ಮಡಿಕೇರಿ, ಅ. ೨೭: ಪ್ರಜಾಪ್ರಭುತ್ವ ವ್ಯವಸ್ಥೆಯಂತೆ ಕಳೆದ ಐದು ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದಿದ್ದ ಕೊಡಗು ಜಿಲ್ಲೆಯ ಏಕೈಕ ನಗರಸಭೆ ಮಡಿಕೇರಿಯ ಅಧಿಕಾರಾವಧಿ ಇದೀಗ ಮುಕ್ತಾಯಗೊಂಡಿದೆ. ೨೯.೧೦.೨೦೨೧ ರಂದು ಮಡಿಕೇರಿ ನಗರಸಭೆ ಚುನಾಯಿತ ಪ್ರತಿನಿಧಿಗಳು ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಅಕ್ಟೋಬರ್ ೨೮ ರಂದು (ಇಂದು) ಇವರುಗಳ ಅವಧಿ ಪೂರ್ಣಗೊಳ್ಳಲಿದ್ದು, ಹಾಲಿ ಸದಸ್ಯರೆಲ್ಲರೂ ಮಾಜಿಗಳಾಗುತ್ತಿದ್ದಾರೆ.
ಈಗಿನ ಆಡಳಿತ ಮಂಡಳಿಯ ೫ ವರ್ಷಗಳ ಅವಧಿಯಲ್ಲಿ ಮಡಿಕೇರಿ ನಗರ ಹಲವಷ್ಟು ಏಳು-ಬೀಳುಗಳನ್ನು ಕಂಡಿದೆ. ಟೀಕೆ-ಟಿಪ್ಪಣಿಗಳನ್ನು ಕೇಳಿದೆ. ಪ್ರತಿನಿಧಿಗಳು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ನೆರವೇರಿಸಿದ್ದೇವೆ ಎನ್ನುತ್ತಾರೆ. ಇದರ ನಡುವೆ ಸಾರ್ವಜನಿಕ ವಲಯದಲ್ಲಿ ನಗರ ವ್ಯಾಪ್ತಿಯಲ್ಲಿ ಈ ಬಾರಿ ನಿರೀಕ್ಷಿತ ಕೆಲಸ ಕಾರ್ಯಗಳು ನಡೆದಿಲ್ಲ ಎಂಬ ಆರೋಪಗಳೂ ಇವೆ. ಏನಿದ್ದರೂ ಮೌಲ್ಯಮಾಪನ ಪ್ರತಿನಿಧಿಗಳನ್ನು ಆರಿಸಿ, ಕಳುಹಿಸಿದ್ದ ಆಯಾ ವಾರ್ಡ್ನ ಮತದಾರರದ್ದು. ನಗರದ ಆಡಳಿತ ನಡೆಸಿದ ಕೆಲವು ಪ್ರಮುಖ ಜವಾಬ್ದಾರಿ ನಿರ್ವಹಿಸಿದವರ, ವಿಪಕ್ಷದಲ್ಲಿ ಪ್ರಮುಖರಾಗಿದ್ದವರ ಅಭಿಪ್ರಾಯಗಳನ್ನು ಇಲ್ಲಿ ನೀಡಲಾಗಿದೆ.
ಅನುದಾನದ ಕೊರತೆ ನಡುವೆಯೂ ಕೆಲಸ ಮಾಡಿದ್ದೇನೆ - ಕಲಾವತಿ
ತಾನು ನಗರಸಭೆ ಅಧ್ಯಕ್ಷೆಯಾಗಿ ಆಯ್ಕೆ ಆದ ಸಂದರ್ಭ ಜನರಿಗಾಗಿ ಸೇವೆ ಮಾಡುವ ಗುರಿ ಇಟ್ಟುಕೊಂಡಿದ್ದೆ; ಆದರೆ, ನಗರಸಭೆಗೆ ಅನುದಾನದ ಕೊರತೆ ಇತ್ತು. ಇದರ ನಡುವೆಯೂ ತನ್ನಿಂದಾದಷ್ಟು ಮಟ್ಟಿಗೆ ಉತ್ತಮ ಕೆಲಸಗಳನ್ನು ಮಾಡಿರುವ ತೃಪ್ತಿ ತನಗಿದೆ ಎಂದು ನಗರಸಭೆಯ ೨ನೇ ಅವಧಿ ಅಧ್ಯಕ್ಷೆ ಪಿ. ಕಲಾವತಿ ಹೇಳಿದರು.
ಅಧ್ಯಕ್ಷೆಯಾಗಿ ತಾನು ಒಂದೂವರೆ ವರ್ಷಗಳ ಕಾಲ ಕೆಲಸ ಮಾಡಿದ್ದು, ನಗರಸಭೆಯಲ್ಲಿದ್ದ ಅನುದಾನದಿಂದಲೇ ಜನಪರ ಕೆಲಸಗಳನ್ನೂ ಕೈಗೊಂಡಿದ್ದೇನೆ. ಕಸ ವಿಲೇವಾರಿ ಸಮಸ್ಯೆ ಸಂಬAಧ ಶಾಸಕರು ಕೂಡ ನಗರಸಭೆಯೊಂದಿಗೆ ಕೈಜೋಡಿಸಿದ್ದು, ಆ ಸಮಸ್ಯೆ ಆದಷ್ಟು ಶೀಘ್ರ ಪರಿಹಾರವಾಗಲಿದೆ. ಸದ್ಯದಲ್ಲಿಯೇ ನಗರಸಭೆಯ ಅನುದಾನದಿಂದ ನಗರಸಭಾ ಸದಸ್ಯರುಗಳಿಗೆ ತಲಾ ಹತ್ತು ಲಕ್ಷ ಅನುದಾನ ನೀಡಲಿದ್ದು, ಆ ಹಣವನ್ನು ಸದಸ್ಯರುಗಳು ಅವರವರ ವಾರ್ಡ್ಗಳಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಬಹುದಾಗಿದೆ ಎಂದು ಕಲಾವತಿ ಮಾಹಿತಿ ನೀಡಿದರು.
ಜನರ ಸಮಸ್ಯೆಗೆ ಸ್ಪಂದಿಸಿದ್ದೇನೆ : ಮಹೇಶ್ ಜೈನಿ
ಒಂದೂವರೆ ವರ್ಷಗಳ ಕಾಲ ನಗರಸಭೆ ಉಪಾಧ್ಯಕ್ಷನಾಗಿ ನಗರಸಭೆಯಲ್ಲಿ ಜನರ ಕೆಲಸ ಕಾರ್ಯಗಳು ಸಮರ್ಪಕವಾಗಿ ನಡೆಯುವಂತೆ ಮಾಡುವಲ್ಲಿ ಪ್ರಾಮಾಣಿಕವಾಗಿ ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ ಎಂದು ಎರಡನೇ ಅವಧಿಯ ಉಪಾಧ್ಯಕ್ಷ ಮಹೇಶ್ ಜೈನಿ ಹೇಳಿದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಕಸವಿಲೇವಾರಿ ಸಂಬAಧ ಶಾಶ್ವತವಾದ ಪರಿಹಾರ ಶಾಸಕರ ಸಹಕಾರದೊಂದಿಗೆ ಸದ್ಯದಲ್ಲೇ ಕಾರ್ಯರೂಪಕ್ಕೆ ಬರಲಿದೆ. ಸುಮಾರು ಒಂದೂವರೆ ಕೋಟಿ ವೆಚ್ಚದಲ್ಲಿ ರಾಜಾಸೀಟ್ ರಸ್ತೆ ಅಭಿವೃದ್ಧಿಯಾಗಲಿದೆ. ನಗರದ ಇತರ ಮುಖ್ಯರಸ್ತೆಗಳ ಅಭಿವೃದ್ಧಿಗೆ ದೊಡ್ಡಮಟ್ಟದ ಅನುದಾನದ ಅವಶ್ಯಕತೆಯಿತ್ತು. ಜೊತೆಗೆ ಮಳೆಯಿಂದಲೂ ಕೆಲವೊಂದು ಕೆಲಸ ಕಾರ್ಯಗಳಿಗೆ ತೊಡಕುಂಟಾಗಿತ್ತು. ನಗರ ವ್ಯಾಪ್ತಿಯಲ್ಲಿ ಹಲವಾರು ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಮಹೇಶ್ ಜೈನಿ ನುಡಿದರು.
ಅನುದಾನ ಬಂದಷ್ಟು ಅಭಿವೃದ್ಧಿ ಸಾಧ್ಯ - ಅನಿತಾ ಪೂವಯ್ಯ
ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸಬೇಕಿದೆ. ಅದರಲ್ಲೂ ಪ್ರಮುಖವಾಗಿ ಪಾರ್ಕಿಂಗ್ ವ್ಯವಸ್ಥೆ ಆಗಬೇಕಿದೆ. ತನ್ನ ಅವಧಿಯಲ್ಲಿ ಪಾರ್ಕಿಂಗ್ ವ್ಯವಸ್ಥೆಗಾಗಿ ಅನುದಾನ ಮೀಸಲಿಡಲಾಯಿತಾದರೂ ಜಾಗದ ಕೊರತೆಯಿಂದ ಅದು ಸಾಧ್ಯವಾಗಲಿಲ್ಲ. ನಗರಸಭೆಗೆ ಅನುದಾನ ಹೆಚ್ಚುಹೆಚ್ಚು ಬಂದಷ್ಟೂ ಅಭಿವೃದ್ಧಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ನಗರಸಭೆ ಬಿಜೆಪಿ ಆಡಳಿತದ ಮೊದಲ ಅವಧಿಯಲ್ಲಿ ಎರಡೂವರೆ ವರ್ಷಗಳ ಕಾಲ ಅಧ್ಯಕ್ಷೆಯಾಗಿದ್ದ ಅನಿತಾ ಪೂವಯ್ಯ ಅಭಿಪ್ರಾಯಿಸಿದ್ದಾರೆ.
ನಗರಸಭೆಯಲ್ಲಿ ಸಿಬ್ಬಂದಿ ಕೊರತೆ ನಡುವೆಯೂ ತನ್ನ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಲಾಗಿದೆ. ರಸ್ತೆ, ಚರಂಡಿ ವಿಚಾರದಲ್ಲಿ ಅನಿಯಮಿತ ಮಳೆಯಿಂದ ಸಮಸ್ಯೆ ಹೆಚ್ಚಾಯಿತು ಎಂದು ಅನಿತಾ ಪೂವಯ್ಯ ನುಡಿದರು.
ನ್ಯಾಯಯುತವಾಗಿ ಕೆಲಸ ಮಾಡಿದ್ದೇನೆ - ಸವಿತಾ ರಾಕೇಶ್
ಉಪಾಧ್ಯಕ್ಷೆಯಾಗಿ ಅವಕಾಶ ಸಿಕ್ಕಿದ್ದು, ಸಾರ್ವಜನಿಕರ ಸೇವೆ ಮಾಡಲು ಅನುಕೂಲವಾಯಿತು. ತನ್ನ ಬಳಿ ಸಮಸ್ಯೆ ಹೇಳಿಕೊಂಡು ಬಂದ ಸಾರ್ವಜನಿಕರಿಗೆ ತಕ್ಷಣವೇ ಸ್ಪಂದಿಸುವಲ್ಲಿ ತಾನು ಪ್ರಾಮಾಣಿಕ, ಪಾರದರ್ಶಕವಾಗಿ ಕೆಲಸ ಮಾಡಿದ್ದೇನೆ ಎಂದು ನಗರಸಭೆ ಬಿಜೆಪಿ ಆಡಳಿತದ ಮೊದಲ ಅವಧಿಯ ಉಪಾಧ್ಯಕ್ಷೆ ಸವಿತಾ ರಾಕೇಶ್ ಹೇಳಿದರು.
ತನ್ನ ಅವಧಿಯಲ್ಲಿ ಹಲವಷ್ಟು ಕೆಲಸಗಳನ್ನು ನಗರಕ್ಕಾಗಿ ಮಾಡಲಾಗಿದೆ. ಇತ್ತೀಚಿಗೆ ನಗರಸಭೆಗೆ ಬರುವ ಅನುದಾನವೂ ಕಡಿಮೆ ಆಗುತ್ತಿದ್ದು, ಹೆಚ್ಚು ಅನುದಾನ ಬಂದರೆ ಕೆಲಸ ಮಾಡಲು ಅನುಕೂಲವಾಗುತ್ತದೆ ಎಂದರಲ್ಲದೆ ಮಡಿಕೇರಿಯ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ತನ್ನ ಅಧಿಕಾರವಧಿಯಲ್ಲಿ ಶ್ರಮಿಸಿದ್ದೇನೆ ಎಂದು ಸವಿತಾ ರಾಕೇಶ್ ನುಡಿದರು.
ಎಂದೂ ಕಂಡರಿಯದ ಹದಗೆಟ್ಟ ಆಡಳಿತ - ಅಮಿನ್ ಮೊಯ್ಸಿನ್
ನಗರಸಭೆಯಲ್ಲಿ ಬಿಜೆಪಿ ಐದು ವರ್ಷಗಳ ಕಾಲ ನಡೆಸಿದ ಆಡಳಿತ ಎಂದೂ ಕಂಡರಿಯದ ಹದಗೆಟ್ಟ ಆಡಳಿತ ಎಂದು ನಗರಸಭೆಯ ವಿಪಕ್ಷವಾದ ಎಸ್ಡಿಪಿಐ ಸದಸ್ಯ ಅಮೀನ್ ಮೊಯ್ಸಿನ್ ಹೇಳಿದ್ದಾರೆ.
ಈ ಆಡಳಿತದಿಂದ ನಿರೀಕ್ಷಿತ ಅಭಿವೃದ್ಧಿ ಕೆಲಸಗಳು ನಡೆದಿಲ್ಲ. ಸ್ವಜನ ಪಕ್ಷಪಾತ, ಗುಂಪುಗಾರಿಕೆ, ಸ್ವಾರ್ಥಕ್ಕೆ ಆಡಳಿತ ಬಳಕೆಯಾಯಿತೆ ಹೊರತು ಜನಪರವಾದ ಯಾವುದೇ ಕೆಲಸಗಳು ನಡೆಯಲಿಲ್ಲ. ಅನುದಾನಗಳ ಸದ್ಭಳಕೆ ಆಗಲಿಲ್ಲ. ನಗರೋತ್ಥಾನ ಅನುದಾನದ ಶೇ ೪೦ರಷ್ಟು ಕಾಮಗಾರಿ ಇನ್ನೂ ನಡೆದಿಲ್ಲ. ಅನುದಾನವನ್ನು ಬಳಸಿಕೊಳ್ಳುವ ಸಾಮರ್ಥ್ಯ ಬಿಜೆಪಿ ಆಡಳಿತಕ್ಕಿಲ್ಲ ಎಂದು ಅಮೀನ್ ಮೊಯ್ಸಿನ್ ಆರೋಪಿಸಿದರು.
ಇಂತಹ ದುರಾಡಳಿತ ಕಂಡಿರಲಿಲ್ಲ - ರಾಜೇಶ್ ಯಲ್ಲಪ್ಪ
ತಾನು ಹಲವಾರು ವರ್ಷಗಳ ಕಾಲ ಮಡಿಕೇರಿ ನಗರಸಭೆಯ ಆಡಳಿತವನ್ನು ನೋಡಿದ್ದೇನೆ. ಆದರೆ, ಈ ಬಾರಿ ಇದ್ದಂತಹ ದುರಾಡಳಿತವನ್ನೂ ತಾನು ಇದುವರೆಗೂ ಕಂಡಿರಲ್ಲ ಎಂದು ನಗರಸಭೆಯ ಏಕೈಕ ಕಾಂಗ್ರೆಸ್ ಚುನಾಯಿತ ಸದಸ್ಯ ರಾಜೇಶ್ ಯಲ್ಲಪ್ಪ ಹೇಳಿದರು.
ಬಿಜೆಪಿ ಆಡಳಿತ ಕೇವಲ ರಾಜಕೀಯ ಮಾಡಲು ಅವರವರಲ್ಲೇ ಗುಂಪುಗಾರಿಕೆಗೆ ಹಾಗೂ ವೈಯಕ್ತಿಕ ವಿಚಾರಗಳಿಗಾಗಿ ಸೀಮಿತವಾಗಿತ್ತೆ ಹೊರತು ಒಂದೇ ಒಂದು ಸಭೆಗಳಲ್ಲಿ ಅಭಿವೃದ್ಧಿ ಪರ ಚರ್ಚೆಗಳಾಗಲಿಲ್ಲ; ನಗರದಲ್ಲೂ ಯಾವುದೇ ಅಭಿವೃದ್ಧಿ ಕೆಲಸವಾಗಿಲ್ಲ. ವಿಪಕ್ಷಗಳಗೆ ಅನುದಾನವನ್ನೂ ಸರಿಯಾಗಿ ನೀಡದೆ ವಿಪಕ್ಷದವರನ್ನು ಹೊರಗಿಟ್ಟು ಆಡಳಿತ ಮಾಡಲಾಯಿತು ಎಂದು ರಾಜೇಶ್ ಯಲ್ಲಪ್ಪ ದೂರಿದರು.
ನಿರೀಕ್ಷಿತ ಕೆಲಸಗಳಾಗಿಲ್ಲ - ಮುಸ್ತಫ
ನಗರಸಭೆಯ ಬಿಜೆಪಿ ಆಡಳಿತಾವಧಿಯಲ್ಲಿ ನಿರೀಕ್ಷಿತ ಕೆಲಸಗಳಾಗಲಿಲ್ಲ ಎಂದು ನಗರಸಭೆಯ ಏಕೈಕ ಜೆಡಿಎಸ್ ಸದಸ್ಯ ಮುಸ್ತಫ ಹೇಳಿದರು. ರಾಜ್ಯ ಸರಕಾರದಿಂದ ಅನುದಾನವೂ ಸರಿಯಾಗಿ ಬರುತ್ತಿರಲಿಲ್ಲ. ಜನರಿಗೆ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಕೆಲಸ ಮಾಡಲು ತನಗೆ ಸಾಧ್ಯವಾಗಲಿಲ್ಲ ಎಂಬ ನೋವಿನ ಜೊತೆಗೆ ಬಿಜೆಪಿ ಆಡಳಿತದ ಕಾರ್ಯವೈಖರಿ ಬೇಸರ ಮೂಡಿಸಿದೆ ಎಂದು ಮುಸ್ತಫ ನುಡಿದರು.