ಮಡಿಕೇರಿ ಅ. ೨೮: ಆತಿಥ್ಯಕ್ಕೆ ಹೆಸರುವಾಸಿಯಾಗಿರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಜಿಲ್ಲಾಡಳಿತದಿಂದ ಅಗತ್ಯ ಸಹಕಾರ ನೀಡಲಾಗುವುದು ಮತ್ತು ಸರಕಾರದ ಮಟ್ಟದಲ್ಲೂ ವ್ಯವಹರಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಸ್.ಜೆ. ಸೋಮಶೇಖರ್ ಭರವಸೆ ನೀಡಿದ್ದಾರೆ.

ಗಾಳಿಬೀಡು ಬಳಿಯ ಆಹಾನ್ ಹಿಲ್ಸ್ ರೆಸಾರ್ಟ್ನಲ್ಲಿ ನಡೆದ ಕೂರ್ಗ್ ಹೋಂಸ್ಟೇಸ್ ಅಸೋಸಿಯೇಷನ್‌ನ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು ಪ್ರವಾಸೋದ್ಯಮದ ಬೆಳವಣಿಗೆಗೆ ಸರ್ವರ ಸಹಕಾರ ಮತ್ತು ಸಲಹೆಗಳ ಅಗತ್ಯವಿದೆ ಎಂದರು.

ವರ್ಷದಿAದ ವರ್ಷಕ್ಕೆ ಜಿಲ್ಲೆಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಲೇ ಇದೆ. ಪ್ರವಾಸೋದ್ಯಮದ ಬೆಳವಣಿಗೆಯಲ್ಲಿ ಹೋಂಸ್ಟೇಗಳ ಪಾತ್ರ ಪ್ರಮುಖವಾಗಿದ್ದು, ಆತಿಥ್ಯದಲ್ಲಿ ಕೊರತೆಯಾಗಬಾರದು. ಒಂದು ಬಾರಿ ಬಂದ ಪ್ರವಾಸಿಗರು ಮತ್ತೆ ಮತ್ತೆ ಬರುವಂತೆ ಮಾಡುವ ವಾತಾವರಣವನ್ನು ಸೃಷ್ಟಿಸಬೇಕು. ಹೋಂಸ್ಟೇಗಳಿಗೆ ಸಂಬAಧಿಸಿದ ಯಾವುದೇ ಸಮಸ್ಯೆಗಳಿದ್ದರೂ ಮುಕ್ತವಾಗಿ ಗಮನಕ್ಕೆ ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ತರಬಹುದು. ಜಿಲ್ಲಾಡಳಿತದ ಮೂಲಕ ಆಗದೆ ಇರುವ ಕೆಲಸವನ್ನು ಸರಕಾರದ ಮಟ್ಟದಲ್ಲಿ ಚರ್ಚಿಸಿ ಅಗತ್ಯ ಸಹಕಾರ ನೀಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.

ಕೊಡಗು ಜಿಲ್ಲೆಗೆ ವಾರ್ಷಿಕ ೫೦ ಲಕ್ಷಕ್ಕೂ ಅಧಿಕ ಪ್ರವಾಸಿಗರು ಆಗಮಿಸುತ್ತಿದ್ದು, ವಾಹನಗಳ ನಿಲುಗಡೆಗೆ ಸಮಸ್ಯೆ ಎದುರಾಗಿದೆ. ಸೂಕ್ತ ಪಾರ್ಕಿಂಗ್ ವ್ಯವಸ್ಥೆಯ ಅಗತ್ಯವಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆಯಬೇಕಾಗಿದೆ. ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಆವರಣ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣ, ಗಾಂಧಿ ಮೈದಾನ ವ್ಯಾಪ್ತಿ, ಖಾಸಗಿ ಬಸ್ ನಿಲ್ದಾಣದ ಸಮೀಪ ಪಾರ್ಕಿಂಗ್ ವ್ಯವಸ್ಥೆ ಮಾಡಬಹುದಾಗಿದೆ. ಕಾವೇರಿ ಕಲಾಕ್ಷೇತ್ರವಿದ್ದ ಸ್ಥಳದಲ್ಲಿ ಎರಡು ಅಂತಸ್ತಿನ ಪಾರ್ಕಿಂಗ್ ಸಂಕೀರ್ಣ ನಿರ್ಮಾಣಗೊಳ್ಳುತ್ತಿದ್ದು, ಸ್ವಲ್ಪ ಮಟ್ಟಿಗೆ ಸಮಸ್ಯೆ ಬಗೆಹರಿಯಬಹುದು ಎಂದರು.

ಹೋAಸ್ಟೇಗಳ ಸುರಕ್ಷತೆ ಮತ್ತು ಮಾಲೀಕರುಗಳ ಹಿತದೃಷ್ಟಿಯಿಂದ ಅಧಿಕಾರಿಗಳು ಮಾಹಿತಿ ಬಯಸಿದಾಗ ಅದನ್ನು ನೀಡಿ ಸಹಕರಿಸಬೇಕು. ತೊಂದರೆ ನೀಡುವುದಕ್ಕಾಗಿ ಯಾವುದೇ ಮಾಹಿತಿಯನ್ನು ಸಂಗ್ರಹಿಸುತ್ತಿಲ್ಲ, ಹೋಂಸ್ಟೇಗಳ ಸಂಪೂರ್ಣ ವಿವರ ಜಿಲ್ಲಾಡಳಿತಕ್ಕೆ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ಸಹಕಾರ ನೀಡಬೇಕು ಮತ್ತು ನಿಯಮವನ್ನು ಪಾಲಿಸಬೇಕು, ಸ್ವಚ್ಛತೆಯನ್ನು ಕಾಪಾಡಬೇಕು. ನಿಯಮಗಳನ್ನು ಪಾಲಿಸಿದಾಗ ಮಾತ್ರ ಜಿಲ್ಲಾಡಳಿತದಿಂದ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹಾಗೂ ಪ್ರವಾಸೋದ್ಯಮದ ಅಭಿವೃದ್ಧಿಗೆ ಒತ್ತು ನೀಡಲು ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಮಾತನಾಡಿ ಹೋಂಸ್ಟೇಗಳು ಹಾಗೂ ಪ್ರವಾಸಿಗರ ಸುರಕ್ಷತೆಗೆ ಪೊಲೀಸ್ ಇಲಾಖೆ ಬದ್ಧವಾಗಿದೆ. ಕಾನೂನು, ಸುವ್ಯವಸ್ಥೆ ಕಾಪಾಡಲು ಹೋಂಸ್ಟೇ ಮಾಲೀಕರುಗಳು ಇಲಾಖೆಯೊಂದಿಗೆ ಕೈಜೋಡಿಸಬೇಕು ಮತ್ತು ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಹೋಂಸ್ಟೇಗೆ ಬರುವ ಅತಿಥಿಗಳ ಹಿನ್ನೆಲೆಯನ್ನು ತಿಳಿದುಕೊಳ್ಳಬೇಕು, ಅಗತ್ಯ ದಾಖಲೆಯ ಪ್ರತಿಗಳನ್ನು ಪರಿಶೀಲಿಸಬೇಕು. ಸಿಸಿ ಕ್ಯಾಮರಾಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು, ಹೋಂಸ್ಟೇಗಳ ನೋಂದಣಿಯಾಗಿರಬೇಕು. ಹೋಂಸ್ಟೇಗಳಿಗೆ ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಸಂದರ್ಭ ಎಚ್ಚರ ವಹಿಸಬೇಕು. ಜಿಲ್ಲೆಯಲ್ಲಿ ವಾಹನಗಳ ನಿಲುಗಡೆಗೆ ಸ್ಥಳಾವಕಾಶದ ಕೊರತೆ ಇರುವುದರಿಂದ ಪಾರ್ಕಿಂಗ್ ವ್ಯವಸ್ಥೆಗೆ ಆದ್ಯತೆ ನೀಡಬೇಕೆಂದು ಎಸ್‌ಪಿ ಸಲಹೆ ನೀಡಿದರು.

ಮಡಿಕೇರಿ ನಗರದಲ್ಲಿ ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತದೊಂದಿಗೆ ಚಿಂತನೆ ನಡೆಸಲಾಗುತ್ತಿದೆ. ಈ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕೆಂದು ತಿಳಿಸಿದರು.

ಯಾವುದೇ ಸಾಧನೆಗೆ ವಯಸ್ಸಿನ ಅಡ್ಡಿಯಿಲ್ಲ ಎನ್ನುವುದಕ್ಕೆ ಕೊಡಗು ಸಾಕ್ಷಿಯಾಗಿದೆ ಮತ್ತು ನನಗೆ ಪ್ರೇರಣೆಯಾಗಿದೆ. ಹೋಂಸ್ಟೇ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ಹಿರಿಯರು ತೊಡಗಿಸಿಕೊಂಡಿದ್ದಾರೆ. ಯಾವುದೇ ಕಾರ್ಯಕ್ರಮಗಳಲ್ಲಿ ೫೦ ವರ್ಷ ಮೇಲ್ಪಟ್ಟವರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಎಸ್‌ಪಿ ಬಿಂದುಮಣಿ ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕೂರ್ಗ್ ಹೋಂಸ್ಟೇಸ್ ಅಸೋಸಿಯೇಷನ್‌ನ ಅಧ್ಯಕ್ಷೆ ಮೋಂತಿ ಗಣೇಶ್ ಹೋಂಸ್ಟೇಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು, ನೋಂದಣಿ ಮಾಡಿಸಿಕೊಂಡಿರುವವರು ತಮ್ಮ ಅಕ್ಕಪಕ್ಕದ ಹೋಂಸ್ಟೇಗಳಿಗೆ ನೋಂದಣಿ ಮಾಡಿಸಿಕೊಳ್ಳುವಂತೆ ಮನವೊಲಿಸಬೇಕು. ನೋಂದಣಿ ಮಾಡುವುದರಿಂದ ಅನೇಕ ಲಾಭಗಳಿವೆ ಎಂದು ವಿವರಿಸಿದರು.

ಅಸೋಸಿಯೇಷನ್‌ನ ಬೆಳವಣಿಗೆಗೆ ಮತ್ತು ಪ್ರವಾಸೋದ್ಯಮದ ಅಭಿವೃದ್ಧಿಗೆ ಅಧಿಕಾರಿಗಳು ನೀಡುತ್ತಿರುವ ಸಹಕಾರವನ್ನು ಸ್ಮರಿಸಿದರು.

ಉಪಾಧ್ಯಕ್ಷ ನವೀನ್ ಅಂಬೆಕಲ್ಲು ಮಾತನಾಡಿ, ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಹೋಂಸ್ಟೇಗಳು ನೀಡುತ್ತಿರುವ ಕೊಡುಗೆ ಮತ್ತು ಅಸೋಸಿಯೇಷನ್‌ನ ಜವಾಬ್ದಾರಿಗಳ ಕುರಿತು ವಿವರಿಸಿದರು.

ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಶಶಿಧರ್ ಮಾತನಾಡಿ, ಹೋಂಸ್ಟೇಗಳ ನೋಂದಣಿ ಪ್ರಕ್ರಿಯೆ ಅತ್ಯಂತ ಸರಳವಾಗಿದ್ದು, ಪ್ರತಿಯೊಬ್ಬರು ನೋಂದಣಿ ಮಾಡಿಸಿಕೊಂಡು ನಿಯಮ ಪಾಲಿಸುವಂತೆ ಮನವಿ ಮಾಡಿದರು.

ಕೊಡಗಿನ ಪ್ರವಾಸೋದ್ಯಮದ ಅಭಿವೃದ್ಧಿಗೆ ಪೂರಕವಾಗಿರುವ ಹೋಂಸ್ಟೇಗಳ ಬೆಳವಣಿಗೆಗೆ ಪ್ರವಾಸೋದ್ಯಮ ಇಲಾಖೆ ಬದ್ಧವಾಗಿದ್ದು, ಅಗತ್ಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಆರ್ಥಿಕ ಸೌಲಭ್ಯದ ಮಾಹಿತಿ

ಹೋಂಸ್ಟೇಗಳ ಅಭಿವೃದ್ಧಿ ಹಾಗೂ ಮಾಲೀಕರುಗಳಿಗೆ ದೊರೆಯುವ ಆರ್ಥಿಕ ಸೌಲಭ್ಯಗಳ ಕುರಿತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ಅಧಿಕಾರಿಗಳು ಮಾಹಿತಿ ನೀಡಿದರು. ಹೋಂಸ್ಟೇಗಳಿಗೆ ಸಾಲ ಸೌಲಭ್ಯಗಳನ್ನು ಪಡೆಯುವ ವಿಧಾನ ಹಾಗೂ ಬ್ಯಾಂಕ್‌ಗಳ ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು.

ಇದೇ ಸಂದರ್ಭ ಕೇಂದ್ರ ಸರ್ಕಾರದ ಸೂರ್ಯಘರ್ ಯೋಜನೆಯಡಿ ಮನೆಗಳಿಗೆ ಸೌರ ಫಲಕಗಳನ್ನು ಅಳವಡಿಸುವುದು, ಸೌರಶಕ್ತಿ ಯೋಜನೆಗಳು ಹಾಗೂ ಲಭ್ಯವಿರುವ ಸಬ್ಸಿಡಿ ಸೌಲಭ್ಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.

ನೂತನ ಅಧ್ಯಕ್ಷರಾಗಿ ಮೀನಾ ಕಾರ್ಯಪ್ಪ ಆಯ್ಕೆ

ಸಭೆಯಲ್ಲಿ ಕೂರ್ಗ್ ಹೋಂಸ್ಟೇಸ್ ಅಸೋಸಿಯೇಷನ್‌ನ ನೂತನ ಅಧ್ಯಕ್ಷರನ್ನಾಗಿ ಮೀನಾ ಕಾರ್ಯಪ್ಪ ಅವರನ್ನು ಆಯ್ಕೆ ಮಾಡಲಾಯಿತು.

ಉಪಾಧ್ಯಕ್ಷರಾಗಿ ನವೀನ್ ಅಂಬೆಕಲ್ಲು ಪುನರಾಯ್ಕೆಯಾದರು, ಕಾರ್ಯದರ್ಶಿಯಾಗಿ ಮದನ್ ಸೋಮಣ್ಣ ಹಾಗೂ ಕೋಶಾಧಿಕಾರಿಯಾಗಿ ಹೇಮ್ ಮಾದಪ್ಪ ನೇಮಕಗೊಂಡರು.

ಇದೇ ಸಂದರ್ಭ ನಿಕಟಪೂರ್ವ ಅಧ್ಯಕ್ಷೆ ಮೋಂತಿ ಗಣೇಶ್ ಅವರ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಿ ಗೌರವಿಸಲಾಯಿತು.

ಅಸೋಸಿಯೇಷನ್‌ನ ಸದಸ್ಯರುಗಳು ಕೊಡಗಿನ ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಮೂಲಭೂತ ಸೌಲಭ್ಯಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು.