(ಕೆ.ಎಂ ಇಸ್ಮಾಯಿಲ್ ಕಂಡಕರೆ)

ಮಡಿಕೇರಿ, ಅ. ೨೫: ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಯ ಕ್ಷೇತ್ರವಾರು ಕರಡು ಮೀಸಲು ಪಟ್ಟಿ ಈಗಾಗಲೇ ಪ್ರಕಟಗೊಂಡಿದೆ.

ಇದೀಗ ಕೊಡಗು ಜಿಲ್ಲೆಯಲ್ಲಿ ಮೀಸಲಾತಿ ಪಟ್ಟಿಗೆ ಎಲ್ಲಾ ರಾಜಕೀಯ ಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗಿದೆ. ಏತನ್ಮಧ್ಯೆ ಜಿಲ್ಲೆಯಲ್ಲಿ ಅಂತಿಮ ಮೀಸಲು ಪಟ್ಟಿಯಲ್ಲಿ ಬದಲಾವಣೆ ಲೆಕ್ಕಾಚಾರಗಳು ನಡೆಯುತ್ತಿದೆ. ಆಕಾಂಕ್ಷಿಗಳು ಸಿದ್ಧತೆ ನಡೆಸುತ್ತಿದ್ದ ಕ್ಷೇತ್ರಗಳಲ್ಲಿ ಮೀಸಲು ಬದಲಾಗಿದ್ದು, ಹಲವರು ಅಸಮಾಧಾನಗೊಂಡಿದ್ದು ಆಕ್ಷೇಪಣೆ ಕೂಡ ಸಲ್ಲಿಕೆಯಾಗಿದೆ.

ಮಡಿಕೇರಿ ಕ್ಷೇತ್ರದಲ್ಲಿ ಕರಡು ಮೀಸಲು ಪಟ್ಟಿಗೆ ದೊಡ್ಡಮಟ್ಟದಲ್ಲಿ ಆಕ್ಷೇಪಣೆ ವ್ಯಕ್ತವಾಗಿದೆ. ಈಗಾಗಲೇ ಕಾಂಗ್ರೆಸ್ ಅಲ್ಪಸಂಖ್ಯಾತ ಮುಸ್ಲಿಒ ಮುಖಂಡರು ಪ್ರತ್ಯೇಕ ಸಭೆ ನಡೆಸಿ ಮೀಸಲು ಬದಲಾವಣೆಯಾಗದಿದ್ದರೆ ಚುನಾವಣೆಯಲ್ಲಿ ಅಸಹಕಾರ ತೋರುವುದಾಗಿ ಘೋಷಣೆ ಮಾಡಿದ್ದಾರೆ.ಕೊಡಗು ಜಿಲ್ಲೆಯಲ್ಲಿರುವ ೨೯ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪೈಕಿ ೧೫ ಸ್ಥಾನವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಬೇಕು.

೧೫ ಸ್ಥಾನದಲ್ಲಿ ೮ ಸ್ಥಾನವನ್ನು ಸಾಮಾನ್ಯ ಹಾಗೂ ೭ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿಡಲಾಗಿದೆ. ಆದರೆ ಕುಶಾಲನಗರ ತಾಲ್ಲೂಕಿನ ಐದು ಕ್ಷೇತ್ರಗಳಲ್ಲಿ ಕೇವಲ ಒಂದೇ ಒಂದು ಸಾಮಾನ್ಯ ಮೀಸಲು ನಿಗದಿಯಾಗಿಲ್ಲ. ಇದರಿಂದಾಗಿ ಕುಶಾಲನಗರ ತಾಲೂಕಿನಲ್ಲಿ ಪಕ್ಷಾತೀತವಾಗಿ ದೊಡ್ಡಮಟ್ಟದ ಆಕ್ಷೇಪ ವ್ಯಕ್ತವಾಗಿದೆ. ಸೋಮವಾರಪೇಟೆ ಮತ್ತು ಮಡಿಕೇರಿ ತಾಲೂಕಿಗೆ ತಲಾ ಎರಡು ಸಾಮಾನ್ಯ ಕ್ಷೇತ್ರವನ್ನು ನೀಡಲಾಗಿದೆ. ವೀರಾಜಪೇಟೆಗೆ ಒಂದು ಸಾಮಾನ್ಯ ಕ್ಷೇತ್ರವನ್ನು ಮೀಸಲಿಡಾಗಿದೆ.

ಪೊನ್ನಂಪೇಟೆ ತಾಲೂಕಿನ ಆರು ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಮೂರು ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದೆ. ಆದರೆ ಕುಶಾಲನಗರ ತಾಲ್ಲೂಕಿಗೆ ಒಂದು ಸಾಮಾನ್ಯ ಕ್ಷೇತ್ರ ನೀಡಿಲ್ಲ. ವಿಧಾನಸಭಾ ಕ್ಷೇತ್ರವಾರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಲೆಕ್ಕದಲ್ಲಿ ನೋಡುವಾಗ ಆರು ಸಾಮಾನ್ಯ ಕ್ಷೇತ್ರವನ್ನು ವಿರಾಜಪೇಟೆ ಕ್ಷೇತ್ರಕ್ಕೆ ನೀಡಲಾಗಿದೆ. ಕೇವಲ ಎರಡು ಸಾಮಾನ್ಯ ಕ್ಷೇತ್ರವನ್ನು ಮಾತ್ರ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರಕ್ಕೆ ನೀಡಲಾಗಿದೆ. ಕ್ಷೇತ್ರವಾರು ಮೀಸಲು ಪ್ರಕ್ರಿಯೆಯಲ್ಲಿ ಮಡಿಕೇರಿ ಕ್ಷೇತ್ರಕ್ಕೆ ಅನ್ಯಾಯವಾಗಿದೆ ಎಂದು ಕುಶಾಲನಗರ ಭಾಗದ ಬಿಜೆಪಿ ಮುಖಂಡರು ಆರೋಪಿಸಿದ್ದಾರೆ. ಈಗಾಗಲೇ ತಹಶೀಲ್ದಾರ್ ಮೂಲಕ ಆಕ್ಷೇಪಣೆ ಕೂಡ ಸಲ್ಲಿಸಿದ್ದಾರೆ.

ಕಾಂಗ್ರೆಸ್‌ನಲ್ಲಿ ಲೆಕ್ಕಾಚಾರ ಜೋರು

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರವಾರು ಮೀಸಲು ಪಟ್ಟಿಗೆ ಕಾಂಗ್ರೆಸ್ ಪಕ್ಷದ ಮುಖಂಡರಲ್ಲೇ ದೊಡ್ಡಮಟ್ಟದ ಅಸಮಾಧಾನ ವ್ಯಕ್ತವಾಗಿದೆ. ವಿಶೇಷವಾಗಿ ಮಡಿಕೇರಿ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಮುಖಂಡರು ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಮಡಿಕೇರಿ ಕ್ಷೇತ್ರದ ವ್ಯಾಪ್ತಿಯ ೧೩ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಮೀಸಲು ಬದಲಾವಣೆಯ ಲೆಕ್ಕಾಚಾರ ರಾಜಕೀಯ ಪಡಸಾಲೆಯಲ್ಲಿ ನಡೆಯುತ್ತಿದೆ. ಕಾಂಗ್ರೆಸ್ ಮುಖಂಡರು ಸ್ಪರ್ಧಿಸಲು ಸಿದ್ಧತೆ ನಡೆಸುತ್ತಿದ್ದ ಕ್ಷೇತ್ರಗಳಲ್ಲಿ ಮೀಸಲು ಬದಲಾವಣೆಯಾಗಿರುವುದು ಆಕಾಂಕ್ಷಿಗಳ ರಾಜಕೀಯ ಲೆಕ್ಕಾಚಾರವೇ ಬುಡಮೇಲಾಗಿದೆ.

ಕುಶಾಲನಗರ ಮತ್ತು ಸೋಮವಾರಪೇಟೆ ತಾಲ್ಲೂಕಿನಲ್ಲಿ ಮೀಸಲು ಬದಲಾವಣೆಯಾಗುವ ಸಾಧ್ಯತೆಗಳಿವೆ. ಕುಶಾಲನಗರ ತಾಲೂಕಿಗೆ ಒಂದು ಸಾಮಾನ್ಯ ಕ್ಷೇತ್ರದ ಮೀಸಲು ನೀಡುವ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ನಡೆದಿದೆ.

ಅದಲ್ಲದೇ ಕುಶಾಲನಗರ ತಾಲ್ಲೂಕಿನಲ್ಲಿರುವ ಮೂರು ಬಿಸಿಎಂ ಎ ಕ್ಷೇತ್ರದಲ್ಲಿ ಒಂದನ್ನು ಬದಲಾವಣೆ ಮಾಡುವ ಸಾಧ್ಯತೆ ಇದೆ. ವೀರಾಜಪೇಟೆ ಕ್ಷೇತ್ರದಲ್ಲಿರುವ ೧೬ ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಮೀಸಲಿನಲ್ಲಿ ಯಾವುದೇ ಬದಲಾವಣೆಗಳಾಗುವ ಸಾಧ್ಯತೆ ತೀರಾ ವಿರಳ.ಯಾವುದೇ ಬದಲಾವಣೆಗಳು ಇದ್ದರೂ ಕೂಡ ಮಡಿಕೇರಿ ಕ್ಷೇತ್ರದಲ್ಲೇ ಆಗಬೇಕೆಂಬ ಚರ್ಚೆಗಳು ನಡೆದಿದೆ. ಮೀಸಲು ನಿಗದಿಪಡಿಸುವ ಅಧಿಕಾರ ಸರ್ಕಾರದ ಅಧೀನದಲ್ಲಿರುವುದರಿಂದ ಮೀಸಲು ಬದಲಾವಣೆ ಸುಲಭದಲ್ಲಿ ಮಾಡಬಹುದಾಗಿದೆ. ಆದರೆ ಶಾಸಕರು ಮನಸ್ಸು ಮಾಡಿದ್ದಲ್ಲಿ ಮಾತ್ರ ಮೀಸಲು ಬದಲಾವಣೆ ಸಾಧ್ಯ ಎಂಬ ಚರ್ಚೆ ನಡೆಯುತ್ತಿದೆ.

ರೊಟೇಷನ್ ನಿಯಮದಂತೆ ಬದಲಾವಣೆ ಸಾಧ್ಯವೇ?

ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರ ಪುನರ್ವಿಂಗಡಣೆ ಹಾಗೂ ಮೀಸಲು ನಿಗದಿಪಡಿಸುವ ಅಧಿಕಾರ ೨೦೧೬ರ ಚುನಾವಣೆಯವರೆಗೆ ರಾಜ್ಯ ಚುನಾವಣಾ ಆಯೋಗದ ಅಧಿಕಾರದಲ್ಲಿತ್ತು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಆದರೆ ೨೦೨೧ರಲ್ಲಿ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸೀಮಾ ಗಡಿ ನಿರ್ಣಯ ಆಯೋಗವನ್ನು ರಚಿಸಿ ಸ್ಥಳೀಯ ಸಂಸ್ಥೆಗಳ ಕ್ಷೇತ್ರಗಳ ಗಡಿ ನಿಗದಿ ಹಾಗೂ ಮೀಸಲು ಪ್ರಕ್ರಿಯೆಯ ಅಧಿಕಾರವನ್ನು ಚುನಾವಣಾ ಆಯೋಗದಿಂದ ಕಿತ್ತುಕೊಂಡಿತ್ತು. ನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಸರ್ಕಾರ ಕೂಡ ಸೀಮಾ ಗಡಿ ನಿರ್ಣಯ ಆಯೋಗವನ್ನು ಪುನರ್ ರಚಿಸಿ ರಾಜ್ಯಾದ್ಯಂತ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಕ್ಷೇತ್ರಗಳನ್ನು ಪುನರ್ವಿಂಗಡಿಸಿತು. ಇದೀಗ ಕ್ಷೇತ್ರವಾರು ಮೀಸಲು ಪಟ್ಟಿ ಕೂಡ ಪ್ರಕಟಿಸಿದೆ.

೨೦೧೬ರ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಅಸ್ತಿತ್ವದಲ್ಲಿದ್ದ ಕ್ಷೇತ್ರಗಳ ಹೆಸರು, ಗಡಿ ಎಲ್ಲವೂ ಇದೀಗ ಬದಲಾಗಿದೆ.ಕ್ಷೇತ್ರಗಳ ಹೆಸರು ಕೂಡ ಬದಲಾವಣೆಯಾಗಿದೆ.

ಪ್ರಸ್ತುತ ಮೀಸಲಾತಿ ಪ್ರಕ್ರಿಯೆಯು ಹೊಸ ಕ್ಷೇತ್ರ ವಿಂಗಡಣೆಯ ಆಧಾರದಲ್ಲಿ ಪ್ರಕಟವಾಗಿದೆ. ಆಕ್ಷೇಪಣೆ ಸಂದರ್ಭದಲ್ಲಿ ರೊಟೇಷನ್ ನಿಯಮ ಪಾಲನೆ ಮಾಡಿಲ್ಲವೆಂದು ಆಕ್ಷೇಪಿಸಿದರೆ ಪರಿಗಣಿಸುವುದು ಕಷ್ಟಸಾಧ್ಯ.

ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿ ಪ್ರಕ್ರಿಯೆಯು ಜನಸಂಖ್ಯಾ ಆಧಾರದಲ್ಲೇ ನಿಗದಿಯಾಗಬೇಕು.

ಒಂದು ವೇಳೆ ಎಸ್.ಸಿ ಮತ್ತು ಎಸ್.ಟಿ ಕ್ಷೇತ್ರವು ಜನಸಂಖ್ಯೆ ಆಧಾರದಲ್ಲಿ ನಿಗದಿಯಾಗದಿದ್ದರೆ ಬದಲಾವಣೆಯಾಗುವ ಸಾಧ್ಯತೆ ಇದೆ.ಆದರೆ ಇನ್ನುಳಿದಂತೆ ರೊಟೇಷನ್ ನಿಯಮ ಪಾಲನೆಯಾಗಿಲ್ಲ ಎಂಬ ಆಕ್ಷೇಪ ಈ ಬಾರಿಯ ಮೀಸಲಾತಿ ಪ್ರಕ್ರಿಯೆಯಲ್ಲಿ ಪರಿಗಣಿಸುವ ಸಾಧ್ಯತೆ ತೀರಾ ವಿರಳ.

ಇನ್ನುಳಿದಂತೆ ಮೀಸಲು ಬದಲಾವಣೆ ಮಾಡಲು ಸರ್ಕಾರಕ್ಕೆ ಪೂರ್ಣ ಸ್ವಾತಂತ್ರ‍್ಯ ಇದೆ. ಜಿಲ್ಲೆಯ ಮಡಿಕೇರಿ ಕ್ಷೇತ್ರದ ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಕ್ಷೇತ್ರಗಳಲ್ಲಿ ಒಂದೆರೆಡು ಭಾಗಗಳಲ್ಲಿ ಅಂತಿಮ ಮೀಸಲು ಪಟ್ಟಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.