ಮಡಿಕೇರಿ, ಅ. ೨೮: ನಗರದ ಡಾ. ಬಿ.ಆರ್. ಅಂಬೇಡ್ಕರ್ ಶತಮಾನೋತ್ಸವ ಭವನಕ್ಕೆ ನೇಮಕಗೊಂಡಿರುವ ಆಡಳಿತಾಧಿಕಾರಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ, ಭವನದ ಆಡಳಿತ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್, ಸಿದ್ದಾಪುರ ರಸ್ತೆಯಲ್ಲಿರುವ ಅಂಬೇಡ್ಕರ್ ಭವನದ ಕಾರ್ಯನಿರ್ವಹಣೆಯಲ್ಲಿ ಹಲವು ಲೋಪದೋಷಗಳು ಕಂಡುಬAದಿದ್ದು, ಅವ್ಯವಹಾರಗಳ ಕುರಿತು ಹಲವು ಬಾರಿ ಗಮನ ಸೆಳೆಯಲಾಗಿತ್ತು. ಈ ಸಂಬAಧ ನಿರಂತರ ಹೋರಾಟ ನಡೆಸಿದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತನಿಖೆಗೆ ಸೂಚಿಸಿದ್ದರು ಎಂದು ತಿಳಿಸಿದರು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಸಹಕಾರ ಸಂಘಗಳ ಉಪನಿಬಂಧಕರು ನಡೆಸಿದ ವಿಚಾರಣೆಯಲ್ಲಿ ನಿಗದಿತ ಅವಧಿಯಲ್ಲಿ ಚುನಾವಣೆ ನಡೆಸದಿರುವುದು ಹಾಗೂ ಲೆಕ್ಕಪರಿಶೋಧನೆ ಮಾಡದಿರುವುದು ಸೇರಿದಂತೆ ಹಲವು ಅಂಶಗಳು ಬೆಳಕಿಗೆ ಬಂದಿದ್ದವು. ಈ ಹಿನ್ನೆಲೆಯಲ್ಲಿ ಆಡಳಿತಾಧಿ ಕಾರಿ ನೇಮಕಕ್ಕೆ ಜಿಲ್ಲಾಧಿ ಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು ಎಂದರು. ಸರ್ಕಾರ ಸೆ. ೨೪ರಂದು ಸಹಕಾರ ಅಭಿವೃದ್ಧಿ ಅಧಿಕಾರಿ ಹೇಮಂತ್ ಕುಮಾರ್ ಅವರನ್ನು ಅಂಬೇಡ್ಕರ್ ಭವನದ ಆಡಳಿತಾಧಿಕಾರಿಯಾಗಿ ನೇಮಕ ಮಾಡಿದೆ. ಆದರೆ, ಇದುವರೆಗೆ ಅವರು ಕರ್ತವ್ಯ ವಹಿಸಿಕೊಂಡಿಲ್ಲ. ಆದ್ದರಿಂದ ಕೂಡಲೇ ಜವಾಬ್ದಾರಿ ವಹಿಸಿಕೊಂಡು ಭವನದ ಆಡಳಿತವನ್ನು ಸರಿಪಡಿಸಬೇಕು. ಪ್ರಸ್ತುತ ಇರುವ ಸಮಿತಿಯನ್ನು ವಿಸರ್ಜಿಸಿ, ಕಾನೂನುಬದ್ಧವಾಗಿ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು. ಜಿಲ್ಲಾ ಸಂಚಾಲಕಿ ಗಾಯತ್ರಿ ನರಸಿಂಹ ಮಾತನಾಡಿ, ಕಾನೂನುಬದ್ಧವಾಗಿ ನಡೆಸಿದ ಹೋರಾಟದ ಫಲವಾಗಿ ಇದೀಗ ನ್ಯಾಯ ದೊರೆತಿದೆ. ನೇಮಕಗೊಂಡಿರುವ ಆಡಳಿತಾಧಿಕಾರಿ ಕೂಡಲೇ ಕರ್ತವ್ಯಕ್ಕೆ ಹಾಜರಾಗಿ ಭವನದ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಮಿತಿ ಸಂಚಾಲಕ ಕೆ.ಪಿ. ರಾಜು, ಕಾರ್ಯಕಾರಿ ಸಮಿತಿ ಸದಸ್ಯ ದೇವರಾಜು ಹಾಗೂ ಜಿಲ್ಲಾ ಸಂಚಾಲಕಿ ಪ್ರೇಮಾ ಕೃಷ್ಣಪ್ಪ ಉಪಸ್ಥಿತರಿದ್ದರು.