ಮಡಿಕೇರಿ, ಅ. ೨೬: ವಿಜಯದಶಮಿಯಂದು ನಗರದಲ್ಲಿ ನಡೆದ ದಶಮಂಟಪಗಳ ಶೋಭಾಯಾತ್ರೆಯ ತೀರ್ಪುಗಾರಿಕೆಯಲ್ಲಿ ಅಕ್ರಮ ನಡೆದಿದ್ದು, ಈ ಬಗ್ಗೆ ನ್ಯಾಯಾಂಗ ಹೋರಾಟ ಕೈಗೊಳ್ಳುವುದಾಗಿ ಶ್ರೀ ಕೋಟೆ ಮಹಾಗಣಪತಿ ದಸರಾ ಮಂಟಪ ಸಮಿತಿ ಎಚ್ಚರಿಕೆ ನೀಡಿದೆ.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷ ಎಂ. ಧನಂಜಯ, ಶ್ರೀ ದಂಡಿನ ಮಾರಿಯಮ್ಮ ಮಂಟಪದ ಪ್ರದರ್ಶನಕ್ಕೆ ಕೊಡವ ಸಮಾಜದ ಮುಂಭಾಗ ಸ್ಥಳ ನಿಗದಿಪಡಿಸಲಾಗಿತ್ತು. ರಾತ್ರಿ ೧.೩೦ ರಿಂದ ೨ ಗಂಟೆಯೊಳಗೆ ಪ್ರದರ್ಶನಕ್ಕೆ ನಮ್ಮ ಸಮಿತಿ ಸ್ಥಳ ಬಿಟ್ಟುಕೊಟ್ಟಿತ್ತು. ಆದರೂ ವಿನಾಕಾರಣ ಗೊಂದಲ ಸೃಷ್ಟಿಸಲಾಗಿದೆ ಎಂದು ಆರೋಪಿಸಿದರು.

ದಂಡಿನ ಮಾರಿಯಮ್ಮ ಮಂಟಪದ ಕೆಲಸ ಪೂರ್ಣಗೊಂಡಿರದ ಹಿನ್ನೆಲೆಯಲ್ಲಿ ಕೋಟೆ ಮಹಾಗಣಪತಿ ಮಂಟಪ ಅಡ್ಡಿಯಾಗುತ್ತಿದೆ ಎಂಬ ಸುಳ್ಳು ಆರೋಪ ಮಾಡಲಾಗಿದೆ. ದಶಮಂಟಪ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸದೆ, ಕೋಟೆ ಮಹಾಗಣಪತಿ ಮಂಟಪದ ವಾಹನ ತೆರವುಗೊಳಿಸುವಂತೆ ಸೂಚಿಸಿ, ತಪ್ಪಿದಲ್ಲಿ ಐದು ಅಂಕ ಕಡಿತ ಮಾಡುವುದಾಗಿ ಎಚ್ಚರಿಸಿದ್ದರು. ಆ ಸಂದರ್ಭ ಮಂಟಪದ ಟ್ರಾö್ಯಕ್ಟರ್ ಚಾಲಕ ವಿಶ್ರಾಂತಿಗೆ ತೆರಳಿದ್ದರು. ಅವರನ್ನು ಕರೆತಂದು ಕೇವಲ ಆರು ನಿಮಿಷದೊಳಗೆ ಟ್ರ‍್ಯಾಕ್ಟರ್ ತೆರವುಗೊಳಿಸಲಾಯಿತು. ಆದರೂ ಈ ಘಟನೆಯನ್ನು ಮುಂದಿಟ್ಟುಕೊAಡು ಕೋಟೆ ಮಹಾಗಣಪತಿ ಮಂಟಪದ ವಿರುದ್ಧ ಆರೋಪ ಮಾಡಿರುವುದು ಪೂರ್ವನಿಯೋಜಿತ ಸಂಚು ಹಾಗೂ ವ್ಯವಸ್ಥಿತ ಷಡ್ಯಂತ್ರವಾಗಿದೆ ಎಂದು ಧನಂಜಯ ಆರೋಪಿಸಿದರು.

ದಂಡಿನ ಮಾರಿಯಮ್ಮ ಮಂಟಪದಲ್ಲಿ ಬೆಳಕಿನ ವ್ಯವಸ್ಥೆ ಕೆಲಸ ಬಾಕಿ ಇದ್ದು, ಅದನ್ನು ಅಳವಡಿಸಲು ಸಮಯ ಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ತೀರ್ಪುಗಾರರನ್ನು ದಿಕ್ಕುತಪ್ಪಿಸಿ ಕೋಟೆ ಗಣಪತಿ ಸಮಿತಿಯ ಮೇಲೆ ಸುಳ್ಳು ಆರೋಪ ಹೊರಿಸಲಾಗಿದೆ. ಇದೇ ಸ್ಥಳದಲ್ಲಿ ಅದಕ್ಕೂ ಮುನ್ನ ಪ್ರಾಯೋಗಿಕ ಪ್ರದರ್ಶನ ನಡೆಸಲಾಗಿತ್ತು. ಹಾಗಿದ್ದರೆ ಈ ಸಂದರ್ಭದಲ್ಲಿ ಕೋಟೆ ಗಣಪತಿ ಮಂಟಪ ಅಡ್ಡಿಯಾಯಿತು ಎಂಬ ಆರೋಪ ಹೇಗೆ ಮಾಡಲಾಯಿತು ಎಂದು ಅವರು ಪ್ರಶ್ನಿಸಿದರು

ದಶಮಂಟಪಗಳ ತೀರ್ಪುಗಾರಿಕೆ ಪೂರ್ಣಗೊಂಡ ಬಳಿಕ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯ ಹಿಂಭಾಗದಲ್ಲಿ ಅಂಕಗಳನ್ನು ಲೆಕ್ಕಹಾಕಿ ಫಲಿತಾಂಶ ಪ್ರಕಟಿಸಲಾಗಿತ್ತು. ಆಗ ಕೋಟೆ ಮಹಾಗಣಪತಿ ಮಂಟಪಕ್ಕೆ ತೃತೀಯ ಸ್ಥಾನ ಲಭಿಸಿತ್ತು. ಅಂಕಪಟ್ಟಿಯನ್ನು ಘೋಷಣೆಗೆ ನೀಡಿದ ಬಳಿಕ ೧೦ ಮಂಟಪಗಳ ಪ್ರತಿನಿಧಿಗಳ ಒಪ್ಪಿಗೆ ಪಡೆಯದೆ ದಶಮಂಟಪ ಸಮಿತಿ ಹಾಗೂ ದಸರಾ ಸಮಿತಿಯವರು ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಧನಂಜಯ ಆರೋಪಿಸಿದರು.

ಗೌರವ ಸಲಹೆಗಾರ ಬಿ.ಎಂ. ರಾಜೇಶ್ ಮಾತನಾಡಿ, ಕಳೆದ ವರ್ಷ ಬಹುಮಾನ ಘೋಷಣೆ ವೇಳೆ ನಡೆದ ಘಟನೆ ಮಡಿಕೇರಿ ದಸರೆಗೆ ಹಾಗೂ ಜಿಲ್ಲೆಗೆ ಕಳಂಕ ತಂದಿತ್ತು. ದಸರೆಗೆ ಕೆಟ್ಟ ಹೆಸರು ಬರಬಾರದೆಂಬ ಉದ್ದೇಶದಿಂದ ನಾವು ಅಂದು ಸಮಾಧಾನದಿಂದ ಹೊರಬಂದಿದ್ದೆವು ಎಂದರು.

ಕೋಟೆ ಮಹಾಗಣಪತಿ ಮಂಟಪ ಸಮಿತಿ ೫೦ನೇ ವರ್ಷದ ಸಂಭ್ರಮದಲ್ಲಿದ್ದು, ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಕಳೆದ ವರ್ಷ ದಂಡಿನ ಮಾರಿಯಮ್ಮ ಮಂಟಪ ಕುಸಿದ ಸಂದರ್ಭ ಕೂಡ ಸಹಾಯಕ್ಕೆ ನಿಂತಿದ್ದೇವೆ. ದಶಮಂಟಪಗಳ ತೀರ್ಪುಗಾರಿಕೆಯಲ್ಲಿ ಉಂಟಾಗುತ್ತಿರುವ ಗೊಂದಲಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಬೈಲಾ ರೂಪಿಸಬೇಕು ಎಂದು ಅವರು ಒತ್ತಾಯಿಸಿದರು.

ಮುಂದಿನ ದಿನಗಳಲ್ಲಿ ಪೇಟೆ ರಾಮಮಂದಿರ ಸಮಿತಿ ದಶಮಂಟಪಗಳ ಜವಾಬ್ದಾರಿ ವಹಿಸಿಕೊಳ್ಳಲಿದ್ದು, ಈ ಸಂಬAಧ ಅವರಿಗೆ ಅಗತ್ಯ ಬೆಂಬಲ ನೀಡುವುದಾಗಿ ರಾಜೇಶ್ ತಿಳಿಸಿದರು.

ಅಂಕಪಟ್ಟಿಯಲ್ಲಿ ತೀರ್ಪುಗಾರರು ಯಾವುದೇ ಅಂಕ ಕಡಿತ ಮಾಡಿರುವ ಉಲ್ಲೇಖವಿಲ್ಲ. ಅಲ್ಲದೆ ಈ ಕುರಿತು ಯಾವುದೇ ಷರಾ ಕೂಡ ನಮೂದಿಸಿಲ್ಲ. ಹೀಗಾಗಿ ನಂತರ ಕೈಗೊಂಡ ಕ್ರಮ ನಿಯಮಬಾಹಿರವಾಗಿದೆ. ತೃತೀಯ ಬಹುಮಾನ ಕೋಟೆ ಮಹಾಗಣಪತಿ ಮಂಟಪಕ್ಕೆ ಲಭಿಸಿರುವುದರಿಂದ ಅದರ ಬಹುಮಾನವಾದ ೧೬ ಗ್ರಾಂ ಚಿನ್ನವನ್ನು ಸಮಿತಿಗೆ ನೀಡಬೇಕು ಎಂದು ಆಗ್ರಹಿಸಿದರು.

ಮಾಜಿ ಅಧ್ಯಕ್ಷ ಬಿ.ಎಂ. ಹರೀಶ್ ಮಾತನಾಡಿ, ಕೊಡವ ಸಮಾಜದ ಮುಂಭಾಗದಲ್ಲಿ ಪ್ರದರ್ಶನಕ್ಕೆ ಸೂಕ್ತವಾಗಿ ಮಾರ್ಕಿಂಗ್ ಮಾಡದಿರುವುದೇ ಇಷ್ಟೆಲ್ಲ ಗೊಂದಲಕ್ಕೆ ಕಾರಣವಾಗಿದೆ. ಈ ಬಗ್ಗೆ ಮೊದಲೇ ಪರಿಶೀಲನೆ ನಡೆಸಿ ದಶಮಂಟಪ ಸಮಿತಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿತ್ತು ಎಂದರು.

ಗೋಷ್ಠಿಯಲ್ಲಿ ಕಾರ್ಯದರ್ಶಿಗಳಾದ ಪಿ. ಸತೀಶ್ ಶೇಟ್, ಎಸ್.ಎ. ವಿನಾಯಕ್ ಹಾಗೂ ಉಪಾಧ್ಯಕ್ಷ ನಜೀರ್ ಉಪಸ್ಥಿತರಿದ್ದರು.