ಶನಿವಾರಸಂತೆ, ಅ. ೨೭: ಬೆಂಗಳೂರಿನ ಸಾಹಿತ್ಯ ಲೋಕ ಪಬ್ಲಿಕೇಶನ್ ಆಯೋಜಿಸಿದ್ದ “ಅಪರ್ಣ - ಶಾಂತಾಮಣಿ ಕಥಾ ಪುರಸ್ಕಾರ’’ ದಲ್ಲಿ ಉತ್ತಮ ೧೦ ಕಥಾ ಹಸ್ತಪ್ರತಿಗಳಲ್ಲೊಂದು ಕಥಾಗುಚ್ಛವಾಗಿ ಶನಿವಾರಸಂತೆಯ ನಾಟ್ಯ ಮಿಲನ ನೃತ್ಯ ಶಾಲೆಯ ನೃತ್ಯಗುರು ಮಿಲನಾ ಭರತ್ ಅವರ ಕಥೆಗಳ ಹಸ್ತಪ್ರತಿ ಆಯ್ಕೆಯಾಗಿದ್ದು ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಬೆಂಗಳೂರಿನ ಬನಶಂಕರಿಯ ಸುಚಿತ್ರ ಫಿಲಂ ಸೊಸೈಟಿಯ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಿಲನಾ ಗೌರವ ಪುರಸ್ಕಾರ ಸ್ವೀಕರಿಸಿದರು. ಈ ಸಂದರ್ಭ ತೀರ್ಪುಗಾರರಾದ ಡಾ. ಬಿ.ಜಿ. ಹರೀಶ್, ಕಥೆಗಾರರಾದ ಅಲಕಾ ತೀರ್ಥಹಳ್ಳಿ, ಎಂ.ಜೆ. ರಜನಿ, ನಾಗರಾಜ್ ವಸ್ತಾರೆ ಹಾಗೂ ಸಾಹಿತ್ಯ ಲೋಕ ಪಬ್ಲಿಕೇಶನ್ನ ರಘುವೀರ್ ಸಮರ್ಥ್ ಉಪಸ್ಥಿತರಿದ್ದರು.
ಮಿಲನಾ ಭರತ್ ಕೊಡಗು ಜಿಲ್ಲಾ ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲಾ ಅಭಿನಯ ಕಲಾ ಮಿಲನಾ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಕುದುಕುಳಿ ಭರತ್ - ಇಂದಿರಾವತಿ ದಂಪತಿಯ ಪುತ್ರಿಯಾಗಿರುವ ಮಿಲನಾ ಪ್ರವೃತ್ತಿಯಲ್ಲಿ ನಾಟ್ಯ ಕಲಾವಿದೆಯಾಗಿ, ಸಾಹಿತಿಯಾಗಿಯೂ ಗುರುತಿಸಿಕೊಂಡಿದ್ದಾರೆ.