ಶನಿವಾರಸಂತೆ, ಅ. ೨೫: ಪಟ್ಟಣದ ಸುಪ್ರಜ ಗುರುಕುಲ ವಿದ್ಯಾಸಂಸ್ಥೆಯ ಅಧ್ಯಕ್ಷೆ ಹಾಗೂ ಪ್ರಾಂಶುಪಾಲೆ ಡಿ. ಸುಜಲಾದೇವಿ ಅವರನ್ನು ನೆರೆಯ ಹಾಸನ ಜಿಲ್ಲೆಯ ಆಲೂರು ತಾಲೂಕು ೪ ನೇ ಕೇಂದ್ರ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ,. ಸಮ್ಮೇಳನ ಅ. ೩೧ ರಂದು ಶನಿವಾರ ಬೆಳಿಗ್ಗೆ ೧೦ ಗಂಟೆಗೆ ಆಲೂರಿನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ.
ಸಾಹಿತಿ, ಶಿಕ್ಷಕಿ, ಹಾಸನ ಆಕಾಶವಾಣಿ ಉದ್ಘೋಷಕಿ ಸುಜಲಾದೇವಿ ಅವರ ಸಾಹಿತ್ಯಕ ಹಾಗೂ ಶೈಕ್ಷಣಿಕ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ ಎಂದು ತಾಲೂಕು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಅಧ್ಯಕ್ಷ ಮಣಿಪುರ ಕೃಷ್ಣೇಗೌಡ ಹಾಗೂ ಪದಾಧಿಕಾರಿಗಳು ತಿಳಿಸಿದ್ದಾರೆ.
ಸುಜಲಾ ದೇವಿ ಅವರು ಮೂಲತಃ ಆಲೂರು ತಾಲೂಕಿನ ಕುಂದೂರು ಗ್ರಾಮದವರಾಗಿದ್ದು; ಅವರನ್ನು ಅವರ ಸ್ವಗೃಹದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲೂಕು ಘಟಕದ ಪದಾಧಿಕಾರಿಗಳು ಸನ್ಮಾನಿಸಿ, ಗೌರವಿಸಿ ಸ್ವಾಗತಿಸಿದರು. ಈ ಸಂದರ್ಭ ರಾಜ್ಯಾಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ತಾಲೂಕು ಅಧ್ಯಕ್ಷ ಮಣಿಪುರ ಕೃಷ್ಣೇಗೌಡ, ಗೌರವಾಧ್ಯಕ್ಷ ಎಂ. ಬಾಲಕೃಷ್ಣ, ಕಾರ್ಯದರ್ಶಿ ಧರ್ಮ ಕೆರಲೂರು, ಮಹಿಳಾ ಕಾರ್ಯದರ್ಶಿ ಚಂದ್ರಕಲಾ, ಖಜಾಂಚಿ ಬಸವರಾಜ್, ಜಯಪದ್ಮರಾಜ್ ಇತರರು ಹಾಜರಿದ್ದರು.
ಸುಜಲಾದೇವಿ ಕುಂದೂರು ಗ್ರಾಮದ ಧರಣೀಂದ್ರ ರಾಜ್ - ಜಯಪದ್ಮ ದಂಪತಿಯ ಪುತ್ರಿಯಾಗಿದ್ದು, ಕನ್ನಡ ಸ್ನಾತಕೋತ್ತರ , ಪತ್ರಿಕೋದ್ಯಮ ಹಾಗೂ ಡಿಪ್ಲೊಮ, ಹಿಂದಿ ಬಿ.ಇಡಿ. ಪದವಿ ಪಡೆದಿದ್ದಾರೆ. ೨೦೧೦ ರಿಂದ ಶನಿವಾರಸಂತೆಯ ಸುಪ್ರಜ ಗುರುಕುಲ ಆಂಗ್ಲ ಮಾದ್ಯಮ ಶಾಲೆಯ ಮುಖ್ಯಸ್ಥೆಯಾಗಿ, ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.