ಪೊನ್ನಂಪೇಟೆ, ನ. ೧ : ಪಟ್ಟಣದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆ ಹಾಗೂ ಅಸಮರ್ಪಕ ಪಾರ್ಕಿಂಗ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪೊನ್ನಂಪೇಟೆ ಠಾಣಾಧಿಕಾರಿ ಅನ್ನಪೂರ್ಣ ಎಸ್.ಎಸ್. ತಿಳಿಸಿದರು.

ಪೊನ್ನಂಪೇಟೆಯ ಶ್ರೀ ನಂದೀಶ್ವರ ಆಟೋ ಚಾಲಕರು ಮತ್ತು ಮಾಲೀಕರ ಸಂಘ ಹಾಗೂ ಸ್ಥಳೀಯ ಪೊಲೀಸ್ ಠಾಣೆಯ ಸಹಯೋಗದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಅವರು ಮಾತನಾಡಿ, ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ಅಳವಡಿಸುವ ಕುರಿತು ಚರ್ಚೆ ನಡೆಸಲಾಗುತ್ತಿದ್ದು, ವಾಹನ ದಟ್ಟಣೆ ಹಾಗೂ ಪಾರ್ಕಿಂಗ್ ಸಮಸ್ಯೆಗಳನ್ನು ಶೀಘ್ರದಲ್ಲೇ ಸರಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಆಟೋ ಚಾಲಕರು ತಮ್ಮ ಚಾಲನಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಸಮರ್ಪಕವಾಗಿ ಹೊಂದಿರಬೇಕು ಎಂದು ಸೂಚಿಸಿದ ಅವರು, ಪಟ್ಟಣದಲ್ಲಿ ಯಾವುದೇ ಅಕ್ರಮ ಚಟುವಟಿಕೆಗಳು ಕಂಡುಬAದಲ್ಲಿ ತಕ್ಷಣ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು.

ಸಮಾಜಘಾತುಕ ಶಕ್ತಿಗಳ ಚಟುವಟಿಕೆಗಳನ್ನು ನಿಯಂತ್ರಿಸಲು ಪೊಲೀಸರೊಂದಿಗೆ ಸಹಕರಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡಲು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭ ಸಂಘದ ಉಪಾಧ್ಯಕ್ಷ ಚಮ್ಮಟ್ಟೀರ ಶಾಂತಾ ಪೊನ್ನಪ್ಪ, ಕಾರ್ಯದರ್ಶಿ ಬಿ.ಎಸ್. ಸುರೇಶ್, ಖಜಾಂಚಿ ಮಂಜು ಎನ್.ಕೆ. ಸದಸ್ಯರು ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.