ಕುಶಾಲನಗರ, ಅ. ೨೭: ನಾಗರಿಕತೆ ಮತ್ತು ಸಂಸ್ಕೃತಿಯ ಉಗಮ ಸ್ಥಾನವಾದ ನದಿ ತೀರಗಳು ತ್ಯಾಜ್ಯಗಳ ಮೂಲಕ ಕಲುಷಿತ ಗೊಳ್ಳುವುದರೊಂದಿಗೆ ಬರಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ ಎಂದು ಅರಮೇರಿ ಕಳಂಚೇರಿ ಮಠಾಧೀಶರಾದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಅಖಿಲ ಭಾರತೀಯ ಸನ್ಯಾಸಿ ಸಂಘ ಆಶ್ರಯದಲ್ಲಿ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್ ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದೊಂದಿಗೆ ಸ್ವಚ್ಛ ಕಾವೇರಿಗಾಗಿ ೧೬ನೇ ವರ್ಷದ ತಲಕಾವೇರಿ ಪೂಂಪ್ ಹಾರ್ ಕಾವೇರಿ ಜಾಗೃತಿ ರಥಯಾತ್ರೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಚಾಲನೆ ನೀಡಿ ಮಾತನಾಡಿದರು.
ಪ್ರಸಕ್ತ ಪರಿಸ್ಥಿತಿಯಲ್ಲಿ ಪ್ರಕೃತಿ ನಾಶದಿಂದ ಪ್ರಾಣಿ ಪಕ್ಷಿಗಳು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಎದುರಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಶ್ರೀಗಳು ಮಾನವ ಪರಿಸರ ನಾಶಕ್ಕೆ ನೇರವಾಗಿ ಕಾರಣರಾಗುತ್ತಿದ್ದಾನೆ. ಪ್ರಕೃತಿ ಮೇಲೆ ಸವಾರಿ ಮಾಡಬಾರದು ಪ್ರಕೃತಿಯ ಗುಲಾಮರಾಗಬೇಕು ಪ್ರತಿಯೊಬ್ಬ ಮನುಷ್ಯನು ಅಂತರಾತ್ಮವನ್ನು ಜಾಗೃತಿಗೊಳಿಸುವ ಕಾಯಕದೊಂದಿಗೆ ಪ್ರಕೃತಿಯ ಆರಾಧನೆ ಅಗತ್ಯವಾಗಿದೆ ಎಂದರು.
ಮುಂದಿನ ತಲೆಮಾರಿಗೆ ನಾವುಗಳು ಬರಡು ಭೂಮಿಯನ್ನು ಹಸ್ತಾಂತರಿಸುವ ಪರಿಸ್ಥಿತಿ ಕಂಡುಬರುತ್ತದೆ ಬೊಗಸೆ ಕೈಯಲ್ಲಿ ಕುಡಿಯುತ್ತಿದ್ದ ಜಲಮೂಲಗಳನ್ನು ಕಲುಷಿತಗೊಳಿಸಿ ಬಾಟಲ್ ನೀರಿಗೆ ಮೊರೆ ಹೋಗುತ್ತಿರುವ ದಿನಗಳು ನಮ್ಮ ಮುಂದಿವೆ. ನಾಗರಿಕರು ಅನಾಗರಿಕರಾಗಿ ವರ್ತನೆ ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಪ್ರಸಕ್ತ ಪರಿಸರ ವ್ಯವಸ್ಥೆಯಲ್ಲಿ ಏರುಪೇರು ಆಗುತ್ತಿದ್ದು ಮಳೆ ಪ್ರಮಾಣ ಕಡಿಮೆಯಾಗುತ್ತಿದೆ ಈ ಮೂಲಕ ಜನರ ಜೀವನವೇ ಏರುಪೇರಾಗುವ ಸಾಧ್ಯತೆ ಇದೆ. ಪ್ರತಿಯೊಬ್ಬರೂ ಸ್ವಚ್ಛ ಕಾವೇರಿಗಾಗಿ ಹಾಗೂ ಸ್ವಚ್ಛ ಪಟ್ಟಣಗಳು ಪರಿಸರದ ಬಗ್ಗೆ ಸಂಕಲ್ಪ ತೊಡಬೇಕಾಗಿದೆ. ಯಾತ್ರೆಗಳು ಪ್ರವಾಸವಾಗದೆ ಜನರ ಜಾಗೃತಿ ಅರಿವು ಮೂಡಿಸುವ ಯೋಜನೆಗಳಾಗಲಿ ಎಂದರು.
ಕಾವೇರಿ ಸ್ವಚ್ಛತಾ ಅಭಿಯಾನ ದಕ್ಷಿಣ ಭಾರತದ ಸಾಧುಸಂತರ ಸಹಯೋಗದೊಂದಿಗೆ ಕಳೆದ ೧೬ ವರ್ಷಗಳ ಕಾಲ ನಿರಂತರ ಕಾರ್ಯಕ್ರಮಗಳ ಮೂಲಕ ಸ್ವಚ್ಛ ಕಾವೇರಿಯ ಬಗ್ಗೆ ಜನರಿಗೆ ಅರಿವು ಜಾಗೃತಿ ಮೂಡಿಸುವ ಬಗ್ಗೆ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿ ಯಾತ್ರೆಗೆ ಶುಭ ಕೋರಿದರು.
ಹರಿದ್ವಾರ ಅಖಂಡ ಪುರಂದಾA ಸ್ವಾಮೀಜಿ ಅನಂತಾನAದ ಗಿರಿ ಮಹಾರಾಜ್ ಮಾತನಾಡಿ, ಆರಾಧನೆ ಮೂಲಕ ನದಿ ಜಲಮೂಲಗಳು ಪ್ರಕೃತಿಯ ಸಂರಕ್ಷಣೆ ಸಾಧ್ಯ ಎಂದರು. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಅಖಿಲ ಭಾರತೀಯ ಸನ್ಯಾಸಿ ಸಂಘದ ಸ್ಥಾಪಕ ಶ್ರೀ ರಮಾನಂದ ಮಹಾರಾಜ್ ಅವರ ನೇತೃತ್ವದಲ್ಲಿ ಆಗಮಿಸಿದ ೩೦ಕ್ಕೂ ಅಧಿಕ ಸಾಧು ಸಂತರು ಕಾವೇರಿ ಮೂರ್ತಿಗೆ ಪೂಜೆ ಹಾಗೂ ಕುಂಡಿಕೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭ ೨೦೨೮ ರಲ್ಲಿ ಕುಂಭಕೋಣA ಕ್ಷೇತ್ರದಲ್ಲಿ ನಡೆಯುವ ಕುಂಭಮೇಳದ ಭಿತ್ತಿಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.
ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಅವರು ಯಾತ್ರೆಗೆ ಶುಭ ಕೋರಿ ಸ್ವಚ್ಛ ಕಾವೇರಿಗಾಗಿ ಪ್ರತಿಯೊಬ್ಬರು ಕೈಜೋಡಿಸುವಂತೆ ಕರೆ ನೀಡಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ೧೬ನೇ ವರ್ಷದ ಕಾವೇರಿ ಜಾಗೃತಿ ರಥಯಾತ್ರೆಯ ಬಗ್ಗೆ ಸಮಗ್ರ ಮಾಹಿತಿ ಒದಗಿಸಿದರು.
ತಲಕಾವೇರಿ ಕ್ಷೇತ್ರದಿಂದ ಆರಂಭಗೊಳ್ಳುವ ಕಾವೇರಿ ಜಾಗೃತಿ ರಥಯಾತ್ರೆಯಲ್ಲಿ ಐವತ್ತಕ್ಕೂ ಅಧಿಕ ಸಾಧು ಸಂತರು ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದು ಕೊಡಗು ಜಿಲ್ಲೆಯ ಭಾಗಮಂಡಲ ಕುಶಾಲನಗರ ಕಣಿವೆ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಆರತಿ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸ್ವಚ್ಛತಾ ಅಭಿಯಾನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಕೊಡಗು ಜಿಲ್ಲೆ ಸೇರಿದಂತೆ ಹಾಸನ ಮಂಡ್ಯ ಮೈಸೂರು ಚಾಮರಾಜನಗರ ಬೆಂಗಳೂರು ವ್ಯಾಪ್ತಿಯಲ್ಲಿ ಜಾಗೃತಿ ಯಾತ್ರೆ ತೆರಳಲಿದ್ದು ಜನರಿಗೆ ಜಲಮೂಲಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ ನವಂಬರ್ ೧೭ರಂದು ತಮಿಳುನಾಡಿನ ಪೂಂಪ್ಹಾರ್ ನಲ್ಲಿ ಕಾವೇರಿ ಮತ್ತು ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ವಿಶೇಷ ಕಾರ್ಯಕ್ರಮ ಮೂಲಕ ಸಮಾರೋಪದಲ್ಲಿ ಕಾವೇರಿ ತೀರ್ಥ ವಿಸರ್ಜನಾ ಕಾರ್ಯ ನಡೆಯಲಿದೆ ಎಂದರು..
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕುಶಾಲನಗರದ ಕೊಡಗನ ಹರ್ಷ ಅವರನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.
ಅಖಿಲ ಭಾರತೀಯ ಸನ್ಯಾಸಿ ಸಂಘದ ಪ್ರಮುಖರಾದ ಸ್ವಾಮಿ ವೇದಾನಂದ ಸ್ವಾಮಿ ಆತ್ಮಾನಂದ ಸರಸ್ವತಿ ಸ್ವಾಮಿ ಶಿವರಾಮನಂದ ಮತ್ತು ಕಾರ್ಯಕ್ರಮ ಸಂಯೋಜಕರಾದ ಸ್ವಾಮಿ ಬಾಲ ರಘುನಾಥನಂದ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ತಮಿಳುನಾಡು ಪ್ರಾಂತ್ಯದ ಸಂಚಾಲಕರಾದ ವಾಸು ರಾಮಚಂದ್ರನ್, ನಮಾಮಿ ಕಾವೇರಿ ಜಿಲ್ಲಾ ಪ್ರಮುಖರಾದ ವಿಠಲ ಸಾಲಿಯಾನ್ ವನಿತಾ ಚಂದ್ರಮೋಹನ್, ಸುಮನಾ ಮಳಲಗದ್ದೆ, ಧರಣಿ, ಚೈತನ್ಯ, ಮತ್ತು ಸನ್ಯಾಸಿ ಸಂಘದ ಸದಸ್ಯರು ಸ್ವಚ್ಛತಾ ಆಂದೋಲನ ಸಮಿತಿ ನಮಾಮಿ ಕಾವೇರಿ ಪ್ರಮುಖರು ಇದ್ದರು.
ತಲಕಾವೇರಿಯಲ್ಲಿ ಚಾಲನೆಗೊಂಡ ನಂತರ ತಂಡ ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಕಾವೇರಿ ಹಾಗೂ ಗಣಪತಿ ಮೂರ್ತಿಗೆ ಅಷ್ಟಾಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದರು.
ನಂತರ ಕಾವೇರಿ ಜಾಗೃತಿ ರಥಯಾತ್ರೆ ಕುಶಾಲನಗರದತ್ತ ತೆರಳಿ ಸಂಜೆ ೧೯೧ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು.