ನಾಪೋಕ್ಲು, ಅ. ೨೭: ಪವಿತ್ರ ಕಾವೇರಿ ತೀರ್ಥೋದ್ಭವದ ನಂತರ ತುಲಾ ಮಾಸದ ಹತ್ತನೇ ದಿನದಂದು ಆಚರಿಸಲಾಗುವ ಪ್ರಸಿದ್ಧ ಪತ್ತಾಲೋದಿ ಆರಾಧನೋತ್ಸವವು ಇಲ್ಲಿಗೆ ಸಮೀಪದ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಸಂಪನ್ನ ಗೊಂಡಿತು. ಪರದಂಡ ಕುಟುಂಬಸ್ಥರ ಮುಖಂಡತ್ವದಲ್ಲಿ ಆಚರಿಸಿಕೊಂಡು ಬರಲಾಗುತ್ತಿರುವ ಈ ವಿಶೇಷ ಆರಾಧನೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೇ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಉತ್ಸವದ ಹಿನ್ನೆಲೆಯಲ್ಲಿ ನಾಡಿನ ವಿವಿಧೆಡೆಗಳಿಂದ ಆಗಮಿಸಿದ್ದ ಭಕ್ತಾದಿಗಳು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ವಿಶೇಷ ಪೂಜೆ, ಶ್ರೀ ಸತ್ಯನಾರಾಯಣ ಪೂಜೆ, ಮಹಾಪೂಜೆ ಹಾಗೂ ತುಲಾಭಾರ ಸೇವೆಗಳನ್ನು ಸಲ್ಲಿಸಿ ತೀರ್ಥ ಪ್ರಸಾದ ಸ್ವೀಕರಿಸಿ ಧನ್ಯತೆ ಮೆರೆದರು. ಈ ಸಂದರ್ಭ ದೇವರ ನೃತ್ಯ ಬಲಿ, ಅನ್ನಪ್ರಸಾದ ನೆರವೇರಿತು.
ಅರ್ಚಕ ಜಗದೀಶ್ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು. ಕಕ್ಕಬ್ಬೆಯ ಪಾಡಿ ದೇವಾಲಯ ಮಾತ್ರವಲ್ಲದೆ, ಪೇರೂರು ಹಾಗೂ ನೆಲಜಿ ಗ್ರಾಮಗಳ ಶ್ರೀ ಇಗ್ಗುತಪ್ಪ ದೇವಾಲಯಗಳಲ್ಲೂ ಪತ್ತಾಲೋದಿ ಉತ್ಸವವು ಸಂಭ್ರಮದಿAದ ನೆರವೇರಿತು.
ದೇವತಕ್ಕರು, ಭಕ್ತಜನ ಸಂಘದ ಅಧ್ಯಕ್ಷರೂ ಆಗಿರುವ ಪರದಂಡ ಸುಬ್ರಮಣಿ ಕಾವೇರಪ್ಪ ಅವರು ದೇವರ ಸನ್ನಿಧಿಯಲ್ಲಿ ನಾಡಿನ ಸುಭಿಕ್ಷೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಮಾತನಾಡಿ, ಪತ್ತಾಲೋದಿ ದಿನವು ಇಗ್ಗುತ್ತಪ್ಪ ದೇವರ ಆರಾಧನೆಗೆ ಅತ್ಯಂತ ಶ್ರೇಷ್ಠ ಹಾಗೂ ಮಂಗಳಕರವಾದ ದಿನವಾಗಿದೆ. ನಾಡಿನ ಎಲ್ಲಾ ಭಕ್ತರಿಗೂ ದೇವರು ಆಯುರಾರೋಗ್ಯ, ಸುಖ-ಶಾಂತಿ ಹಾಗೂ ಕ್ಷೇಮಾಭಿವೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸಿದರು.
ಈ ಸಂದರ್ಭ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ, ವ್ಯವಸ್ಥಾಪನಾ ಸಮಿತಿ, ಭಕ್ತಜನ ಸಂಘದ ಸಮಿತಿ ಸದಸ್ಯರು, ಪಾರುಪತ್ತೆಗಾರ ಪರದಂಡ ಪ್ರಿನ್ಸ್ ತಮ್ಮಯ್ಯ, ಸಿಬ್ಬಂದಿಗಳು ಹಾಗೂ ಭಕ್ತಾದಿಗಳು ಭಾಗವಹಿಸಿದ್ದರು.