ಮಡಿಕೇರಿ, ಅ. ೨೫: ಕೊಡಗು ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಕಳೆದ ಕೆಲವು ದಿನಗಳಿಂದ ಹಿಂಗಾರು ಮಳೆಯು ದಿನಂಪ್ರತಿ ಸುರಿಯುತ್ತಿದೆ. ಮುಂಗಾರು ಮಳೆ ಆರಂಭದಲ್ಲಿ ಕೈ ಕೊಟ್ಟಿದ್ದು ಹಲವು ಸಮಸ್ಯೆಗಳನ್ನು ಸೃಷ್ಟಿಸಿದೆ.
ಇದರಿಂದಾಗಿ ಪ್ರಸಕ್ತ ವರ್ಷ ಭತ್ತದ ಕೃಷಿ ಮತ್ತೆ ಹಿನ್ನಡೆ ಕಂಡಿದೆ. ಆದರೆ ಇದೀಗ ಅದರಲ್ಲೂ ಅಕ್ಟೋಬರ್ ತಿಂಗಳಿನಲ್ಲಿ ಜಿಲ್ಲೆಯಲ್ಲಿ ಆಗಾಗ್ಗೆ ಮಳೆ ಸುರಿಯುತ್ತಿರುವುದು ಕಂಡು ಬರುತ್ತಿದೆ. ಗುಡುಗು - ಮಿಂಚು ಸಹಿತವಾಗಿ ಮಳೆಯಾಗುತ್ತಿರುವುದು ವಿಶೇಷವಾಗಿದೆ. ಬಿಸಿಲಿನ ವಾತಾವರಣವಿದ್ದರೂ ದಿಢೀರನೇ ಮೋಡ ಆವರಿಸಿ ಧಾರಾಕಾರ ಮಳೆ ಸುರಿಯುತ್ತಿರುವುದು ಕೆಲ ದಿನಗಳಿಂದ ಸಾಮಾನ್ಯವಾಗಿದೆ. ನೆರೆಯ ತಮಿಳುನಾಡು ರಾಜ್ಯದಲ್ಲಿ ಇದೀಗ ಮಳೆಗಾಲ ರಭಸತೋರುತ್ತಿದ್ದು ಹಲವೆಡೆ ಅನಾಹುತಗಳು ಸಂಭವಿಸಿರುವ ಕುರಿತು ವರದಿಯಾಗಿದೆ.
ಮಡಿಕೇರಿ ತಾಲೂಕಿಗೆ ೧೦೦ ಇಂಚು
ಪ್ರಸಕ್ತ ವರ್ಷ ಮಡಿಕೇರಿ ತಾಲೂಕಿಗೆ ಜನವರಿಯಿಂದ ಈ ತನಕದ ಅವಧಿಯಲ್ಲಿ ೧೦೦ ಇಂಚು ಮಳೆಯ ಗಡಿ ದಾಟಿದಂತಾಗಿದೆ. ಆರಂಭದಲ್ಲಿ ಮಳೆಯ ಪ್ರಮಾಣ ಶೇ. ೫೦ ರಷ್ಟು ಕಡಿಮೆ ಕಂಡುಬAದಿತ್ತು. ಪ್ರಸ್ತುತ ಅಕ್ಟೋಬರ್ ೨೦ ರ ವೇಳೆಗೆ ತಾಲೂಕಿಗೆ ಸರಾಸರಿ ೧೦೧ ಇಂಚಿನಷ್ಟು ಮಳೆ ದಾಖಲಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ೧೭೪ ಇಂಚುಗಳಷ್ಟು ಮಳೆ ಸುರಿದಿತ್ತು.
ಜಿಲ್ಲಾ ಸರಾಸರಿ
ಅಕ್ಟೋಬರ್ ೨೦ ರ ಅಂಕಿ ಅಂಶದAತೆ ಜಿಲ್ಲೆಯಲ್ಲಿ ಜನವರಿಯಿಂದ ಈ ತನಕ ಸರಾಸರಿ ೬೩ ಇಂಚುಗಳಷ್ಟು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ೧೧೬ ಇಂಚು ಮಳೆಯಾಗಿತ್ತು. ವೀರಾಜಪೇಟೆ ತಾಲೂಕಿಗೆ ಪ್ರಸಕ್ತ ವರ್ಷ ಈ ಅವಧಿಯಲ್ಲಿ ೫೭ ಇಂಚು, ಪೊನ್ನಂಪೇಟೆ ೫೯ ಇಂಚು, ಸೋಮವಾರಪೇಟೆ ೭೦ ಹಾಗೂ ಕುಶಾಲನಗರ ತಾಲೂಕಿಗೆ ೩೨ ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ ವೀರಾಜಪೇಟೆ ೧೦೧, ಪೊನ್ನಂಪೇಟೆ ೧೦೮, ಸೋಮವಾರಪೇಟೆ ೧೩೪ ಹಾಗೂ ಕುಶಾಲನಗರ ತಾಲೂಕಿಗೆ ೬೨ ಇಂಚುಗಳಷ್ಟು ಮಳೆಯಾಗಿದೆ. ಕಳೆದ ೨೪ ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ ೧.೦೮ ಇಂಚು ಮಳೆಯಾಗಿದೆ.