ಮಡಿಕೇರಿ, ಅ. ೨೮: ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡಿಗೆ ಕ್ರೀಡಾ ಶಾಲೆಯಲ್ಲಿ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿ, ಸರ್ಕಾರದ ಸ್ವತ್ತುಗಳನ್ನು ಅಕ್ರಮವಾಗಿ ಗುಜರಿಗೆ ಮಾರಾಟ ಮಾಡಲು ಯತ್ನಿಸಿದ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಕರವೇ ಸ್ವಾಭಿಮಾನಿ ಸೇನೆಯ ಕಾರ್ಯಾಚರಣೆಯಿಂದಾಗಿ ಈ ಅಕ್ರಮ ದಂಧೆ ಪತ್ತೆಯಾಗಿದ್ದು, ತಪ್ಪಿತಸ್ಥರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ವಿಸ್ಮಯ ಚಕ್ರವರ್ತಿ ಮತ್ತು ವಾರ್ಡನ್ ಸವಿತಾ ಎಂಬುರು ಶಾಲೆಗೆ ಸೇರಿದ ಹಳೆಯ ಕಿಟಕಿಗಳು, ಕುರ್ಚಿಗಳು, ವಿದ್ಯುತ್ ಮೀಟರ್ಗಳು, ವೈರಿಂಗ್ ಸಾಮಗ್ರಿಗಳು, ಕಾಗದಪತ್ರಗಳು ಹಾಗೂ ಇತರ ಮೌಲ್ಯಯುತ ವಸ್ತುಗಳನ್ನು ಯಾವುದೇ ಸಾರ್ವಜನಿಕ ಪ್ರಕಟಣೆ ಅಥವಾ ಸರ್ಕಾರದ ಅಧಿಕೃತ ಟೆಂಡರ್ ಕರೆಯದೆ, ತಮಗೆ ಮನಬಂದAತೆ ಖಾಸಗಿ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಸರ್ಕಾರಿ ನಿಯಮಾವಳಿಗಳ ಪ್ರಕಾರ ಇಲಾಖಾ ಹಂತದಲ್ಲಿ ಹರಾಜು ಪ್ರಕ್ರಿಯೆ ನಡೆಸಬೇಕಿದ್ದ ವಸ್ತುಗಳನ್ನು, ಮಾರುತಿ ಓಮ್ನಿ ವಾಹನದ (ಏಂ-೧೨-ಓ-೧೩೨೦) ಮಾಲೀಕರೊಂದಿಗೆ ಶಾಮೀಲಾಗಿ ಗುಟ್ಟಾಗಿ ಮಾರಾಟ ಮಾಡಿ ಸಾಗಿಸಲಾಗುತ್ತಿತ್ತು. ಈ ಅಕ್ರಮದ ಕುರಿತು ಸಾರ್ವಜನಿಕರಿಂದ ಮಾಹಿತಿ ಪಡೆದ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ಪದಾಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಸಾಗಿಸಲಾಗುತ್ತಿದ್ದ ಗುಜರಿ ಸಾಮಗ್ರಿಗಳನ್ನು ವಾಹನ ಸಮೇತ ತಡೆದು, ಮರಳಿ ಕೂಡಿಗೆ ಕ್ರೀಡಾ ಶಾಲೆಗೆ ತಂದು ಹಾಕಿಸಿದ್ದಾರೆ.
ಜನರ ತೆರಿಗೆ ಹಣದಿಂದ ನಿರ್ಮಾಣವಾದ ಸರ್ಕಾರಿ ಶಾಲೆಯ ಆಸ್ತಿಯನ್ನು ಕದ್ದು ಮಾರಾಟ ಮಾಡಲು ಇವರಿಗೆ ಅಧಿಕಾರ ಕೊಟ್ಟವರು ಯಾರು?” ಎಂದು ಕರವೇ ಸ್ವಾಭಿಮಾನಿ ಸೇನೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ಈ ಸಂಬAಧ ಅಕ್ರಮ ಎಸಗಿದ ಸಹಾಯಕ ನಿರ್ದೇಶಕಿ ವಿಸ್ಮಯ ಚಕ್ರವರ್ತಿ, ವಾರ್ಡನ್ ಸವಿತಾ ಹಾಗೂ ಅಕ್ರಮ ಸಾಗಾಟಕ್ಕೆ ಸಾಥ್ ನೀಡಿದ ಮಾರುತಿ ಓಮ್ನಿ ವಾಹನದ ಮಾಲೀಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಕಾರ್ಯಾಚರಣೆ ಹಾಗೂ ಪ್ರತಿಭಟನೆಯ ಸಂದರ್ಭ ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ಮತ್ತು ಕರವೇ ಸ್ವಾಭಿಮಾನಿ ಸೇನೆ ಗೌರವಾಧ್ಯಕ್ಷÀ ನಂಜಪ್ಪ, ಕರವೇ ಸ್ವಾಭಿಮಾನಿ ಸೇನೆ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಮುರುಗೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಣಿಕಂಠ, ಜಿಲ್ಲಾ ಖಜಾಂಜಿ ಅಂತೋಣಿ, ಕುಶಾಲನಗರ ತಾಲೂಕು ಅಧ್ಯಕ್ಷ ಶಿವು, ಕುಶಾಲನಗರ ಕಾರ್ಮಿಕ ಘಟಕದ ಅಧ್ಯಕ್ಷ ಚಂದ್ರ, ಕುಶಾಲನಗರ ನಗರ ಘಟಕದ ಅಧ್ಯಕ್ಷÀ ಪರಮೇಶ್, ಕುಶಾಲನಗರ ಕರವೇ ಸ್ವಾಭಿಮಾನಿ ಸೇನೆ ಮಹಿಳಾ ಘಟಕದ ಗೌರವಾಧ್ಯಕ್ಷೆ ನಾಗರತ್ನ, ಕುಶಾಲನಗರ ತಾಲೂಕು ಮಹಿಳಾ ಘಟಕದ ಉಪಾಧ್ಯಕ್ಷೆ ದಿವ್ಯ ಡಿಸೋಜ ಹಾಗೂ ಮುಖಂಡರಾದ ಬಾಲಣ್ಣ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.