ಶನಿವಾರಸಂತೆ, ಅ. ೨೫: ಸೋಮವಾರಪೇಟೆ ತಾಲೂಕು ಪದವಿಪೂರ್ವ ಕಾಲೇಜುಗಳ ತಾಲ್ಲೂಕು ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಶನಿವಾರಸಂತೆ ಭಾರತಿ ವಿದ್ಯಾಸಂಸ್ಥೆ ಪದವಿ ಪೂರ್ವ ಕಾಲೇಜು ವತಿಯಿಂದ ಆಯೋಜಿಸಲಾಗಿತ್ತು.
ತಾಲೂಕಿನ ೮ ಪದವಿಪೂರ್ವ ಕಾಲೇಜುಗಳ ೨೮ ಕ್ರೀಡಾಪಟುಗಳು (೨೧ ಬಾಲಕರು-೭ ಬಾಲಕಿಯರು) ಗುಡ್ಡಗಾಡು ಓಟದ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಭಾರತಿ ವಿದ್ಯಾಸಂಸ್ಥೆಯ ದ್ವಾರದಿಂದ ಓಟದ ಸ್ಪರ್ಧೆಗೆ ಪ್ರಾಂಶುಪಾಲ ಎಸ್.ಜೆ. ಅಶೋಕ್ ಚಾಲನೆ ನೀಡಿದರು.
ಬಾಲಕರು ವಿದ್ಯಾಸಂಸ್ಥೆಯಿAದ ಶನಿವಾರಸಂತೆ-ಕೊಡ್ಲಿಪೇಟೆ ಮುಖ್ಯ ರಸ್ತೆಯಲ್ಲಿ ಗುಡುಗಳಲೆ ಮಾರ್ಗವಾಗಿ ಮೂದರವಳ್ಳಿ ಗ್ರಾಮದವರೆಗೆ ಗುಡ್ಡಗಾಡಿನಲ್ಲಿ ೫ ಕಿ.ಮೀ.ಓಡಿ ಮರಳಿ ವಿದ್ಯಾಸಂಸ್ಥೆಗೆ ಹಿಂತಿರುಗಿದರು. ಬಾಲಕಿಯರು ಕೆರಳ್ಳಿ ಗ್ರಾಮದಿಂದ ಮೂದರವಳ್ಳಿ ಮಾರ್ಗವಾಗಿ ಭಾರತಿ ವಿದ್ಯಾಸಂಸ್ಥೆಯವರೆಗೆ ೩ ಕಿ.ಮೀ.ಓಡಿದರು.
ಸ್ಪರ್ಧೆಯಲ್ಲಿ ಬಾಲಕರ ವಿಭಾಗದಲ್ಲಿ ವಿದ್ಯಾರ್ಥಿಗಳಾದ ಪಿ.ಎಲ್.ಯಶಸ್, ದುರ್ಗೇಶ್, ಮೋಕ್ಷಿತ್, ಮನ್ವಿತ್, ಭಗತ್, ಚರಿತ್ ಕ್ರಮವಾಗಿ ೬ ಸ್ಥಾನಗಳನ್ನು ಗಳಿಸಿದರೆ, ಬಾಲಕಿಯರ ವಿಭಾಗದಲ್ಲಿ ವಿದ್ಯಾರ್ಥಿನಿಯರಾದ ಜೀವಿತಾ, ತಂಗಮ್ಮ, ಧನ್ಯಶ್ರೀ, ತನುಜಾ, ಧೃತಿ, ಶಂಕುಶಾ ಕ್ರಮವಾಗಿ ೬ ಸ್ಥಾನಗಳನ್ನು ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾದ ೧೨ ಮಂದಿ ಕ್ರೀಡಾಪಟುಗಳಿಗೆ ಪದಕ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಸ್ಪರ್ಧೆಯ ಆಯೋಜಕ ಭಾರತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಎಸ್.ಜೆ. ಅಶೋಕ್, ದೈಹಿಕ ಶಿಕ್ಷಣ ಉಪನ್ಯಾಸಕರಾದ ಕೊಡ್ಲಿಪೇಟೆ ಕಾಲೇಜಿನ ರಂಗಸ್ವಾಮಿ, ಮಾದಾಪುರ ಡಿ.ಚೆನ್ನಮ್ಮ ಕಾಲೇಜಿನ ನಾಚಪ್ಪ, ಶನಿವಾರಸಂತೆ ಕಾವೇರಿ ಪದವಿ ಪೂರ್ವ ಕಾಲೇಜಿನ ಭಾಸ್ಕರ್ ಹಾಗೂ ಭಾರತಿ ವಿದ್ಯಾಸಂಸ್ಥೆ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಆದರ್ಶ್ ತೀರ್ಪುಗಾರರಾಗಿ ಹಾಜರಿದ್ದರು.