ವೀರಾಜಪೇಟೆ, ಅ. ೨೮: ಎಲ್ಲಾ ದೇಶೀಯ ಕ್ರೀಡೆಗಳಿಗೆ ತನ್ನದೆಯಾದ ಹಿನ್ನೆಲೆಗಳಿವೆ. ದೇಹ ಸುಸ್ಥಿರವಾಗಿರಲು ಕ್ರೀಡೆಗಳು ಸಹಕಾರಿಯಾಗಿದ್ದು, ಉಳಿವಿಗಾಗಿ ಯುವ ಜನಾಂಗವು ಪ್ರಯತ್ನಿಸಬೇಕು ಎಂದು ವಕೀಲರು ಮತ್ತು ಭಾ.ಜ.ಪ. ಪ್ರಮುಖರಾದ ಪಟ್ಟಡ ರೀನಾ ಪ್ರಕಾಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಯುನಿಕ್ ಬಾಯ್ಸ್ ಕೊಡಗು (ಯು.ಬಿ.ಕೆ) ತೋರ ಮತ್ತು ರಾಮನಗರ ಬಾಲಕರ ಸಂಘದ ವತಿಯಿಂದ ದಸರಾ ಹಬ್ಬದ ಪ್ರಯುಕ್ತ ಎರಡನೇ ವರ್ಷದ ಜಿಲ್ಲಾಮಟ್ಟದ ೧೮ ವರ್ಷ ಕೆಳಗಿರುವ ಬಾಲಕರ ಕಬಡ್ಡಿ ಪಂದ್ಯಾವಳಿ ನಗರದ ತಾಲೂಕು ಮೈದಾನದಲ್ಲಿ ಆಯೋಜನೆಗೊಂಡಿತ್ತು.
ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರೀನಾ ಪ್ರಕಾಶ್, ಬಾಲ್ಯದಲ್ಲೇ ಕ್ರೀಡೆಗಳ ಜೊತೆಗಿರುವ ಬಂಧವನ್ನು ಬೆಳೆಸಿಕೊಂಡಲ್ಲಿ ಆರೋಗ್ಯದ ಬದುಕು ಸಾಗಿಸಲು ಸಹಕಾರಿ. ಮೊಬೈಲ್ ಮಿತವಾಗಿ ಬಳಸಿ ಕ್ರೀಡೆಗಳಲ್ಲಿ ತೊಡಗಿಸಿಕೊಂಡಲ್ಲಿ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ ಎಂದು ಹೇಳಿದರು.
ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎA. ಪರಮೇಶ್ವರ ಮಾತನಾಡಿ, ಕಬಡ್ಡಿ ಗ್ರಾಮೀಣ ಭಾಗದ ಕ್ರೀಡೆಯಾಗಿದ್ದು. ಕಠಿಣ ಅಭ್ಯಾಸ, ಚಾಕಚಕ್ಯತೆಯೊಂದಿಗೆ ಆಡಿದಲ್ಲಿ ಕ್ರೀಡೆಗೆ ಗೌರವ. ಕೆಲವು ದೇಶಿಯ ಕ್ರೀಡೆಗಳಿಗೆ ಪೌರಾಣಿಕ ಮತ್ತು ಐತಿಹಾಸಿಕ ಹಿನ್ನೆಲೆಗಳಿವೆ. ಕ್ರೀಡೆಗೆ ಬೆಲೆತೆತ್ತು ಆರೋಗ್ಯ ಹಿತದೃಷ್ಟಿಯಿಂದ ಆಯ್ಕೆ ಮಾಡಿದ ಕ್ರೀಡೆಯೊಂದಿಗೆ ಬೆರೆತಲ್ಲಿ ಉತ್ತಮ ಕ್ರೀಡಾಪಟುವಾಗಿ ಹೊರಹೊಮ್ಮಲು ಸಾಧ್ಯ. ಗ್ರಾಮೀಣ ಕ್ರೀಡೆಗಳು ಉಳಿಯಬೇಕು ಮತ್ತು ಈ ಮಣ್ಣಿನ ಸೊಗಡು ವಿಶ್ವದೆಲ್ಲೆಡೆ ಪಸರಿಸುವಂತಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ಪಂದ್ಯಾವಳಿಯ ಪೋಷಕರು, ಕೆದಮುಳ್ಳೂರು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕೆ.ಅರ್. ರಾಮಯ್ಯ, ಪಟ್ಟಡ ಪ್ರಕಾಶ್ ಉಪಸ್ಥಿತರಿದ್ದರು. ಪಂದ್ಯಾವಳಿಯಲ್ಲಿ ಜಿಲ್ಲೆಯ ೮ ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ತೀರ್ಪುಗಾರರಾಗಿ ನಿಕಿಲ್ ಉಣ್ಣಿ ಮತ್ತು ಕಾರ್ತಿಕ್ ಅವರುಗಳು ಕರ್ತವ್ಯ ನಿರ್ವಹಿಸಿದರು. ಲೀಗ್ ಮಾದರಿಯಲ್ಲಿ ನಡೆದ ಪಂದ್ಯದಲ್ಲಿ ನ್ಯೂ ಫ್ರೆಂಡ್ಸ್ ತಿತಿಮತಿ ತಂಡ ಮೂರನೇ ತಂಡವಾಗಿ ಹೊರಹೊಮ್ಮಿತು. ಶಿವು ಫ್ರೆಂಡ್ಸ್ ನೆಲ್ಲಿಹುದಿಕೇರಿ ಎ ತಂಡ ಮತ್ತು ಎಸ್.ಬಿ.ಸಿ. ನೆಲ್ಲಿಹುದಿಕೇರಿ ತಂಡ ಫೈನಲ್ ಹಂತಕ್ಕೆ ಪ್ರವೇಶ ಪಡೆದು, ಶಿವು ಫ್ರೆಂಡ್ಸ್ ತಂಡ ೨೦-೧೨ ಅಂಕಗಳೊAದಿಗೆ ವಿಜಯವಾಯಿತು. ಬೆಸ್ಟ್ ಆಲ್ರೌಂಡರ್ ನಿತಿನ್, ಬೆಸ್ಟ್ ಡಿಫೆಂಡರ್ ಚೇತನ್, ಉತ್ತಮ ಹಿಡಿತಗಾರ ಉಣ್ಣಿ, ಉತ್ತಮ ತಂಡ ಯು.ಬಿ.ಕೆ. (ಬಿ) ತಂಡ ಪಡೆದುಕೊಂಡಿತು. ವಿಜೇತ ತಂಡಗಳಿಗೆ ನಗದು ಮತ್ತು ಟ್ರೋಫಿ ನೀಡಿ ಗೌರವಿಸಲಾಯಿತು.
ಯು.ಬಿ.ಕೆ ಬಾಲಕರ ಸಂಘದ ಪದಾಧಿಕಾರಿಗಳು, ಸದಸ್ಯರು, ವಿವಿಧ ತಂಡಗಳ ಕ್ರೀಡಾಪಟುಗಳು, ಆಯೋಜಕರು, ಪ್ರಯೋಜಕರು, ಕ್ರೀಡಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.
- ಕಿಶೋರ್ ಕುಮಾರ್ ಶೆಟ್ಟಿ