ಕೂಡಿಗೆ, ನ. ೧: ನಂಜರಾಯಪಟ್ಟಣ ಮಸೀದಿಯ ಸಮೀಪದ ಮುಖ್ಯರಸ್ತೆಯಲ್ಲಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸವಾರರು ಮೃತಪಟ್ಟ ಘಟನೆ ನಡೆದಿದೆ.

ನಂಜರಾಯಪಟ್ಟಣ ಸಮೀಪದ ಕಬ್ಬಿನಗದ್ದೆಯ ರಘು ಅವರ ಪುತ್ರ ರ‍್ಯಾಫ್ಟಿಂಗ್ ಗೈಡ್ ಸುಬ್ರಮಣಿ (೨೮) ಮತ್ತು ತ್ಯಾಗತ್ತೂರಿನ ರಫೀಕ್ ಅವರ ಪುತ್ರ ಪೈಂಟರ್ ರಿನಾಸ್ (೨೧) ಮೃತ ಸವಾರರು. ಟಿ.ವಿ.ಎಸ್ ಅಪಾಚೆ ಹಾಗೂ ಬಜಾಜ್ ಪಲ್ಸರ್ ಬೈಕ್‌ಗಳ ನಡುವೆ ಮುಖಾಮುಕಿ ಡಿಕ್ಕಿಯಾಗಿದ್ದು, ತೀವ್ರ ಗಾಯಗೊಂಡ ಎರಡೂ ಬೈಕ್‌ಗಳ ಸವಾರರು ಮೃತಪಟ್ಟಿದ್ದಾರೆ.

ಎರಡೂ ಬೈಕ್‌ಗಳ ಹಿಂಬದಿ ಸವಾರರಾದ ತ್ಯಾಗತ್ತೂರಿನ ಶ್ವಾಲಿನ್, ವಿರೂಪಾಕ್ಷಪುರದ ಹರೀಶ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.