ಚೆಯ್ಯಂಡಾಣೆ, ನ. ೧: ಕಂಡAಗಾಲ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹಾಗೂ ತಂತ್ರಜ್ಞಾನಾದ ಜ್ಞಾನವನ್ನು ಉತ್ತೇಜಿಸುವ ಉದ್ದೇಶದಿಂದ ಜನರಲ್ ವಿಕ್ರಮ್ ತನೇಜ ಹಾಗೂ ಬಿಟ್ಟಂಗಾಲದ ನಿವಾಸಿ ಡಾ. ಪೊನ್ನಕಚ್ಚಿರ ವಿದ್ಯಾ ಪೂಣಚ್ಚ ದಂಪತಿ ಶಾಲೆಗೆ ಐದು ಕಂಪ್ಯೂಟರ್‌ಗಳನ್ನು ಕೊಡುಗೆಯಾಗಿ ನೀಡಿದರು.
ಕಂಪ್ಯೂಟರ್‌ಗಳನ್ನು ಹಸ್ತಾಂತರಿಸಿ ಮಾತನಾಡಿದ ಜನರಲ್ ವಿಕ್ರಮ್ ತನೇಜ ಅವರು, ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಪಠ್ಯ ಶಿಕ್ಷಣದ ಜೊತೆಗೆ ಕಂಪ್ಯೂಟರ್ ಜ್ಞಾನವನ್ನೂ ಬೆಳೆಸಿಕೊಳ್ಳಬೇಕು ಎಂಬ ಆಶಯದಿಂದ ಈ ನೆರವು ನೀಡಲಾಗಿದೆ. ಈ ಕಂಪ್ಯೂಟರ್‌ಗಳು ವಿದ್ಯಾರ್ಥಿಗಳ ಕಲಿಕೆಗೆ ಹಾಗೂ ಭವಿಷ್ಯದ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿವೆ ಎಂದು ತಿಳಿಸಿದರು.
ತಮ್ಮ ಪತ್ನಿ ಡಾ. ಪೊನ್ನಕಚ್ಚಿರ ವಿದ್ಯಾ ಪೂಣಚ್ಚ ಅವರು ಇದೇ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದ ಅವರು ಮುಂದಿನ ದಿನಗಳಲ್ಲಿ ಶಾಲೆಯ ಅಡುಗೆ ಕೊಠಡಿ ಹಾಗೂ ಶೌಚಾಲಯವನ್ನು ಜೀರ್ಣೋದ್ಧಾರ ಮಾಡಿಕೊಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ.) ಅಧ್ಯಕ್ಷ ಕೆಂಜAಗಡ ಗಣಪತಿ, ಸಿಆರ್‌ಪಿ ಸೈಪುನ್ನಿಸಾ, ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ಬೇರಳಿ ನಾಡು ಅಧ್ಯಕ್ಷ ಸಂದೇಶ್ ತಿಮ್ಮಯ್ಯ, ನಿರ್ದೇಶಕ ದೀಪು ದೇವಯ್ಯ, ಮುಖ್ಯ ಶಿಕ್ಷಕ ದೇವರಾಜ್ ಬಿ.ಟಿ., ಅತಿಥಿ ಶಿಕ್ಷಕಿಯರಾದ ಶರಣ್ಯ ಟಿ.ಎಸ್. ಹಾಗೂ ಸುಮಾ ಜಿ.ಎಸ್., ಅಕ್ಷರ ದಾಸೋಹ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.