ಸಿದ್ದಾಪುರ, ಅ. ೩೦: ಸಿದ್ದಾಪುರದ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಸಮಸ್ಯೆಗೆ ಮುಕ್ತಿ ನೀಡಲು ಸಿದ್ದಾಪುರದ ಕರಡಿಗೋಡು ರಾಮಪುರಂ ಕುಟುಂಬಸ್ಥರು ಹಾಗೂ ಸಿದ್ದಾಪುರ ಗ್ರಾಮಸ್ಥರು ಮಹತ್ವದ ಹೆಜ್ಜೆಯನ್ನು ಇಟ್ಟಿದ್ದಾರೆ.

ರಾಮಪುರಂ ಕುಟುಂಬಸ್ಥರು ಕೊಡಗು ಜಿಲ್ಲೆಯ ಕರಡಿಗೋಡು ಗ್ರಾಮಕ್ಕೆ ಬಂದು ನೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಶತಮಾನೋತ್ಸವದ ಸ್ಮರಣಾರ್ಥವಾಗಿ, ಸಿದ್ದಾಪುರ ಸಮೀಪದ ಕರಡಿಗೋಡು ಇವಾಲ್ವ್ ಬ್ಯಾಕ್ ಸಭಾಂಗಣದಲ್ಲಿ ಸಿದ್ದಾಪುರದ ವಿವಿಧ ಸಂಘ ಸಂಸ್ಥೆಗಳ ಹಾಗೂ ಸಂಘಟನೆಗಳ ಪದಾಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಕಸದ ಸಮಸ್ಯೆಯ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಇವಾಲ್ವ್ ಬ್ಯಾಕ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸ್ವಚ್ಛ ಸಿದ್ದಾಪುರ ಸಮಿತಿಯ ಗೌರವಾಧ್ಯಕ್ಷರಾದ ಚೆರಿಯನ್ ರಾಮಪುರಂ ಅವರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಮುಖ್ಯಸ್ಥ ಡಾ. ಜಾನ್ ಟಿ. ರಾಮಪುರಂ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ತ್ಯಾಜ್ಯಗಳು, ರಾಶಿಗಳು ತುಂಬಿಕೊAಡಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯದಲ್ಲಿ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಅವರ ಸಹಕಾರದೊಂದಿಗೆ ಪ್ರಥಮ ಹಂತದಲ್ಲಿ ಸಿದ್ದಾಪುರವನ್ನು ಮಾದರಿ ಸ್ವಚ್ಛ ಗ್ರಾಮವನ್ನಾಗಿಸಲು ಸಲಹಾ ಸಮಿತಿ ರಚನೆ ಮಾಡಲಾಗುವುದೆಂದು ತಿಳಿಸಿದರು. ಇದಕ್ಕೆ ಗ್ರಾಮಸ್ಥರು ಹಾಗೂ ಸಂಘ-ಸAಸ್ಥೆಗಳು ಸಹಕಾರ ನೀಡುವಂತೆ ಮನವಿ ಮಾಡಿದರು.

ಸಿದ್ದಾಪುರದಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿದ ಪಿ.ಡಿ.ಓ. ವಿಶ್ವನಾಥ್ ಮಾತನಾಡಿ, ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಕ್ಕೆ ಸುಮಾರು ನೂರು ಕೆಜಿ ಕಸ ಉತ್ಪತ್ತಿಯಾಗುತ್ತಿದ್ದು ಕಸವಿಲೇವಾರಿಗೆ ವರ್ಷಕ್ಕೆ ಸುಮಾರು ರೂ. ೩೦ ಲಕ್ಷ ವೆಚ್ಚವಾಗುತ್ತಿದೆ ಎಂದರು. ಖಾಸಗಿ ಸಂಸ್ಥೆ ನೀಡಿದ ಯಂತ್ರೋಪಕರಣಗಳು ಬಳಕೆಯಾಗದೆ ಪಂಚಾಯಿತಿಯಲ್ಲಿ ಉಳಿದಿವೆ. ವಾಣಿಜ್ಯ ಕಸ ಹಾಗೂ ಸಾರ್ವಜನಿಕ ತ್ಯಾಜ್ಯ ವಿಲೇವಾರಿಗೆ ಪ್ರತ್ಯೇಕ ತಂಡಗಳನ್ನು ರಚಿಸಿದರೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ಎಂದು ಸಲಹೆ ನೀಡಿದರು.

ಸಿದ್ದಾಪುರದ ಠಾಣಾಧಿಕಾರಿ ಮಂಜುನಾಥ್ ಮಾತನಾಡಿ, ಕಸದ ರಾಶಿಯಿಂದಾಗಿ ಹಾಗೂ ರಸ್ತೆ ಬದಿಯಲ್ಲಿ ತ್ಯಾಜ್ಯಗಳು ಕೊಳೆತು ನಾರುತ್ತಿರುವುದರಿಂದ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಇದರಿಂದಾಗಿ ಶಾಲೆಯ ಮಕ್ಕಳು ಹಾಗೂ ಸಾರ್ವಜನಿಕರು ರಸ್ತೆಯಲ್ಲಿ ನಡೆದಾಡುವ ಸಂದರ್ಭದಲ್ಲಿ ಬೀದಿ ನಾಯಿಗಳು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು. ಕಸದ ಸಮಸ್ಯೆ ಜೊತೆಗೆ ಸಿದ್ದಾಪುರ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಸಮಿತಿಯ ವತಿಯಿಂದ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಿಕೊಡುವಂತೆ ಮನವಿ ಮಾಡಿದರು.

ಸಿದ್ದಾಪುರ ಗ್ರಾಮ ಪಂಚಾಯಿತಿ ಪಿಡಿಓ ಸತೀಶ್ ಮಾತನಾಡಿ, ಸಂಗ್ರಹ ವಿಂಗಡಣೆ ಮತ್ತು ವಿಲೇವಾರಿ ಸೂತ್ರವನ್ನು ಗ್ರಾಮದ ಪ್ರತಿಯೊಬ್ಬರು ಕಡ್ಡಾಯವಾಗಿ ಪಾಲಿಸಬೇಕೆಂದರು. ವಾರದಲ್ಲಿ ನಾಲ್ಕು ದಿನ ಹಸಿ ಕಸ ಹಾಗೂ ಉಳಿದ ದಿನಗಳಲ್ಲಿ ಒಣಕಸ ಸಂಗ್ರಹ ಮಾಡಲಾಗುವುದು. ಇದಕ್ಕೆ ಮಹಿಳಾ ಸ್ವಸಹಾಯ ಸಂಘಗಳನ್ನು ಇದರಲ್ಲಿ ತೊಡಗಿಸಿಕೊಂಡು ಶೇ. ಎಂಬತ್ತರಷ್ಟು ತ್ಯಾಜ್ಯವನ್ನು ಮರುಬಳಕೆ ಮಾಡುವ ನಿಟ್ಟಿನಲ್ಲಿ ಜನಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಆರೆAಜ್ ಕೌಂಟಿ ಸಂಪರ್ಕ ಅಧಿಕಾರಿ ವಿ.ಕೆ. ಲೋಕೇಶ್ ಮಾತನಾಡಿ, ಇವಾಲ್ವ್ ಬ್ಯಾಕ್ ಸಂಸ್ಥೆಯು ಕಳೆದ ಸುಮಾರು ವರ್ಷಗಳಿಂದ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಸಂಸ್ಥೆಯು ಈ ಹಿಂದೆ ಕೂಡ ಪ್ರವಾಹ ಹಾಗೂ ಇನ್ನಿತರ ತುರ್ತು ಸಂದರ್ಭಗಳಲ್ಲಿ ಗ್ರಾಮಸ್ಥರಿಗೆ ಸಹಾಯದ ಹಸ್ತ ಚಾಚಿದೆ. ಇದೀಗ ಸಿದ್ದಾಪುರದ ಬಹುದೊಡ್ಡ ಸಮಸ್ಯೆಯಾಗಿರುವ ಕಸದ ಸಮಸ್ಯೆಗೆ ರಾಮಪುರಂ ಕುಟುಂಬಸ್ಥರು ಮುಂದಾಗಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಚೆರಿಯನ್ ರಾಮಪುರಂ ಮಾತನಾಡಿ ವಿಶ್ವ, ದೇಶ ರಾಜ್ಯ ಅಥವಾ ಜಿಲ್ಲೆಯ ಸ್ವಚ್ಛತೆಯ ಬಗ್ಗೆ ದೊಡ್ಡದಾಗಿ ಯೋಚಿಸುವ ಮೊದಲು ಪ್ರತಿಯೊಬ್ಬರು ತಮ್ಮ ಮನೆಯಿಂದಲೇ ಸ್ವಚ್ಛತೆಯನ್ನು ಆರಂಭಿಸಬೇಕು. ಆ ನಿಟ್ಟಿನಲ್ಲಿ ಎಲ್ಲಕ್ಕಿಂತಲೂ ಮುಖ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯು ತನ್ನ ಮನಸ್ಸನ್ನು ಮೊದಲು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಪ್ಲಾಸ್ಟಿಕ್ ಬಾಟಲಿಗಳನ್ನು ಬಳಸದಂತೆ, ಅದನ್ನು ನಿಷೇಧಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಸಿದ್ದಾಪುರ ವ್ಯಾಪ್ತಿಯ ವಿವಿಧ ಸಂಸ್ಥೆಗಳ ಹಾಗೂ ಸಂಘಟನೆಗಳ ಪ್ರಮುಖರಾದ ದೇವಣಿರ ಸುಜಯ್, ಕೆ.ಯು. ಮಜೀದ್, ಶ್ರೀನಿವಾಸ್, ಜಿಮ್ಮಿ ಸಿಕ್ವೇರ, ಸುರೇಶ್, ಸತೀಶ್ ಹಾಗೂ ಇನ್ನಿತರರು ಹಾಜರಿದ್ದರು. ಆರೆಂಜ್ ಕೌಂಟಿ ಸಂಪರ್ಕ ಅಧಿಕಾರಿ ವಿ.ಕೆ. ಲೋಕೇಶ್ ಸ್ವಾಗತಿಸಿ, ಇವಾಲ್ವ್ ಬ್ಯಾಕ್ ರೆಸಾರ್ಟ್ ಪ್ರಧಾನ ವ್ಯವಸ್ಥಾಪಕ ವಸಂತ್ ಕುಮಾರ್ ವಂದಿಸಿದರು.