ಸೋಮವಾರಪೇಟೆ, ನ. ೧: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸೋಮವಾರಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆ ತೋಳೂರು ಶೆಟ್ಟಳ್ಳಿ ಸಂಯುಕ್ತ ಆಶ್ರಯದಲ್ಲಿ ಚೆರಿಯಮನೆ ದಿ. ಕೃಷ್ಣ ü ಮತ್ತು ಇರುವೈಲು ರಘುರಾಮ ಅಶ್ರಣ್ಣ ಮತ್ತು ಲೀಲಾ ಅಶ್ರಣ್ಣ ಜ್ಞಾಪಕಾರ್ಥ ದತ್ತಿ ಕಾರ್ಯಕ್ರಮ ತೋಳೂರು ಶೆಟ್ಟಳ್ಳಿಯ ಡಾ. ಬಿ. ಆರ್. ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಉದ್ಘಾಟಿಸಿ ಮಾತನಾಡಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಈಗಾಗಲೇ ೬೦ಕ್ಕೂ ಹೆಚ್ಚು ದತ್ತಿ ನಿಧಿಗಳನ್ನು ಹೊಂದಿದ್ದು ಕೊಡಗು ಜಿಲ್ಲೆಯಾದ್ಯಂತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದೆ ಎಂದರು.

ಜಾನಪದ ಸಾಹಿತ್ಯ ಬಗ್ಗೆ ಉಪನ್ಯಾಸ ನೀಡಿದ ೬ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಜಲಕಾಳಪ್ಪ ಮಾತನಾಡಿ, ಭಾರತ ದೇಶದಲ್ಲಿ ನಮ್ಮ ಕರ್ನಾಟಕದ ಜಾನಪದ ಸಂಸ್ಕೃತಿ ಅತ್ಯಂತ ಶ್ರೀಮಂತವಾಗಿದೆ. ಕಲೆ, ಸಾಹಿತ್ಯ, ನೃತ್ಯ, ನಾಟಕ, ಯಕ್ಷಗಾನ, ಬಯಲಾಟ ಮುಂತಾದ ಪ್ರಾಕಾರಗಳನ್ನು ಕನ್ನಡ ಜಾನಪದ ಸಂಸ್ಕೃತಿಯಲ್ಲಿ ಕಾಣಬಹುದೆಂದರು.

ಇನ್ನೊರ್ವ ಉಪನ್ಯಾಸಕ ಶಾಫಿ ಸಅದಿ ಅವರು ಕೊಡಗಿನ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬೆಳವಣಿಗೆ ವಿಷಯದಲ್ಲಿ ವಿಷಯ ಮಂಡನೆ ಮಾಡಿ, ಜಿಲ್ಲೆಯ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ವಿಶಿಷ್ಟವಾಗಿದ್ದು, ಕರ್ನಾಟಕದ ಅತ್ಯಂತ ಸಮೃದ್ಧ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತ ಜಿಲ್ಲೆಗಳಲ್ಲಿ ಒಂದಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಅಂಬೇಡ್ಕರ್ ಬಾಲಕಿಯರ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಮತ್ತು ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ದಿನೇಶ್ ಪಾಲ್ಗೊಂಡಿದ್ದರು.

೨೫-೨೬ ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೆರ್ಗಡೆ ಹೊಂದಿದ ಅಂಬೇಡ್ಕರ್ ವಸತಿ ಶಾಲೆಯ ಪುಣ್ಯ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಸ್. ಡಿ. ವಿಜೇತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗೌರವ ಕಾರ್ಯದರ್ಶಿ ಎ.ಪಿ. ವೀರರಾಜ್, ಟಿ. ಜೆ. ಶುಭ, ಜಮೀರ್, ಗಿರೀಶ್ ಕಾಟ್ನಮನೆ, ಶ್ರೀಧರ್ ಹೂವಲ್ಲಿ, ವಾಸಂತಿ ರವೀಂದ್ರ, ಜ್ಯೋತಿ ಅರುಣ್ ಇದ್ದರು.

ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಇದೇ ಸಂದರ್ಭ ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲ ಚಂದ್ರಶೇಖರ್ ರೆಡ್ಡಿ ಅವರನ್ನು ಸನ್ಮಾನಿಸಲಾಯಿತು.