ಮುಳ್ಳೂರು, ನ. ೧: ರಾಜ್ಯ ಸರಕಾರದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದ ಮೂಲಕ ಜನರ ವೈಯುಕ್ತಿಕ ಮತ್ತು ಗ್ರಾಮದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದು ಸೋಮವಾರಪೇಟೆ ತಹಶೀಲ್ದಾರ್ ಕೃಷ್ಣಮೂರ್ತಿ ಹೇಳಿದರು. ಅವರು ಸಮೀಪದ ಆಲೂರುಸಿದ್ದಾಪುರ ಸಾರ್ವಜನಿಕ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಆಲೂರು ಸಿದ್ದಾಪುರ ಗ್ರಾ.ಪಂ. ಮಟ್ಟದ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಅವರು ಪ್ರಸ್ತಾವಿಕವಾಗಿ ಮಾತನಾಡಿದರು.
ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮವು ಗ್ರಾ.ಪಂ. ಹೋಬಳಿ, ತಾಲೂಕು ಜಿಲ್ಲಾ ಮಟ್ಟದಲ್ಲಿ ನಡೆಯುತ್ತದೆ. ಈ ಆಂದೋಲನ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಸ್ಥಳೀಯ ಮಟ್ಟದ ಅಧಿಕಾರಿಗಳು ಸೇರಿದಂತೆ ಹೋಬಳಿ, ತಾಲೂಕು ಜಿಲ್ಲಾ ಮಟ್ಟದ ಅಧಿಕಾರಿಗಳು ಇಲಾಖೆ ಸಿಬ್ಬಂದಿ ಪಾಲ್ಗೊಳ್ಳುತ್ತಾರೆ. ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಜನರ ವೈಯುಕ್ತಿಕ ಅರ್ಜಿ, ಗ್ರಾಮದ ಸಮಸ್ಯೆ ಕುಂದು ಕೊರತೆಗಳ ಕುರಿತಾದ ಅರ್ಜಿಯನ್ನು ನೀಡಲು ಅವಕಾಶ ಇದ್ದು, ಜನರು ನೀಡಿದ ಅರ್ಜಿಯು ಅಂರ್ತಜಾಲದಲ್ಲಿ ದಾಖಲಾಗುತ್ತದೆ. ಆ ಮೂಲಕ ಅರ್ಜಿದಾರ ಸಲ್ಲಿಸಿದ ಮನವಿ ವಿಲೇವಾರಿಗೊಳ್ಳುತ್ತದೆ. ಇದರಿಂದ ಜನರ ಮತ್ತು ಗ್ರಾಮದ ಸಮಸ್ಯೆ ಇತ್ಯರ್ಥಗೊಳ್ಳಲು ಸಾಧ್ಯವಾಗುತ್ತದೆ ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಆಲೂರು ಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲಗೊಂಡಿದ್ದ ಈ ಕಟ್ಟಡದಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸಲು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಆರೋಗ್ಯ ಅಧಿಕಾರಿ ಈಗಾಗಲೆ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಸದ್ಯದಲ್ಲೇ ಕಟ್ಟಡ ಕಾಮಗಾರಿ ಆರಂಭಗೊಳ್ಳುತ್ತದೆ; ಶೀಘ್ರದಲ್ಲಿ ಆರೋಗ್ಯ ಕೇಂದ್ರವನ್ನು ಬೇರೆ ಕಟ್ಟಡಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದರು.
ಪ್ರಜಾ ಸೇವಾ ಆಂದೋಲನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಪ್ಪ, ಗ್ರಾ.ಪಂ. ಆಡಳಿತ ಅಧಿಕಾರಿ ರಾಜೇಶ್, ಶನಿವಾರಸಂತೆ ಸಿ.ಐ. ಕೃಷ್ಣರಾಜ್ ಮುಂತಾದವರು ಹಾಜರಿದ್ದರು
ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಇಲಾಖೆ ಕಾರ್ಯಕ್ರಮದಲ್ಲಿ ಜನರ ವೈಯುಕ್ತಿಕ ಮತ್ತು ಗ್ರಾಮದ ಸಮಸ್ಯೆಗಳ ಕುರಿತಾದ ಅರ್ಜಿಯನ್ನು ಸ್ವೀಕರಿಸಿ ಅಂರ್ತಜಾಲದಲ್ಲಿ ದಾಖಲಿಸಿಕೊಂಡರು.