ಮಡಿಕೇರಿ, ಅ. ೨೫: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ೨೦೨೬-೨೭ನೇ ಸಾಲಿನ ೨೪ನೇ ವರ್ಷದ ಕೊಡಗಿನ ಗೌರಮ್ಮ ದತ್ತಿ ಪ್ರಶಸ್ತಿ ಪ್ರದಾನ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಣ್ಣಕಥೆ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ತಾ. ೨೭ರಂದು ಬೆಳಿಗ್ಗೆ ೧೧ ಗಂಟೆಗೆ ಮಡಿಕೇರಿಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಅಧ್ಯಕ್ಷತೆ ವಹಿಸಲಿದ್ದು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ವೇಣುಗೋಪಾಲ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಕೊಡಗಿನ ಗೌರಮ್ಮ ಅವರ ಪುತ್ರ ಬಿ.ಜಿ. ವಸಂತ ಅವರು ಕೊಡಗಿನ ಮಹಿಳಾ ಲೇಖಕಿಯರು ಪ್ರಕಟಿಸಿದ ಉತ್ತಮ ಕೃತಿಗೆ ಪ್ರಶಸ್ತಿ ನೀಡಿ ಗೌರವಿಸುವ ಉದ್ದೇಶದಿಂದ ಈ ದತ್ತಿ ಸ್ಥಾಪಿಸಿದ್ದಾರೆ. ಈವರೆಗೆ ೨೩ ಲೇಖಕಿಯರು ಪ್ರಶಸ್ತಿಗೆ ಭಾಜನರಾಗಿದ್ದಾರೆ.

೨೦೨೬-೨೭ನೇ ಸಾಲಿನ ೨೪ನೇ ಪ್ರಶಸ್ತಿಗಾಗಿ ಒಂಬತ್ತು ಲೇಖಕಿಯರು ತಮ್ಮ ಕೃತಿಗಳನ್ನು ಸಲ್ಲಿಸಿದ್ದರು. ಜಿಲ್ಲೆಯ ಮೂವರು ಹಿರಿಯ ಸಾಹಿತಿಗಳನ್ನು ತೀರ್ಪುಗಾರರನ್ನಾಗಿ ನೇಮಿಸಲಾಗಿತ್ತು. ತೀರ್ಪುಗಾರರ ಪರಿಶೀಲನೆಯ ಬಳಿಕ ಡಾ. ಲಲಿತ ಕೆ.ಪಿ. (ರಶ್ಮಿ ನಂಜಪ್ಪ ಕಳ್ಳಿಚಂಡ) ಅವರು ರಚಿಸಿದ ಕೊಡಗಿನ ಜಾನಪದ ಕಥೆಗಳು ಕೃತಿ ಪ್ರಶಸ್ತಿಗೆ ಆಯ್ಕೆಯಾಗಿದೆ.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ನಿವೃತ್ತ ಪ್ರಾಂಶುಪಾಲ ಡಾ. ಜೆ. ಸೋಮಣ್ಣ ಅವರು ಕೊಡಗಿನ ಗೌರಮ್ಮ ಅವರ ಸಾಹಿತ್ಯದ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಅಭಿವೃದ್ಧಿ ಸಮಿತಿ ಸದಸ್ಯೆ ಪಿ. ರೇವತಿ ರಮೇಶ್ ಹಾಗೂ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ಪಾಲ್ಗೊಳ್ಳಲಿದ್ದಾರೆ.

೨೦೨೬-೨೭ನೇ ಸಾಲಿನ ಗೌರಮ್ಮ ಸಣ್ಣಕಥೆ ಸ್ಪರ್ಧೆಯಲ್ಲಿ ಜಿಲ್ಲೆಯ ೧೮ ಪ್ರೌಢಶಾಲೆಗಳ ೬೦ ವಿದ್ಯಾರ್ಥಿಗಳು ಭಾಗವಹಿಸಿದ್ದರು. ತೀರ್ಪುಗಾರರ ನಿರ್ಣಯದಂತೆ ಮಡಿಕೇರಿಯ ಸಂತ ಜೋಸೆಫ್ ಕಾನ್ವೆಂಟ್ ಮತ್ತು ಸಂಯುಕ್ತ ಪ್ರೌಢಶಾಲೆಯ ವಿದ್ಯಾರ್ಥಿನಿ ಆಕಾಂಕ್ಷ ಎಂ.ಎಸ್. ಪ್ರಥಮ ಬಹುಮಾನ ಪಡೆದಿದ್ದಾರೆ.

ಮಡಿಕೇರಿಯ ಎ.ಎಲ್.ಜಿ. ಕ್ರೆಸೆಂಟ್ ಶಾಲೆಯ ವಿದ್ಯಾರ್ಥಿನಿ ಗುರುಪ್ರಿಯ ದ್ವಿತೀಯ ಹಾಗೂ ಹಾಕತ್ತೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಯಶಸ್ವಿ ಪಿ.ಎಸ್. ತೃತೀಯ ಬಹುಮಾನ ಗಳಿಸಿದ್ದಾರೆ.

ವಿಜೇತ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪಾರಿತೋಷಕ, ಪ್ರಶಂಸಾಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧಿಕಾರಿ ಎಸ್.ಎಸ್. ಸಂಪತ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.