಲ್, ಹಾನಗಲ್ ಮಿಥುನ್, ಹೊಸಬೀಡು ಪವನ್ ಸೇರಿದಂತೆ ನೂರಾರು ರೈತರು ಇದ್ದರು.
ಸೋಮವಾರಪೇಟೆ ವೃತ್ತ ನಿರೀಕ್ಷಕ ಮುದ್ದು ಮಹದೇವ ನೇತೃತ್ವದಲ್ಲಿ ೪೦ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ಕಲ್ಪಿಸಿದ್ದರು.