ವಿಶೇಷ ವರದಿ: ಕೆ. ಈಶಾನ್ವಿ

ವೀರಾಜಪೇಟೆ, ಅ. ೨೯: ”ಮಾನವೀಯತೆಗಿಂತ ದೊಡ್ಡ ಧರ್ಮ ಇನ್ನೊಂದಿಲ್ಲ” ಎಂಬುದನ್ನು ವಿರಾಜಪೇಟೆ ಮಾರ್ಗದ ಖಾಸಗಿ ಬಸ್ ಒಂದರ ಚಾಲಕ ಮತ್ತು ನಿರ್ವಾಹಕರು ಸಾಬೀತುಪಡಿಸಿದ್ದಾರೆ. ತೀವ್ರ ಪ್ರಸವ ವೇದನೆಯಿಂದ ಬಳಲುತ್ತಿದ್ದ ಅಸ್ಸಾಂ ಮೂಲದ ಗರ್ಭಿಣಿ ಮಹಿಳೆಯೊಬ್ಬರನ್ನು ಸಮಯಕ್ಕೆ ಸರಿಯಾಗಿ ಆಸ್ಪತ್ರೆಗೆ ತಲುಪಿಸಿ, ತಾಯಿ ಮತ್ತು ನವಜಾತ ಶಿಶುವಿನ ಪ್ರಾಣ ರಕ್ಷಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಹಾತೂರು ಮೂಲದ ಚಾಲಕ ರಾಕೇಶ್ ಹಾಗೂ ಬಿಟ್ಟಂಗಾಲ ಮೂಲದ ನಿರ್ವಾಹಕ ಕಿಸನ್ ಈ ಮಾನವೀಯ ಕಾರ್ಯದ ಮೂಲಕ ಗಮನಸೆಳೆದ ಅಪರೂಪದ ರಿಯಲ್ ಹೀರೋಗಳು.

ಘಟನೆಯ ಹಿನ್ನೆಲೆ

ಅಸ್ಸಾಂ ಮೂಲದ ಸುರ್ಜಾಬಾನು ಹಾಗೂ ಅವರ ಪತಿ ಯೂಸುಫ್ ಅಲಿ ದಂಪತಿ ಉದ್ಯೋಗ ಅರಸಿ ಕೊಡಗಿಗೆ ಬಂದಿದ್ದು, ಪ್ರಸ್ತುತ ನಾಪೋಕ್ಲು ಭಾಗದ ಕಾಫಿ ತೋಟವೊಂದರಲ್ಲಿ ಕಾರ್ಮಿಕರಾಗಿ ಜೀವನ ಸಾಗಿಸುತ್ತಿದ್ದಾರೆ. ಗರ್ಭಿಣಿಯಾಗಿದ್ದ ಸುರ್ಜಾಬಾನು ಅವರಿಗೆ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗಾಗಿ ಮಡಿಕೇರಿಯ ಸಾರ್ವಜನಿಕ ಜಿಲ್ಲಾ ಆಸ್ಪತ್ರೆಗೆ ತೆರಳಿದ್ದರು.

ಚಿಕಿತ್ಸೆ ಮುಗಿಸಿಕೊಂಡು ವಾಪಸ್ ತೆರಳಲು ಮಡಿಕೇರಿಯ ಟೋಲ್ಗೇಟ್ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಆಕೆಗೆ ತೀವ್ರವಾದ ಹೊಟ್ಟೆನೋವು ಹಾಗೂ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಮಡಿಕೇರಿಯಿಂದ ವೀರಾಜಪೇಟೆ ಮಾರ್ಗವಾಗಿ ಗೋಣಿಕೊಪ್ಪಕ್ಕೆ ತೆರಳುತ್ತಿದ್ದ ರಾಣಿ ಬಸ್ ಬಂದಾಗ ಆಕೆ ಬಸ್ಸನ್ನೇರಿದ್ದಾರೆ. ಆದರೆ, ಬಸ್ ಹತ್ತುವಾಗಲೇ ಆಕೆ ತೀವ್ರ ಹೊಟ್ಟೆನೋವು ಹಾಗೂ ಅತಿಯಾದ ನಿಶ್ಯಕ್ತಿ (ಬಳಲಿಕೆ)ಯಿಂದ ಕಷ್ಟಪಡುತ್ತಿದ್ದರು. ನಿಂತುಕೊಳ್ಳಲೂ ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದ ಆಕೆಯನ್ನು ಗಮನಿಸಿದ ನಿರ್ವಾಹಕ ಕಿಸನ್, ತಕ್ಷಣವೇ ಆಕೆಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿಕೊಟ್ಟರು. ಬಸ್ಸಿನಲ್ಲಿ ಪ್ರಯಾಣಿಕರು ಹೆಚ್ಚಿದ್ದರೂ, ಆಕೆಯ ಗಂಭೀರ ಸ್ಥಿತಿಯನ್ನು ಕಂಡು ಸಹಾಯಕ್ಕೆ ನಿಂತರು.

ಆಸ್ಪತ್ರೆಗೆ ದೌಡು

ಮಹಿಳೆಯ ಕಷ್ಟಕರ ಸ್ಥಿತಿ ಹಾಗೂ ಗರ್ಭಿಣಿಯ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಚಾಲಕ ರಾಕೇಶ್ ಹಾಗೂ ನಿರ್ವಾಹಕ ಕಿಸನ್, ಕ್ಷಣವೂ ತಡಮಾಡದೆ ಆದಷ್ಟು ಬೇಗ ಆಕೆಯನ್ನು ವೀರಾಜಪೇಟೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಸ್ ವಿರಾಜಪೇಟೆಯ ಗಡಿಯಾರ ಕಂಬದ ಬಳಿ ತಲುಪುತ್ತಿದ್ದಂತೆ, ಸಮಯಪ್ರಜ್ಞೆ ಮೆರೆದ ಸಿಬ್ಬಂದಿ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸಿ ವಿನಂತಿಸಿಕೊAಡರು.

“ತಾಯಿಯೊಬ್ಬರು ತೀವ್ರ ಪ್ರಸವ ವೇದನೆಯಲ್ಲಿದ್ದಾರೆ. ಪ್ರಥಮ ಆದ್ಯತೆಯಾಗಿ ನಾವು ಈಕೆಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಿಟ್ಟು, ಬಳಿಕ ಬಸ್ ಸ್ಟಾö್ಯಂಡ್ಗೆ ಹಾಗೂ ಗೋಣಿಕೊಪ್ಪಕ್ಕೆ ತೆರಳುತ್ತೇವೆ. ಬಸ್ ಸ್ಟಾ÷್ಯಂಡ್ನಲ್ಲಿ ಇಳಿಯುವವರಿಗೆ ಅಲ್ಲೇ ಇಳಿಸುತ್ತೇವೆ” ಎಂದು ಪ್ರಯಾಣಿಕರಲ್ಲಿ ಮನವರಿಕೆ ಮಾಡಿದರು. ಸಿಬ್ಬಂದಿಯ ಮಾನವೀಯ ಸ್ಪಂದನಕ್ಕೆ ಬಸ್ಸಿನಲ್ಲಿದ್ದ ಎಲ್ಲ ಪ್ರಯಾಣಿಕರೂ ಸಂಪೂರ್ಣ ಸಹಕಾರ ನೀಡಿದರು. ತಕ್ಷಣವೇ ಗಡಿಯಾರ ಕಂಬದ ಬಳಿಯಿಂದ ಬಸ್ಸನ್ನು ನೇರವಾಗಿ ವಿರಾಜಪೇಟೆಯ ಸಾರ್ವಜನಿಕ ಆಸ್ಪತ್ರೆಯ ಆವರಣಕ್ಕೆ ಕೊಂಡೊಯ್ದು ಆಕೆಯನ್ನು ದಾಖಲಿಸಿದರು.

ಹೆಣ್ಣು ಮಗುವಿನ ಜನನ

ಸೂಕ್ತ ಸಮಯದಲ್ಲಿ ಆಸ್ಪತ್ರೆಗೆ ತಲುಪಿಸಿದ್ದರಿಂದ ವೈದ್ಯರು ತಕ್ಷಣವೇ ಸೂಕ್ತ ಚಿಕಿತ್ಸೆ ನೀಡಿದರು. ಪರಿಣಾಮವಾಗಿ, ಸುರ್ಜಾಬಾನು ಅವರು ೨.೮ ಕೆ.ಜಿ ತೂಕದ ಮುದ್ದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಬಸ್ ಸಿಬ್ಬಂದಿ ತೋರಿದ ಈ ಸಮಯಪ್ರಜ್ಞೆಯಿಂದ ತಾಯಿ ಮತ್ತು ಮಗುವಿನ ಪ್ರಾಣ ಉಳಿದಂತಾಗಿದ್ದು, ಈಗ ತಾಯಿ-ಮಗು ಇಬ್ಬರೂ ಸಂಪೂರ್ಣ ಆರೋಗ್ಯವಾಗಿದ್ದಾರೆ.

ಈ ಕುರಿತು ಮಹಿಳೆ ಹಾಗೂ ಕುಟುಂಬದವರನ್ನು “ಶಕ್ತಿ'' ಮಾತನಾಡಿಸಿದಾಗ, ನಮ್ಮ ಬಳಿ ಕೇವಲ ಮುನ್ನೂರು ರೂಪಾಯಿ ಇತ್ತು. ಆಟೋದಲ್ಲಿ ಹೋಗಲು ಸಾಧ್ಯವಿರಲಿಲ್ಲ. ಹೇಗಾದ್ರೂ ಮಾಡಿ ಆಸ್ಪತ್ರೆ ಸೇರುವ ಯೋಚನೆಯಿತ್ತು. ನೋವು ಕಾಣಿಸಿಕೊಂಡ ಕೂಡಲೇ ನಿರ್ವಾಹಕರಿಗೆ ತಿಳಿಸಿದೆವು. ಸದ್ಯ ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಸಂತೋಷ ವ್ಯಕ್ತಪಡಿಸಿದರು.

ವೈದ್ಯಾಧಿಕಾರಿಗಳ ಮೆಚ್ಚುಗೆ

ಈ ಮಾನವೀಯ ಕಾರ್ಯದ ಕುರಿತು ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ವಿಶ್ವನಾಥ್ ಸಿಂಪಿ ಅವರು ಚಾಲಕ ಮತ್ತು ನಿರ್ವಾಹಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇಂದಿನ ಆತುರದ ಬದುಕಿನಲ್ಲಿ ಪರರ ನೋವಿಗೆ ಸ್ಪಂದಿಸುವ ಮನಸ್ಸುಗಳು ಕಡಿಮೆಯಾಗುತ್ತಿವೆ. ಆದರೆ, ಬಸ್ ಚಾಲಕ ರಾಕೇಶ್ ಹಾಗೂ ನಿರ್ವಾಹಕ ಕಿಸನ್ ಅವರು ತೋರಿದ ಸಮಯಪ್ರಜ್ಞೆ ಮತ್ತು ಮಾನವೀಯತೆ ನಿಜಕ್ಕೂ ಶ್ಲಾಘನೀಯ. ತೀವ್ರ ಪ್ರಸವ ವೇದನೆಯಲ್ಲಿದ್ದ ಮಹಿಳೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ತಲುಪಿಸದೇ ಇದ್ದಿದ್ದರೆ ಅಪಾಯ ಸಂಭವಿಸುವ ಸಾಧ್ಯತೆಯಿತ್ತು. ಪ್ರಾಣಾಪಾಯದಲ್ಲಿದ್ದ ತಾಯಿ ಮತ್ತು ಮಗುವಿನ ಜೀವ ಉಳಿಸಲು ಪಣತೊಟ್ಟು ಕೆಲಸ ಮಾಡಿದ ಈ ಸಿಬ್ಬಂದಿಯ ನಡೆ ಇಡೀ ಸಮಾಜಕ್ಕೇ ಮಾದರಿಯಾಗಿದೆ.

ಕಿಸನ್ ಹೇಳಿದ್ದು

ಗರ್ಭಿಣಿಯ ಪರಿಸ್ಥಿತಿ ಮತ್ತು ನೋವನ್ನು ಅರ್ಥಮಾಡಿಕೊಂಡು ನಾವಿಬ್ಬರೂ (ಚಾಲಕ ರಾಕೇಶ್ ಮತ್ತು ನಾನು) ಆದಷ್ಟು ಬೇಗ ವೀರಾಜಪೇಟೆಗೆ ತಲುಪಿಸಲು ನಿರ್ಧರಿಸಿದೆವು. ಗಡಿಯಾರ ಕಂಬದ ಬಳಿ ಬರುತ್ತಿದ್ದಂತೆ ಬಸ್ಸಿನಲ್ಲಿದ್ದ ಉಳಿದ ಪ್ರಯಾಣಿಕರಿಗೂ ಪರಿಸ್ಥಿತಿಯನ್ನು ಮನವರಿಕೆ ಮಾಡಿದೆವು. ಈಕೆಯನ್ನ ಹಾಸ್ಪಿಟಲ್‌ನಲ್ಲಿ ಬಿಟ್ಟು ಬಳಿಕ ನಾವು ಗೋಣಿಕೊಪ್ಪಕ್ಕೆ ತೆರಳುತ್ತೇವೆ, ಬಸ್ ಸ್ಟಾ÷್ಯಂಡ್‌ಗೆ ಇಳಿಯುವವರನ್ನು ಅಲ್ಲಿಗೆ ತಲುಪಿಸುತ್ತೇವೆ ಎಂದು ವಿನಂತಿಸಿ, ತಾಯಿ ಮತ್ತು ಮಗುವಿನ ಪ್ರಾಣ ಉಳಿಸಲು ಆಸ್ಪತ್ರೆಗೆ ಸೇರಿಸಿದೆವು.

ಮಾದರಿಯಾದ ಹೀರೋಗಳು

ಬಡತನದ ಹಿನ್ನೆಲೆಯಲ್ಲಿ ದೂರದ ಅಸ್ಸಾಂನಿAದ ವಲಸೆ ಬಂದು ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿರುವ ದಂಪತಿಗೆ, ನಮ್ಮ ನಾಡಿನ ಖಾಸಗಿ ಬಸ್ ಸಿಬ್ಬಂದಿ ಹಾಗೂ ಪ್ರಯಾಣಿಕರು ದೇವದೂತರಾಗಿ ನಿಂತಿದ್ದಾರೆ. ಕೇವಲ ಕರ್ತವ್ಯವಷ್ಟೇ ಅಲ್ಲದೆ, ಪ್ರಾಣ ರಕ್ಷಣೆಗೆ ಮೊದಲ ಆದ್ಯತೆ ನೀಡಿ ಮಾನವೀಯತೆ ಮೆರೆದ ಚಾಲಕ ರಾಕೇಶ್ ಮತ್ತು ನಿರ್ವಾಹಕ ಕಿಸನ್ ಅವರ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.