ವೀರಾಜಪೇಟೆ, ಅ. ೨೫: ವಿಜಯದಶಮಿ ಹಾಗೂ ಆಯುಧ ಪೂಜೆಯ ಆಚರಣೆಗಳು ಭಾರತದ ಭವ್ಯ ಸಂಸ್ಕೃತಿ ಮತ್ತು ಪೌರಾಣಿಕ ಪರಂಪರೆಯ ಪ್ರತೀಕಗಳಾಗಿವೆ. ದೇಶದ ವಿವಿಧ ಭಾಗಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಿದರೂ ಅವುಗಳ ಮೂಲ ಆಶಯ ಒಂದೇ ಆಗಿದೆ ಎಂದು ಕೊಡಗು-ಮೈಸೂರು ಮಾಜಿ ಸಂಸದ ಪ್ರತಾಪ್ ಸಿಂಹ ಅಭಿಪ್ರಾಯಪಟ್ಟರು.

ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ವಿರಾಜಪೇಟೆ ಘಟಕದ ಆಶ್ರಯದಲ್ಲಿ ನಡೆದ ೧೯ನೇ ವರ್ಷದ ಆಯುಧ ಪೂಜೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ತಾವು ಮಾಜಿ ಸಂಸದರಾಗಿದ್ದರೂ ಕೊಡಗು ಜಿಲ್ಲೆಯ ಜನತೆಯೊಂದಿಗಿನ ಅವಿನಾಭಾವ ಸಂಬAಧ ಮುಂದುವರಿಯಲಿದೆ. ಭಾರತದ ಭೌಗೋಳಿಕ ಅಖಂಡತೆಗೆ ಸವಾಲುಗಳು ಎದುರಾದರೂ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಆಚರಣೆಗಳು ಸನಾತನ ಧರ್ಮದ ಪರಂಪರೆಯನ್ನು ಜೀವಂತವಾಗಿರಿಸಿವೆ. ಪಾಂಡವರು ಅಜ್ಞಾತವಾಸದ ಸಂದರ್ಭ ಬನ್ನಿ ಮರದಲ್ಲಿ ಇರಿಸಿದ್ದ ಆಯುಧಗಳನ್ನು ಹೊರತೆಗೆದ ಘಟನೆ ಆಯುಧ ಪೂಜೆಯ ಆಚರಣೆಗೆ ಹಿನ್ನೆಲೆಯಾಗಿದೆ. ಒಂಬತ್ತು ದಿನಗಳ ಕಾಲ ಮಹಿಷಾಸುರನ ವಿರುದ್ಧ ಹೋರಾಡಿದ ದೇವಿಯು ವಿಜಯ ಸಾಧಿಸಿದ ದಿನ ವಿಜಯದಶಮಿಯಾಗಿ ಆಚರಿಸಲ್ಪಡುತ್ತದೆ ಎಂದು ವಿವರಿಸಿದರು.

ಯುವಜನರು ಪಾಶ್ಚಾತ್ಯ ವ್ಯಾಮೋಹಕ್ಕೆ ಒಳಗಾಗದೆ ದೇಶದ ಸಂಸ್ಕೃತಿ, ಪರಂಪರೆ ಹಾಗೂ ಪೌರಾಣಿಕ ಮತ್ತು ಐತಿಹಾಸಿಕ ಕಥೆಗಳನ್ನು ಅರಿತುಕೊಳ್ಳಬೇಕು. ಸನಾತನ ಧರ್ಮದ ಉಳಿವು ಮತ್ತು ಬೆಳವಣಿಗೆಗೆ ಕೈಜೋಡಿಸಬೇಕು. ಅರ್ಥಪೂರ್ಣವಾಗಿ ಹಬ್ಬ ಆಚರಿಸುತ್ತಿರುವ ಕಾರ್ಮಿಕರ ಸಂಘದ ಕಾರ್ಯ ಶ್ಲಾಘನೀಯವಾಗಿದ್ದು, ಸಂಘದ ಸದಸ್ಯರ ಬದುಕು ಹಸನಾಗಲಿ ಎಂದು ಹಾರೈಸಿದರು. ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಮಾತನಾಡಿ, ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಖಾಸಗಿ ಬಸ್‌ಗಳ ಕೊಡುಗೆ ಅಪಾರವಾಗಿದೆ. ಗ್ರಾಮೀಣ ಭಾಗದ ಜನಸಾಮಾನ್ಯರ ಜೀವನಾಡಿಯಾಗಿರುವ ಖಾಸಗಿ ಬಸ್‌ಗಳು ಸಂಕಷ್ಟಗಳ ನಡುವೆಯೂ ತಮ್ಮ ಸೇವೆಯನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ ಎಂದರು.

ಬೆAಗಳೂರು ಜಯನಗರ ಪೊಲೀಸ್ ಠಾಣೆಯ ಠಾಣಾಧಿಕಾರಿ ಬಿ.ಕೆ. ಕಿಶೋರ್ ಮಾತನಾಡಿ, ಯುವಜನರು ಮಾದಕ ವ್ಯಸನಗಳಿಂದ ದೂರವಿದ್ದು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುವ ಮೂಲಕ ಉನ್ನತ ಸ್ಥಾನಗಳನ್ನು ಅಲಂಕರಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಯುವಜನರಿಗೆ ಅಗತ್ಯ ತರಬೇತಿ ನೀಡಲು ಜನಪ್ರತಿನಿಧಿಗಳು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಬೇಕು ಎಂದು ಹೇಳಿದರು.

ಹಾಕಿ ಕೂರ್ಗ್ ಪ್ರಮುಖ ಅಮ್ಮಂಡೀರ ಚೇತನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬಿ.ಎಂ. ಗಣೇಶ್, ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್ನ ಕೊಡಗು ಸಂಚಾಲಕಿ ಮೈನಾ ಲೋಕೇಶ್ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಉದ್ಯಮಿ ಹೇಮಂತ್ ಬಿ.ವಿ. ಉಪಸ್ಥಿತರಿದ್ದರು

ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಜ್ಯೂಡಿ ವಾಜ್ ಅಧ್ಯಕ್ಷತೆ ವಹಿಸಿದ್ದರು. ಸಭಾ ಕಾರ್ಯಕ್ರಮದಲ್ಲಿ ನಿವೃತ್ತ ಹಿರಿಯ ಬಸ್ ಕಾರ್ಮಿಕರು, ಸಮಾಜ ಸೇವಕರು ಹಾಗೂ ಪ್ರತಿಭಾವಂತ ಬಸ್ ಕಾರ್ಮಿಕರ ಮಕ್ಕಳನ್ನು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬಳಿಕ ನಡೆದ ಅನ್ನಸಂತರ್ಪಣೆಯಲ್ಲಿ ನೂರಾರು ಮಂದಿ ಪಾಲ್ಗೊಂಡರು. ಕೊಡಗು-ಮೈಸೂರು ಟೀಮ್ ಜೌಡಿ ಸ್ಟೊçÃಕ್ ವತಿಯಿಂದ ನಡೆದ ಮೈನವಿರೇಳಿಸುವ ಬೈಕ್ ಸ್ಟಂಟ್ ಪ್ರದರ್ಶನ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ನಂತರ ಕ್ಯಾಲಿಕಟ್ ಸಾರಂಗ್ ಮ್ಯೂಸಿಕಲ್ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಕೊಡಗು ಜಿಲ್ಲಾ ಖಾಸಗಿ ಬಸ್ ಕಾರ್ಮಿಕರ ಸಂಘದ ಪದಾಧಿಕಾರಿಗಳು, ಸದಸ್ಯರು, ವರ್ತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

- ಕಿಶೋರ್ ಕುಮಾರ್ ಶೆಟ್ಟಿ