ಮಡಿಕೇರಿ, ಅ. ೨೭: ಮಡಿಕೇರಿ ನಗರ ದಸರಾ ಅಂಗವಾಗಿ ನಡೆದ ಶೋಭಾಯಾತ್ರೆ ಸಂದರ್ಭ ಕೋಟೆ ಮಹಾಗಣಪತಿ ದೇವಾಲಯದ ಮಂಟಪಕ್ಕೆ ದಶಮಂಟಪ ಪ್ರದರ್ಶನದ ನಿಯಮದ ಪ್ರಕಾರವೇ ೫ ಅಂಕ ಕಡಿತ ಮಾಡಲಾಗಿದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ಪಾಂಡಿರ ಟಿ ಪೂಣಚ್ಚ ಅವರು ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ತೀರ್ಪುಗಾರಿಕೆ ಸಂದರ್ಭ ಕೋಟೆ ಗಣಪತಿ ದೇವಾಲಯ ೮೯ ಅಂಕ ಗಳಿಸಿತ್ತು. ಕೋಟೆ ಮಾರಿಯಮ್ಮ ದೇವಾಲಯ ೮೭.೫ ಅಂಕಗಳನ್ನು ಪಡೆದಿತ್ತು. ಆದರೆ, ಕೋಟೆ ಗಣಪತಿಯ ತೀರ್ಪಿನ ಪ್ರದರ್ಶನ ಮುಗಿದಿದ್ದರೂ ಬೆಳಿಗ್ಗೆ ೪ ಗಂಟೆಯವರೆಗೂ ಅದೇ ಸ್ಥಳದಲ್ಲಿ ತೀರ್ಪುಗಾರಿಕೆ ಪ್ರದರ್ಶನ ನಿಗದಿಯಾಗಿದ್ದ ದಂಡಿನ ಮಾರಿಯಮ್ಮ ದೇವಾಲಯದ ಮಂಟಪಕ್ಕೆ ಅನುವು ಮಾಡಿಕೊಟ್ಟಿರಲಿಲ್ಲ. ಈ ಕಾರಣದಿಂದ ಒಟ್ಟು ಅಂಕಗಳಿAದ ೫ ಅಂಕ ಕಡಿತಗೊಳಿಸಲಾಯಿತು. ಇದರಿಂದಾಗಿ ಕೋಟೆ ಮಾರಿಯಮ್ಮ ದೇವಾಲಯವು ೩ನೇ ಸ್ಥಾನವನ್ನು ತನ್ನದಾಗಿಸಿಕೊಂಡಿತು. ಸಾರ್ವಜನಿಕ ಹಾಗೂ ದಸರಾ ಸಮಿತಿಯ ಸಮ್ಮುಖದಲ್ಲಿಯೇ ಇದನ್ನು ಘೋಷಣೆ ಮಾಡಲಾಯಿತೆಂದು ಹೇಳಿದರು.

ಕೋಟೆ ಗಣಪತಿ ದಸರಾ ಸಮಿತಿಯ ಗೌರವ ಸಲಹೆಗಾರ ಬಿ.ಎಂ ರಾಜೇಶ್ ಅವರು, ಅಂಕಪಟ್ಟಿಯಲ್ಲಿ ತೀರ್ಪುಗಾರರು ಯಾವುದೇ ಅಂಕ ಕಡಿತ ಮಾಡಿರುವ ಉಲ್ಲೇಖವಿಲ್ಲ ಎಂದು ಆರೋಪಿಸಿದ್ದಾರೆ. ಆದರೆ ಅಂಕಪಟ್ಟಿಯಲ್ಲಿ ಅಂಕ ಕಡಿತ ಆಗಿ, ತೀರ್ಪುಗಾರರ ಸಹಿಯೂ ಆಗಿ ಅಂಕ ಕಡಿತಕ್ಕೆ ಕಾರಣವನ್ನೂ ನೀಡಲಾಗಿದೆ ಎಂದು ಅಂಕಪಟ್ಟಿಯನ್ನು ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಪೂಣಚ್ಚ ಅವರು ಪ್ರದರ್ಶಿಸಿದರು.

ಬೆಳಿಗ್ಗೆ ೪ ಗಂಟೆಗೆ ದಂಡಿನ ಮಾರಿಯಮ್ಮ ಮಂಟಪದ ತೀರ್ಪು ಸಮಯ ನಿಗದಿಯಾಗಿತ್ತು. ದಂಡಿನಮಾರಿಯಮ್ಮ ಮಂಟಪ ಪ್ರದರ್ಶನ ಸ್ಥಳದಲ್ಲಿ ಕೋಟೆ ಗಣಪತಿಯವರ ಮಂಟಪ ಇದ್ದುದರಿಂದ, ಮಂಟಪವನ್ನು ಅಲ್ಲಿಂದ ತೆರವು ಮಾಡುವಂತೆ ಮನವಿ ಮಾಡಲಾಯಿತು. ಆದರೆ ಅರ್ಧ ಗಂಟೆಯಾದರೂ ಅನುವು ಮಾಡಿಲ್ಲದ ಕಾರಣ ೫ ಅಂಕ ಕಡಿತ ಮಾಡುವುದಾಗಿ ಅಲ್ಲೇ ಘೋಷಣೆ ಮಾಡಲಾಗಿದೆ ಎಂದರು.

ಮಂಟಪಗಳು ಪಾಲಿಸಬೇಕಾದ ೨೪ ನಿಯಮಗಳನ್ನು ನಾವು ಈ ಹಿಂದೆಯೇ ನೀಡಿದ್ದೇವೆ. ಪತ್ರಿಕೆಗಳಲ್ಲಿಯೂ ಇದು ಪ್ರಕಟವಾಗಿತ್ತು. ಕೋಟೆ ಗಣಪತಿ ಮಂಟಪದವರು ೪ ನಿಮಿಷ ತಡ ಮಾಡಿದ್ದಲ್ಲದೇ ಪ್ರಮುಖ ಕಲಾಕೃತಿ ಗಣಪತಿಗೆ ನಿಯಮಬಾಹಿರವಾಗಿ ಕಬ್ಬಿಣದ ರಾಡ್ ಬೆಂಬಲ ಕೊಟ್ಟಿದ್ದಾರೆ ಎಂದು ಹೇಳಿದರು.

ಮಂಟಪಗಳ ಪ್ರದರ್ಶನದ ರಸ್ತೆ ಮಾರ್ಕಿಂಗ್ ತಪ್ಪಾಗಿದೆ ಎಂಬ ಆರೋಪವನ್ನು ಬಿ.ಎಂ ಹರೀಶ್ ಅವರು ಮಾಡಿದ್ದಾರೆ. ಆದರೆ ೨ ಮಂಟಪಗಳಿಗೂ ತಿಳಿಸಿಯೇ ಗುರುತು ಮಾಡಲಾಗಿದೆ. ಹರೀಶ್ ಅವರು ಕೂಡ ಈ ಸಂದರ್ಭ ಅಲ್ಲೇ ಇದ್ದರು. ಈ ಬಾರಿ ದಶಮಂಟಪ ಸಮಿತಿ ಸಂಪೂರ್ಣ ನ್ಯಾಯಯುತವಾಗಿ ತೀರ್ಪು ನೀಡಿದೆ ಎಂದು ಹೇಳಿದರು.

ದಶಮಂಟಪ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿನೋದ್ ಮಾತನಾಡಿ, ಕೋದಂಡರಾಮ ಮಂಟಪ ಹಾಗೂ ಕರವಲೆ ಭಗವತಿ ಮಂಟಪಗಳು ಒಂದೇ ಸ್ಥಳದಲ್ಲಿ ಪ್ರದರ್ಶನ ನೀಡುತ್ತವೆ. ಕೋದಂಡರಾಮ ಮಂಟಪದವರು ೧೦ ನಿಮಿಷದಲ್ಲಿಯೇ ಕರವಲೆ ಭಗವತಿ ಪ್ರದರ್ಶನಕ್ಕೆ ಜಾಗ ಬಿಟ್ಟು ಕೊಟ್ಟಿದ್ದಾರೆ.

ಆದರೆ ದಂಡಿನ ಮಾರಿಯಮ್ಮ ಮಂಟಪ ಪ್ರದರ್ಶನಕ್ಕೆ ಕೋಟೆ ಗಣಪತಿ ಮಂಟಪದವರು ಜಾಗ ಬಿಡದಿರುವುದು ಖಂಡನೀಯ ಎಂದರು. ಈ ಬಾರಿ ದಶಮಂಟಪ ಸಮಿತಿ ಉತ್ತಮವಾಗಿ ಕಾರ್ಯನಿರ್ವಹಣೆ ನಡೆಸಿದೆ. ಮಂಟಪಗಳ ಮೇಲೆ ಯಾವುದೇ ಪ್ರಕರಣಗಳೂ ಆಗಿಲ್ಲ ಎಂದು ಹೆÃಳಿದರು.

ಸುದ್ದಿಗೋಷ್ಠಿಯಲ್ಲಿ ದಶಮಂಟಪ ಸಮಿತಿಯ ಖಜಾಂಚಿ ಜೀವನ್, ಉಪ ಖಜಾಂಚಿ ವಿನಯ್ ಬಂಗೇರ ಹಾಜರಿದ್ದರು.