ಶ್ರೀಮಂಗಲ, ಅ. ೨೮: ಆಧುನಿಕ ಯುಗದ ವೇಗದ ಬದುಕಿನ ನಡುವೆ ಕೊಡಗಿನ ಸಂಸ್ಕೃತಿ, ಆಚರಣೆ ಹಾಗೂ ಪಾರಂಪರಿಕ ಪದ್ಧತಿಗಳನ್ನು ಜೀವಂತವಾಗಿರಿಸುವಲ್ಲಿ ಪತ್ತಾಲೋದಿ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ ಹಾಗೂ ವೀರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು.
ಟಿ. ಶೆಟ್ಟಿಗೇರಿಯ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದಲ್ಲಿ ನಡೆದ ೧೦ನೇ ವರ್ಷದ ಪತ್ತಾಲೋದಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಕಾವೇರಿ ತೀರ್ಥೋದ್ಭವದ ಬಳಿಕ ಸತತ ೧೦ ದಿನಗಳ ಕಾಲ ಧಾರ್ಮಿಕ ಹಿನ್ನೆಲೆಯೊಂದಿಗೆ ನಡೆಯುವ ಪತ್ತಾಲೋದಿ ಕಾರ್ಯಕ್ರಮ ಕಳೆದ ಒಂದು ದಶಕದಿಂದ ಜನರ ಸಂಭ್ರಮ ಹಾಗೂ ಉತ್ಸಾಹದೊಂದಿಗೆ ನಡೆದುಕೊಂಡು ಬರುತ್ತಿರುವುದು ವಿಶೇಷ. ಕಳೆದ ನಾಲ್ಕು ವರ್ಷಗಳಿಂದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುತ್ತಿದ್ದು, ಪ್ರತಿವರ್ಷವೂ ಜನರ ಉತ್ಸಾಹದಲ್ಲಿ ಯಾವುದೇ ಕೊರತೆಯಾಗಿಲ್ಲ. ಇಂತಹ ಆಚರಣೆಗಳು ಮನಸ್ಸಿಗೆ ಸಂತೋಷ ನೀಡುವುದರ ಜತೆಗೆ ನಮ್ಮ ಸಂಸ್ಕೃತಿ ಹಾಗೂ ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯಲು ಸಹಕಾರಿಯಾಗುತ್ತವೆ ಎಂದರು.
ಕೊಡವ ಜನಾಂಗದ ಜನಸಂಖ್ಯೆ ಕಡಿಮೆಯಾಗುತ್ತಿರುವ ಬಗ್ಗೆ ಗಮನ ಹರಿಸಬೇಕಾದ ಅಗತ್ಯವಿದೆ. ಆದರೆ, ವಾಸ್ತವಾಂಶವನ್ನು ಅರಿತುಕೊಂಡು ಮುಂದುವರಿಯಬೇಕು. ಜನಸಂಖ್ಯೆಯನ್ನು ಒಂದೆರಡು ವರ್ಷಗಳಲ್ಲಿ ಹೆಚ್ಚಿಸಲು ಸಾಧ್ಯವಿಲ್ಲ. ಇರುವ ಜನಸಂಖ್ಯೆಯಲ್ಲಿಯೇ ಸಮಾಜ ಹಾಗೂ ಜನಾಂಗಕ್ಕೆ ಹೆಚ್ಚಿನ ಕೊಡುಗೆ ನೀಡುವ ಮೂಲಕ ಸಾಧನೆ ಮಾಡಬೇಕು. ಕೇವಲ ಸುಮಾರು ೫೦ ಸಾವಿರ ಜನಸಂಖ್ಯೆ ಹೊಂದಿರುವ ಪಾರ್ಸಿ ಸಮುದಾಯದ ಕೊಡುಗೆ ಕೊಡವ ಜನಾಂಗಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಕೊಡವ ಸಮಾಜಗಳು ಜನಾಂಗದ ಹಕ್ಕುಗಳನ್ನು ಪ್ರತಿಪಾದಿಸುವ, ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ, ಜನಾಂಗದ ಪರವಾಗಿ ಚಿಂತಿಸುವ ಹಾಗೂ ಜನರನ್ನು ಬೆಸೆಯುವ ಕೇಂದ್ರಗಳಾಗಬೇಕು. ರಾಜಕೀಯವನ್ನು ಬೆರೆಸಿ ಜನಾಂಗವನ್ನು ವಿಭಜಿಸುವ ಕೇಂದ್ರಗಳಾಗಬಾರದು. ಕೊಡವ ಜನಸಂಖ್ಯೆ, ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಉಳಿವಿಗಾಗಿ ಸಮಾಜಗಳು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದರು.
೨೦೨೯ರಲ್ಲಿ ಕೊಡವರ ಕೋವಿ ವಿನಾಯಿತಿ ಹಕ್ಕು ಮೊಟಕುಗೊಳ್ಳುವ ಸಾಧ್ಯತೆಯಿದ್ದು, ಅದನ್ನು ಮುಂದುವರಿಸಲು ಯಾರು ಕೆಲಸ ಮಾಡುತ್ತಾರೆ ಎಂಬ ಪ್ರಶ್ನೆ ಎದುರಾಗಿದೆ. ೨೦೧೯ರಲ್ಲಿ ನ್ಯಾಯಾಲಯದಲ್ಲಿ ಈ ಹಕ್ಕನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮನವರಿಕೆ ಮಾಡಿ ಮುಂದುವರಿಸಲು ಸಾಧ್ಯವಾಗಿತ್ತು. ಕೊಡವರಿಗೆ ಬುಡಕಟ್ಟು ಸ್ಥಾನಮಾನ ನೀಡುವ ಕುರಿತು ೨೦೧೬ರಲ್ಲಿ ಸರ್ಕಾರದಿಂದ ಕುಲಶಾಸ್ತ್ರ ಅಧ್ಯಯನ ನಡೆಸಲಾಗಿತ್ತು. ಆದರೆ ಅಧ್ಯಯನ ಸಮರ್ಪಕವಾಗಿಲ್ಲ ಎಂಬ ಕಾರಣಕ್ಕೆ ೨೦೨೪ರಲ್ಲಿ ಮತ್ತೆ ಕೊಡವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಲು ಆದೇಶಿಸಲಾಗಿದೆ. ಈ ವಿಚಾರಗಳಲ್ಲಿ ಕೊಡವ ಸಮಾಜಗಳು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಹೇಳಿದರು.
ಈ ಹಿಂದೆ ಸರ್ಕಾರದಿಂದ ಕೊಡವ ಸಮಾಜಕ್ಕೆ ೧೦ ಲಕ್ಷ ಅನುದಾನ ನೀಡಲಾಗಿತ್ತು. ಇದೀಗ ಸಮಾಜದ ಕೋರಿಕೆಯಂತೆ ಶಾಸಕರ ನಿಧಿಯಿಂದ ಮತ್ತೆ ೧೦ ಲಕ್ಷ ನೀಡುವುದಾಗಿ ಪೊನ್ನಣ್ಣ ಭರವಸೆ ನೀಡಿದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ದರ್ಶನ ನೀಡಿದ ಬಳಿಕ ೧೦ ದಿನಗಳ ಕಾಲ ನಡೆಯುವ ಪತ್ತಾಲೋದಿ ಕಾರ್ಯಕ್ರಮದಲ್ಲಿ ಕೊಡವ ಹೆಣ್ಣುಮಕ್ಕಳು ಹಾಗೂ ತವರು ಮನೆ ಹೆಣ್ಣುಮಕ್ಕಳ ಸಂಭ್ರಮ ವಿಶೇಷವಾಗಿದೆ. ತವರು ಮನೆಯೊಂದಿಗೆ ಹೆಣ್ಣುಮಕ್ಕಳು ಭಾವನಾತ್ಮಕ ಸಂಬAಧ ಹೊಂದಿದ್ದು, ಅವರಿಗೆ ದೊರೆಯುವ ಗೌರವ ಹೆಮ್ಮೆಯ ಸಂಗತಿಯಾಗಿದೆ ಎಂದರು.
ತವರು ಮನೆಗೆ ಆಗಮಿಸುವ ಹೆಣ್ಣುಮಕ್ಕಳಿಗೆ ಯಾವುದೇ ನೋವಾಗದಂತೆ ನೋಡಿಕೊಳ್ಳಬೇಕು. ಆಸ್ತಿ ವಿಚಾರದ ಕಲಹ ಹಾಗೂ ವ್ಯಾಜ್ಯಗಳಿಂದ ತವರು ಮನೆಯ ಸಂಬAಧಗಳು ಕಳಚಿಕೊಳ್ಳುತ್ತಿರುವುದು ವಿಷಾದನೀಯ ಎಂದು ಹೇಳಿದರು.
ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಬೆಂಗಳೂರು ಕೊಡವ ಸಮಾಜ ಬೆಂಗಳೂರಿನ ಕೊಡವರಿಗೆ ಮಾತ್ರ ಸೀಮಿತವಾಗಿಲ್ಲ. ಅದು ಇಡೀ ಕೊಡವ ಜನಾಂಗದ ಆಸ್ತಿಯಾಗಿದೆ. ಕೊಡವ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ಪೋಷಣೆಗೆ ನಿರಂತರ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದರು.
ಜನಸಂಖ್ಯೆ ಉಳಿಸಿಕೊಳ್ಳುವ ಮೂಲಕ ನಮ್ಮ ನೆಲವನ್ನು ಕಾಪಾಡಿಕೊಳ್ಳಬೇಕು. ಯುವ ಸಮುದಾಯ ಮಾದಕ ವಸ್ತುಗಳು ಹಾಗೂ ದುಶ್ಚಟಗಳಿಂದ ದೂರವಿರಬೇಕು. ಕೊಡವರ ಶೈಕ್ಷಣಿಕ ಪ್ರಗತಿಗಾಗಿ ವಿದ್ಯಾಸಂಸ್ಥೆಗಳನ್ನು ಆರಂಭಿಸಿ ಪ್ರೋತ್ಸಾಹಿಸುವ ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡವ ಸಮಾಜದ ಅಧ್ಯಕ್ಷ ಕೈಬುಲಿರ ಹರೀಶ್ ಅಪ್ಪಯ್ಯ ಮಾತನಾಡಿ, ಕೊಡವ ಜನಾಂಗದಲ್ಲಿ ಜನಸಂಖ್ಯೆ ಹೆಚ್ಚಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ಮೂರನೇ ಮಗು ಹೊಂದುವ ದಂಪತಿಗೆ ರೂ. ೫೦ ಸಾವಿರ ನಗದು ಬಾಂಡ್ ನೀಡುವ ಯೋಜನೆ ಜಾರಿಗೊಳಿಸಲಾಗಿದೆ. ಈಗಾಗಲೇ ಇಬ್ಬರು ದಂಪತಿಗೆ ಬಾಂಡ್ ನೀಡಲಾಗಿದೆ. ಇದೇ ವೇಳೆ ನಾಲ್ಕನೇ ಮಗು ಹೊಂದುವ ದಂಪತಿಗಳಿಗೆ ೧ ಲಕ್ಷ ನೀಡುವ ಯೋಜನೆಯನ್ನು ಘೋಷಿಸಿದರು.
ಈ ಸಂದರ್ಭ ಮೂರು ಮಕ್ಕಳನ್ನು ಹೊಂದಿದ ದಂಪತಿಗಳಾದ ಚೊಟ್ಟೆಯಂಡಮಾಡ ವಿನೋದ್ ಹಾಗೂ ಪೆಮ್ಮಂಡ ಭರತ್ ದಂಪತಿಗಳಿಗೆ ಬಾಂಡ್ ನೀಡಿ ಸನ್ಮಾನಿಸಲಾಯಿತು. ಬಾಂಡ್ ಮೊತ್ತಕ್ಕೆ ದೇಣಿಗೆ ನೀಡಿದ ಕೈಬುಲಿರ ಪ್ರಭು ಉತ್ತಯ್ಯ-ಶೈಲಾ ಉತ್ತಯ್ಯ ದಂಪತಿ ಹಾಗೂ ಚಿರಿಯಪಂಡ ಸುರೇಶ್ ನಂಜಪ್ಪ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೊಡವ ತÀಕ್ಕ್ ಎಳ್ತ್ಕಾರಡ ಕೂಟದ ವತಿಯಿಂದ ನಡೆದ ರಸಮಂಜರಿಯಲ್ಲಿ ಬಟ್ಟಿಯಂಡ ಲಿಖಿತ ಪಳಂಗಪ್ಪ, ಮಾಳೇಟಿರ ಅಜಿತ್ ಪೂವಣ್ಣ ಹಾಗೂ ಬೊಪ್ಪಂಡ ತ್ರಿಶೂಲ್ ಗಣಪತಿ ಕೊಡವ ಹಾಡುಗಳನ್ನು ಹಾಡಿ ರಂಜಿಸಿದರು. ‘ತಿಂಗಕೋರ್ ಮೊಟ್ಟ್ ತಲಕಾವೇರಿಕ್’ ಕೂಟದ ವತಿಯಿಂದ ನಡೆದ ಕೊಡವ ಜಾನಪದ ಕಲಾ ಪ್ರದರ್ಶನ, ಮಚ್ಚಮಾಡ ಕವಿತಾ ಸತೀಶ್ ಅವರ ನೃತ್ಯ ಗಮನ ಸೆಳೆಯಿತು.
ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್ ಸಮಾಜ ಬೆಳೆದು ಬಂದ ಹಾದಿಯಲ್ಲಿ ಹಿರಿಯರ ಕೊಡುಗೆಯನ್ನು ವಿವರಿಸಿದರು. ಸಮಾಜದ ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ಪತ್ತಾಲೋದಿ ಕಾರ್ಯಕ್ರಮದ ಆರಂಭದ ಉದ್ದೇಶ ಹಾಗೂ ಯಶಸ್ಸಿನ ಕುರಿತು ವಿವರಿಸಿದರು.
ನಿರ್ದೇಶಕಿ ಚಂಗುಲAಡ ಆಶ್ವಿನಿ ಸತೀಶ್ ಪ್ರಾರ್ಥಿಸಿದರು. ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ ಸ್ವಾಗತಿಸಿದರು. ಉಪ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ ವಂದಿಸಿದರು.
ಸಮಾರAಭದಲ್ಲಿ ದಾನಿಗಳಾದ ಕೈಬುಲಿರ ಪ್ರಭು ಉತ್ತಯ್ಯ, ಸಮಾಜದ ಕ್ರೀಡಾ ಕಾರ್ಯದರ್ಶಿ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರಾದ ಚಂಗುಲAಡ ಸತೀಶ್, ಮುಕ್ಕಾಟಿರ ಸಂದೀಪ್, ತಡಿಯಂಗಡ ಸೌಮ್ಯ ಕರುಂಬಯ್ಯ, ತೀತಿರ ಅನಿತಾ ಸುಬ್ಬಯ್ಯ, ಕೋಟ್ರಮಾಡ ರೇಷ್ಮಾ ಕಾರ್ಯಪ್ಪ, ಮಾಣೀರ ದೀಪಕ್, ತೀತಿರ ಸೋಮಣ್ಣ ಹಾಗೂ ಟಿ. ಶೆಟ್ಟಿಗೇರಿ ಆಟೋ ಮಾಲೀಕರು ಮತ್ತು ಚಾಲಕರ ಸಂಘದ ಅಧ್ಯಕ್ಷ ಚೊಟ್ಟೆಯಂಡಮಾಡ ಪ್ರವೀಣ್ ಪೊನ್ನಪ್ಪ ಉಪಸ್ಥಿತರಿದ್ದರು.