(ಕೆ.ಎಂ ಇಸ್ಮಾಯಿಲ್ ಕಂಡಕರೆ)
ಮಡಿಕೇರಿ, ನ. ೧: ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗೆ ರಾಜ್ಯ ಚುನಾವಣಾ ಆಯೋಗವು ಪೂರ್ವ ಸಿದ್ಧತೆ ಚುರುಕುಗೊಳಿಸಿದೆ.ಮತಪತ್ರ ಹಾಗೂ ಮತಪೆಟ್ಟಿಗೆ ಕುರಿತಂತೆ ಆಯೋಗವು ಈಗಾಗಲೇ ಸಭೆ ನಡೆಸಿದೆ. ಡಿಸೆಂಬರ್ ಎರಡನೇ ವಾರದಲ್ಲಿ ಚುನಾವಣೆಗೆ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊAಡAತೆ ನಡೆದರೆ ಹೊಸ ವರ್ಷ ಜನವರಿ ಎರಡನೇ ವಾರದಲ್ಲಿ ಚುನಾವಣೆ ನಡೆಯಲಿದೆ.
ಸಧ್ಯದಲ್ಲೇ ಅಂತಿಮ ಮೀಸಲು ಪಟ್ಟಿ ಪ್ರಕಟ
೨೦೨೧ರಲ್ಲಿ ಅವಧಿ ಪೂರ್ಣಗೊಂಡ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯದೇ ಐದು ವರ್ಷ ಪೂರ್ಣಗೊಂಡಿದೆ. ಅದಲ್ಲದೆ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ರಾಜ್ಯದಲ್ಲಿ ನಡೆದದ್ದು ೨೦೧೬ರಲ್ಲಿ. ಇದೀಗ ಸರ್ಕಾರ ಕ್ಷೇತ್ರವಾರು ಕರಡು ಮೀಸಲು ಪಟ್ಟಿಯನ್ನು ಪ್ರಕಟಿಸಿ, ಆಕ್ಷೇಪಣೆ ಅವಕಾಶ ನೀಡಲಾಗಿತ್ತು. ಈಗಾಗಲೇ ೨೦೦೦ಕ್ಕೂ ಆಕ್ಷೇಪಣೆಗಳು ಸಲ್ಲಿಕೆ ಯಾಗಿದ್ದು, ನವೆಂಬರ್ ಮೊದಲ ವಾರ ಅಂತಿಮ ಕ್ಷೇತ್ರವಾರು ಮೀಸಲು ಪಟ್ಟಿ ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಚುನಾವಣೆ ಪ್ರಕ್ರಿಯೆಗೆ ಅಡಚಣೆಯಾಗಬಾರದು ಎಂಬ ಕಾರಣಕ್ಕಾಗಿಯೇ ಬೆಳಗಾವಿಯಲ್ಲಿ ನಡೆಸಲಾಗುವ ವಿಧಾನಮಂಡಲ ಅಧಿವೇಶನವನ್ನು ಈ ಬಾರಿ ಒಂದು ವಾರ ಮುಂಚಿತವಾಗಿ ನಡೆಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಡಿಸೆಂಬರ್ ಮೊದಲ ಅಥವಾ ಎರಡನೇ ವಾರದಲ್ಲಿ ಆರಂಭಗೊಳ್ಳಬೇಕಾಗಿದ್ದ ಚಳಿಗಾಲದ ಅಧಿವೇಶನ ಈ ಬಾರಿ ಒಂದು ವಾರ ಮುಂಚಿತವಾಗಿಯೇ ನಡೆಸಲು ಸರ್ಕಾರ ತೀರ್ಮಾನಿಸಿದೆ. ನವೆಂಬರ್ ೩೦ ರಿಂದ ಚಳಿಗಾಲದ ಅಧಿವೇಶನ ನಡೆಯಲಿದ್ದು, ಮುಕ್ತಾಯಗೊಳ್ಳುತ್ತಿದ್ದಂತೆ ಜಿ.ಪಂ, ತಾ.ಪಂ ಚುನಾವಣೆ ಪ್ರಕ್ರಿಯೆ ಚುರುಕುಗೊಳ್ಳುವ ಸಾಧ್ಯತೆ ಇದೆ.
ಕೊಡಗಿನಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾವಣೆ?
ಜಿಲ್ಲಾ ಪಂಚಾಯತ್ ಚುನಾವಣೆಯ ಕರಡು ಮೀಸಲು ಪಟ್ಟಿ ಪ್ರಕಟಗೊಂಡ ಬಳಿಕ ಕೊಡಗು ಜಿಲ್ಲೆಯಲ್ಲಿ ಮೀಸಲು ಪಟ್ಟಿಗೆ ಪಕ್ಷಾತೀತವಾಗಿ ಅಸಮಾಧಾನ ವ್ಯಕ್ತವಾಗಿತ್ತು. ಜಿಲ್ಲೆಯಿಂದಲೂ ಕೂಡ ಆಕ್ಷೇಪಣೆ ಸಲ್ಲಿಕೆಯಾಗಿದೆ. ಇದೀಗ ಕೊಡಗು ಜಿಲ್ಲೆಯ ನಾಲ್ಕು ಕ್ಷೇತ್ರಗಳ ಮೀಸಲಾತಿ ಬದಲಾವಣೆಯಾಗುವ ಸಾಧ್ಯತೆ ಎಂಬ ಮಾಹಿತಿ ಶಕ್ತಿಗೆ ವಿಶ್ವಾಸನೀಯ ಮೂಲಗಳಿಂದ ಲಭ್ಯವಾಗಿದೆ. ಕುಶಾಲನಗರ ತಾಲೂಕಿನ ಕೂಡಿಗೆ ಜಿಲ್ಲಾ ಪಂಚಾಯತ್ ಕ್ಷೇತ್ರವು ಕರಡು ಮೀಸಲು ಪಟ್ಟಿಯಲ್ಲಿ ಸಾಮಾನ್ಯ ಮಹಿಳೆಗೆ ಮೀಸಲಾಗಿತ್ತು. ೪ಆರನೇ ಪುಟಕ್ಕೆ
(ಮೊದಲ ಪುಟದಿಂದ) ಇದೀಗ ಸಾಮಾನ್ಯ ಮಹಿಳಾ ಮೀಸಲಾತಿ ಬದಲಾವಣೆಯಾಗಲಿದ್ದು,
“ಸಾಮಾನ್ಯ “ ಮೀಸಲು ನಿಗದಿಯಾಗುವ ಸಾಧ್ಯತೆ ಇದೆ
ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಜಿಲ್ಲಾ ಪಂಚಾಯತ್ ಕ್ಷೇತ್ರವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅಂತಿಮ ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದು, ಹುದಿಕೇರಿ ಸಾಮಾನ್ಯ ಮಹಿಳೆಗೆ ಮೀಸಲು ನಿಗದಿಯಾಲಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಮತ್ತು ವಾಲ್ನೂರು-ತ್ಯಾಗತ್ತೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲು ಅದಲು-ಬದಲಾಗುವ ಸಾಧ್ಯತೆ ಇದೆ.
ಗುಡ್ಡೆಹೊಸೂರು ಕ್ಷೇತ್ರದಲ್ಲಿ ಬಿಸಿಎಂ ಎ ಸಾಮಾನ್ಯ ಮೀಸಲು ನಿಗದಿಯಾಗಿತ್ತು.ಅಂತಿಮ ಮೀಸಲು ಪಟ್ಟಿಯಲ್ಲಿ ಗುಡ್ಡೆಹೊಸೂರು ಕ್ಷೇತ್ರವು ಬಿಸಿಎಂ ಎ ಮಹಿಳಾ ಕ್ಷೇತ್ರವಾಗುವ ಸಾಧ್ಯತೆ ಇದೆ. ವಾಲ್ನೂರು-ತ್ಯಾಗತ್ತೂರು ಜಿಲ್ಲಾ ಪಂಚಾಯತ್ ಕ್ಷೇತ್ರದಲ್ಲಿ ಕರಡು ಮೀಸಲು ಪಟ್ಟಿಯಲ್ಲಿ ಬಿಸಿಎಂ ಎ ಮಹಿಳಾ ಮೀಸಲು ಪ್ರಕಟವಾಗಿತ್ತು. ಅಂತಿಮ ಮೀಸಲು ಪಟ್ಟಿಯಲ್ಲಿ ಬಿಸಿಎಂ ಎ ಸಾಮಾನ್ಯ ಮೀಸಲು ನಿಗದಿಯಾಗುವ ಸಾಧ್ಯತೆ ಇದೆ ಎಂಬ ಮಾಹಿತಿ ಶಕ್ತಿಗೆ ಲಭ್ಯವಾಗಿದೆ.
ಚುನಾವಣಾ ಆಯೋಗವು ಎಸ್ಐಆರ್ ಪ್ರಕ್ರಿಯೆ ಪೂರ್ಣಗೊಳಿಸಿ ಅಕ್ಟೋಬರ್ ೨೭ ಮತದಾರರ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ. ರಾಜ್ಯ ಚುನಾವಣಾ ಆಯೋಗ ಬಯಸಿರುವ ನಮೂನೆ ಮಾದರಿಯಲ್ಲಿ ರಾಜ್ಯ ಮುಖ್ಯ ಚುನಾವಣಾಧಿಕಾರಿಯಿಂದ ಮತದಾರರ ಪಟ್ಟಿ ಏನರ ಸಲ್ಲಿಕೆಯಾಗಬೇಕಿದೆ. ಆ ಮತದಾರರ ಪಟ್ಟಿ ಆಧರಿಸಿ ಕ್ಷೇತ್ರವಾರು ಮತದಾರರ ಕರಡು ಪಟ್ಟಿ ಸಿದ್ಧಪಡಿಸಿ ರಾಜ್ಯ ಚುನಾವಣಾ ಆಯೋಗ ಪ್ರಕಟಿಸಲಿದೆ. ಅದಕ್ಕೂ ಆಕ್ಷೇಪಣೆ ಸಲ್ಲಿಕೆಗೆ ಕಾಲಾವಕಾಶ ನೀಡಿ ಸ್ವೀಕೃತಗೊಂಡ ಆಕ್ಷೇಪಣೆಗಳನ್ನು ಪರಿಶೀಲಿಸಿ ಅಂತಿಮ ಮತದಾರರ ಪಟ್ಟಿ ಹೊರಡಿಸಲಿದೆ. ಈ ಪ್ರಕ್ರಿಯೆಗೆ ಕನಿಷ್ಠ ೪೫ ದಿನಗಳ ಕಾಲ ಬೇಕಾಗಿದೆ ಎಂದು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.
೨೦೨೭ರ ಜನವರಿ ಮೊದಲೆರಡು ವಾರಗಳಲ್ಲಿ ಜಿ.ಪಂ, ತಾ.ಪಂ ಚುನಾವಣೆ
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಗಳು ೨೦೨೭ರ ಜನವರಿ ಮೊದಲ ಅಥವಾ ೨ನೇ ವಾರ ನಡೆಯಲಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಕರಡು ಮೀಸಲು ಅಧಿಸೂಚನೆ ಹೊರಡಿಸಲಾಗಿದೆ. ಅ.೧೯ರವರೆಗೆ ಕರಡು ಅಧಿಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸುಮಾರು ೨ ಸಾವಿರಕ್ಕೂ ಅಧಿಕ ಆಕ್ಷೇಪಣೆ ಬಂದಿದ್ದು, ಅಧಿಕಾರಿಗಳು ನಿಯಮಾನುಸಾರ ಪರಿಶೀಲನೆ ಮಾಡುತ್ತಿದ್ದು, ಶೀಘ್ರವೇ ಅಂತಿಮ ಅಧಿಸೂಚನೆ ಹೊರಡಿಸಲಾಗುತ್ತದೆ. ರಾಜ್ಯ ಸರ್ಕಾರ ಪ್ರಸ್ತಾವನೆ ಸಲ್ಲಿಸಿದ ತರುವಾಯ ರಾಜ್ಯ ಚುನಾವಣಾ ಆಯೋಗ, ಕೇಂದ್ರ ಚುನಾವಣಾ ಆಯೋಗದಿಂದ ಮತದಾರರ ಪಟ್ಟಿ ಪಡೆದು ಚುನಾವಣೆ ನಡೆಸುವ ಕುರಿತಂತೆ ಕ್ರಮ ವಹಿಸಲಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.