ನಾಪೋಕ್ಲು, ನ. ೨: ಐತಿಹಾಸಿಕ ಹಾಗೂ ಪ್ರಸಿದ್ಧ ಪಾಡಿ ಶ್ರೀ ಇಗ್ಗುತಪ್ಪ ದೇವಸ್ಥಾನದಲ್ಲಿ ಕೊಡಗಿನ ಪ್ರಮುಖ ಹಬ್ಬವಾದ ‘ಪುತ್ತರಿ ನಮ್ಮೆ'ಯ ದಿನ, ಶುಭ ಮುಹೂರ್ತ ಹಾಗೂ ಘಳಿಗೆ ನಿಗದಿಪಡಿಸುವ ಕಾರ್ಯಕ್ರಮ ಮತ್ತು ‘ದೇಶಕಟ್ಟು' ಆಚರಣೆಯು ತಾ. ೯ ರಂದು ನಡೆಯಲಿದೆ ಎಂದು ದೇವಸ್ಥಾನದ ದೇವತಕ್ಕರಾದ ಪರದಂಡ ಕುಟುಂಬಸ್ಥರು ತಿಳಿಸಿದ್ದಾರೆ.

ಪ್ರಾಚೀನ ಸಂಪ್ರದಾಯದAತೆ ತಾ. ೯ ರಂದು ಬೆಳಿಗ್ಗೆ ೧೦.೩೦ಕ್ಕೆ ದೇವಸ್ಥಾನದ ಪರಂಪರಾಗತ "ಪತ್ತೆಪರೆ"ಯಲ್ಲಿ ವಿಶೇಷ ಸಭೆ ನಡೆಯಲಿದೆ. ದೇವತಕ್ಕರು, ತಕ್ಕಮುಖ್ಯಸ್ಥರು, ನಾಡುತಕ್ಕರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ದೇವಸ್ಥಾನದ ಜ್ಯೋತಿಷ್ಯಗಳಾದ ಅಮ್ಮಂಗೇರಿ ಕಣಿಯರು ಪುತ್ತರಿ ಹಬ್ಬದ ದಿನಾಂಕ ಹಾಗೂ ಕದಿರು ತೆಗೆಯುವ ಶುಭ ಘಳಿಗೆಯನ್ನು ನಿಗದಿಗೊಳಿಸಲಿದ್ದಾರೆ.

ಮಲ್ಮದಲ್ಲಿ ‘ದೇಶಕಟ್ಟು' ಜಾರಿ

ಅಂದೇ ಮಧ್ಯಾಹ್ನದ ನಿತ್ಯ ಪೂಜೆಯ ನಂತರ ಅಪರಾಹ್ನ ಆದಿಸ್ಥಾನ ಮಲ್ಮದಲ್ಲಿ ಸಾಂಪ್ರದಾಯಿಕ "ದೇಶಕಟ್ಟು" ಜಾರಿಯಾಗಲಿದೆ. ಅಮಾವಾಸ್ಯೆಯಂದು "ವಿಶಾಖ" ನಕ್ಷತ್ರದಲ್ಲಿ ಆರಂಭವಾಗುವ ಈ ದೇಶಕಟ್ಟು, ತಾ. ೨೪ರ ಮುಸ್ಸಂಜೆ "ಬಿರ್ಚ್ಯಾರ್ ಕಲ್ಲಾಡ್ಚ ನಮ್ಮೆ" ಸಂಪನ್ನವಾಗುವವರೆಗೆ ಜಾರಿಯಲ್ಲಿರುತ್ತದೆ.

ತಾ. ೨೪ ರಂದು ಮಲ್ಮ ಬೆಟ್ಟದಲ್ಲಿ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಪಾಡಿ, ನೆಲಜಿ ಹಾಗೂ ಪೇರೂರು ಗ್ರಾಮಗಳ ವಿವಿಧ ತಕ್ಕಮುಖ್ಯಸ್ಥರು ಆಗಮಿಸಿ ‘ಎತ್ತುಪೊರಾಟ'ದೊಂದಿಗೆ ಭಕ್ತರು ಆದಿಸ್ಥಾನ ಮಲ್ಮದಲ್ಲಿ ಒಟ್ಟುಗೂಡಲಿದ್ದಾರೆ.

ಮಲ್ಮದ ದೇವನೆಲೆಯ ಪ್ರದಕ್ಷಿಣೆ, ಸಣ್ಣಕ್ಕಿ ನೈವೇದ್ಯ ಅರ್ಪಣೆ ಹಾಗೂ ಮೂರೂ ದೇವಳಕ್ಕೆ ಸಂಬAಧಿಸಿದ ಜೋಡೆತ್ತು ಗಳೊಂದಿಗೆ ತಂದ ಧಾನ್ಯದ ರಾಶಿಯನ್ನು ("ಪೋರ್") ಒಟ್ಟಿಗೆ ಸುರಿದು, ಸಂಜೆ ವೇಳೆಗೆ ದೇವತಕ್ಕರು ಅದನ್ನು ಇಬ್ಭಾಗ ಮಾಡುವ "ಪೋರ್ ಮುರಿಪ" ಧಾರ್ಮಿಕ ವಿಧಿಯೊಂದಿಗೆ ‘ದೇಶಕಟ್ಟು' ಮುಕ್ತಾಯಗೊಳ್ಳಲಿದೆ.

ಕಟ್ಟುಪಾಡುಗಳು ಮತ್ತು ವೈಶಿಷ್ಟö್ಯತೆ

ಕೊಡವ ಸಂಪ್ರದಾಯದAತೆ ದೇಶಕಟ್ಟು ಜಾರಿಯಲ್ಲಿರುವ ಅವಧಿಯಲ್ಲಿ ದೇವತಕ್ಕರು ವಿಧಿಸುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಈ ಸಮಯದಲ್ಲಿ ಮದುವೆ, ನಿಶ್ಚಿತಾರ್ಥ, ನಾಮಕರಣದಂತಹ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಯಾವುದೇ ಆಡಂಬರದ ಶುಭ ಸಮಾರಂಭಗಳನ್ನು ನಡೆಸುವಂತಿಲ್ಲ. ಪ್ರಾಣಿ ಹಿಂಸೆ ಹಾಗೂ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಅಮಾವಾಸ್ಯೆಯಿಂದ ಆರಂಭವಾಗಿ ಚಂದ್ರನ ಪಥಕ್ಕೆ ಅನುಗುಣವಾಗಿ ವೃದ್ಧಿಯಾಗುತ್ತಾ, ಹುಣ್ಣಿಮೆ ಅಥವಾ ಹುಣ್ಣಿಮೆಯ ಮುನ್ನಾದಿನ ಮುಕ್ತಾಯಗೊಳ್ಳುವ ಈ ಕಟ್ಟುಪಾಡುಗಳು ನಾಡಿನ ವೃದ್ಧಿ ಮತ್ತು ಸಮೃದ್ಧಿಯ ಸಂಕೇತವಾಗಿವೆ. ಧಾನ್ಯಲಕ್ಷಿö್ಮಯನ್ನು ಮನೆಗೆ ಬರಮಾಡಿಕೊಳ್ಳುವ ಸಂಭ್ರಮದ ‘ಪುತ್ತರಿ'ಗೆ ಇದು ನಾಂದಿ ಹಾಡುತ್ತದೆ.

ಕೊಡಗಿನ ಸಮಸ್ತ ಭಕ್ತಾದಿಗಳು ಈ ಪ್ರಾಚೀನ ದೇಶಕಟ್ಟಿನ ನಿಯಮಗಳಿಗೆ ಮನ್ನಣೆ ನೀಡಿ ಸಹಕರಿಸಬೇಕಾಗಿ ಪಾಡಿ ದೇವನೆಲೆಯ ದೇವತಕ್ಕರಾದ ಪರದಂಡ ಕುಟುಂಬಸ್ಥರು ವಿನಂತಿಸಿಕೊAಡಿದ್ದಾರೆ.

- ದುಗ್ಗಳ ಸದಾನಂದ.