ಗೋಣಿಕೊಪ್ಪಲು, ಅ.೨೫: ಭೂಮಿಯನ್ನು ಪಾಳು ಬಿಡದೆ ಪರಂಪರಾಗತವಾಗಿ ಭತ್ತದ ಕೃಷಿ ಮಾಡಿಕೊಂಡು ಬಂದಿದ್ದ ಹತ್ತಾರು ಕುಟುಂಬಗಳ ಗದ್ದೆಗಳಿಗೆ ಕಾಡಾನೆ ಹಿಂಡು ದಾಳಿ ನಡೆಸಿ, ತೆನೆಕಟ್ಟಿದ್ದ ಭತ್ತದ ಬೆಳೆ ಸೇರಿದಂತೆ ಅಡಿಕೆ ಹಾಗೂ ಕಾಫಿ ಗಿಡಗಳನ್ನು ಬುಡಸಹಿತ ಕಿತ್ತುಹಾಕಿರುವ ಘಟನೆ ಗೋಣಿಕೊಪ್ಪ ಸಮೀಪದ ಕೈಕೇರಿ ಗ್ರಾಮದ ಗುಡ್ಡೆಮನೆ ಈರಣ್ಣ ಕಾಲೋನಿ ಬಳಿ ನಡೆದಿದೆ.
ಗೋಣಿಕೊಪ್ಪಲು ಸಮೀಪದಲ್ಲೇ, ರಾಜ್ಯ ಹೆದ್ದಾರಿಯಿಂದ ಕೂಗಳತೆಯ ದೂರದಲ್ಲಿರುವ ಈ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ಎರಡು ಕಾಡಾನೆಗಳೊಂದಿಗೆ ಮರಿಯಾನೆಯೊಂದು ಗದ್ದೆಯ ಬಳಿ ಕಾಣಿಸಿಕೊಂಡಿದೆ ಎಂದು ಪ್ರತ್ಯಕ್ಷದರ್ಶಿಗಳು ‘ಶಕ್ತಿ’ಗೆ ತಿಳಿಸಿದ್ದಾರೆ.
ಕಾಡಾನೆಗಳು ಭತ್ತದ ಗದ್ದೆಗೆ ನುಗ್ಗಿ ತೆನೆಕಟ್ಟಿದ್ದ ಭತ್ತದ ಬೆಳೆಯನ್ನು ತುಳಿದು ನಾಶಪಡಿಸಿದ್ದು, ಸಮೀಪದಲ್ಲಿದ್ದ ಅಡಿಕೆ ಹಾಗೂ ಕಾಫಿ ಗಿಡಗಳನ್ನೂ ಬುಡಸಹಿತ ಕಿತ್ತು ಹಾಕಿವೆ. ಅಲ್ಲದೆ, ಗದ್ದೆಯ ಸಮೀಪದ ಕೆರೆಗೆ ಇಳಿದ ಆನೆಗಳ ಹಿಂಡು ಕೆರೆಯ ಬದುಗಳನ್ನು ಹಾಳು ಮಾಡಿ ತೆರಳಿದೆ. ಈ ಭಾಗದ ಎಂಟು ಕುಟುಂಬಗಳು ವರ್ಷಂಪ್ರತಿ ಭತ್ತದ ಗದ್ದೆಯಲ್ಲಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿವೆ. ಪ್ರತಿವರ್ಷ ಕಾಡಾನೆಗಳ ಸಂಚಾರವಿದ್ದರೂ, ಈ ಬಾರಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಗದ್ದೆ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಗದ್ದೆಯ ಸಮೀಪದಲ್ಲೇ ಇರುವ ದಟ್ಟ ಕಾಡಿನಲ್ಲಿ ಕಾಡಾನೆಗಳ ಹಿಂಡು ನೆಲೆಸಿದ್ದು, ಆಗಾಗ್ಗೆ ಕೃಷಿ ಪ್ರದೇಶಕ್ಕೆ ಬರುತ್ತಿದೆ. ಆನೆಗಳನ್ನು ಕಾಡಿನತ್ತ ಓಡಿಸುವಂತೆ ಹಲವು ಬಾರಿ ಅರಣ್ಯ ಇಲಾಖೆಯ ಸಿಬ್ಬಂದಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ ಎರಡು ದಿನಗಳ ಹಿಂದೆಯೇ ಹಗಲು ವೇಳೆಯಲ್ಲೂ ಕಾಡಾನೆಗಳು ಕಾಣಿಸಿಕೊಂಡಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿತ್ತು. ಆದರೂ ಸೂಕ್ತ ಕ್ರಮ ಕೈಗೊಳ್ಳದ ಪರಿಣಾಮ ಇದೀಗ ಭತ್ತದ ಬೆಳೆ ಸೇರಿದಂತೆ ಅಡಿಕೆ ಮತ್ತು ಕಾಫಿ ಗಿಡಗಳು ನಾಶವಾಗಿವೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಅರಣ್ಯ ಇಲಾಖೆಯ ಕೆಲ ಸಿಬ್ಬಂದಿ ಗದ್ದೆಯ ಬಳಿ ಬಂದು ಕಾಡಾನೆಗಳನ್ನು ಅನತಿ ದೂರದವರೆಗೆ ಓಡಿಸಿ ವಾಪಸ್ ತೆರಳುತ್ತಾರೆ. ಆನೆಗಳನ್ನು ಅರಣ್ಯ ಪ್ರದೇಶದೊಳಗೆ ಓಡಿಸುವ ಕಾರ್ಯ ನಡೆಯುತ್ತಿಲ್ಲ. ಆನೆಗಳನ್ನು ಕಾಡಿನೊಳಗೆ ಓಡಿಸಿದರೆ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ತೋಟದ ಮಾಲೀಕರಾದ ಒಕ್ಕಲಿಗರ ವಾಸು ಹಾಗೂ ಪ್ರಾಣೇಶ್ ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ನಷ್ಟ ಪರಿಹಾರ ಘೋಷಿಸಬೇಕು. ಈ ಪ್ರದೇಶದಲ್ಲಿ ನೆಲೆಸಿರುವ ಕಾಡಾನೆಗಳನ್ನು ಸ್ಥಳಾಂತರಿಸಿ, ಕೃಷಿ ಪ್ರದೇಶಕ್ಕೆ ಬಾರದಂತೆ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಕಾವೇರಿ ಕಾಲೇಜು ಬಳಿಯಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು. ಗ್ರಾಮದ ಪ್ರಮುಖರಾದ ಒಕ್ಕಲಿಗರ ಅಪ್ಪಣ್ಣ, ಶ್ರೇಯಸ್ಸು, ಭರತ್, ರಘು, ಪಾಪಣ್ಣ, ಮಿಟ್ಟು, ರಂಜು, ಅಶ್ವಿನಿ ಸೇರಿದಂತೆ ಹಲವರು ಸ್ಥಳದಲ್ಲಿದ್ದರು.