ಸೋಮವಾರಪೇಟೆ, ಅ.೨೫: ಯುವಜನಾಂಗವು ಡ್ರಗ್ಸ್ ಹಾಗೂ ಮಾದಕ ದ್ರವ್ಯಗಳ ಬಳಕೆಯಿಂದ ದೂರವಾಗುವುದು ತಮ್ಮ ಜೀವನವನ್ನು ಮರಳಿ ಪಡೆಯಲು ಮತ್ತು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಇಡಬಹುದಾದ ಅತ್ಯಂತ ಮಹತ್ವದ ಹೆಜ್ಜೆಯಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆಯ ವಿಶೇಷ ಬಾಲಾಪರಾಧಿ ಪೊಲೀಸ್ ಘಟಕದ ಮಕ್ಕಳ ಕಲ್ಯಾಣ ವಿಭಾಗದ ಸಹಾಯಕ ಪೊಲೀಸ್ ಅಧಿಕಾರಿ ಹಾಗೂ ರಾಷ್ಟçಪ್ರಶಸ್ತಿ ಪುರಸ್ಕೃತ ಪೊಲೀಸ್ ಅಧಿಕಾರಿ ಎಂ.ಬಿ. ಸುಮತಿ ಹೇಳಿದರು.
ತಾಲೂಕಿನ ಮಾದಾಪುರದ ಶ್ರೀಮತಿ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ರಾಷ್ಟಿçÃಯ ಸೇವಾ ಯೋಜನೆ ವತಿಯಿಂದ ಮಾದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆಯುತ್ತಿರುವ ವಾರ್ಷಿಕ ವಿಶೇಷ ಶಿಬಿರದಲ್ಲಿ ‘ಮಾದಕ ದ್ರವ್ಯಗಳ ದುಷ್ಪರಿಣಾಮಗಳು ಮತ್ತು ರಸ್ತೆ ಸುರಕ್ಷತೆ’ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಯುವಜನರು ದುಶ್ಚಟಗಳಿಂದ ದೂರವಿದ್ದು ಉತ್ತಮ ಆರೋಗ್ಯ ಹಾಗೂ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದರು
ಹದಿಹರೆಯದವರು ಹಾಗೂ ಯುವಕರಲ್ಲಿ ಮಾದಕ ವಸ್ತುಗಳ ಬಳಕೆ ಹೆಚ್ಚಾದರೆ ಅವರ ಶಿಕ್ಷಣ ಮತ್ತು ವೃತ್ತಿಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಾದಕ ವ್ಯಸನವು ಮಾನಸಿಕ ಹಾಗೂ ದೈಹಿಕ ಆರೋಗ್ಯವನ್ನು ಹಾನಿಗೊಳಿಸುವ ಗಂಭೀರ ಸಮಸ್ಯೆಯಾಗಿದ್ದು, ಯುವಜನರು ವ್ಯಸನಮುಕ್ತ ಭಾರತ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕರೆ ನೀಡಿದರು.
ಮಾದಕ ದ್ರವ್ಯಮುಕ್ತ ಜೀವನ ಹಾಗೂ ಜವಾಬ್ದಾರಿಯುತ ವಾಹನ ಚಾಲನೆ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ವಾಹನ ಚಾಲನೆಯಲ್ಲಿ ಸಣ್ಣ ನಿರ್ಲಕ್ಷ್ಯವೂ ಅಮೂಲ್ಯ ಜೀವವನ್ನು ಬಲಿತೆಗೆದುಕೊಳ್ಳಬಹುದು. ಆದ್ದರಿಂದ ಯುವಜನರು ಮಾದಕ ದ್ರವ್ಯಗಳಿಂದ ದೂರವಿದ್ದು, ರಸ್ತೆ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ಎಂ.ಎ. ನಾಚಪ್ಪ ಮಾತನಾಡಿ, ವಿದ್ಯಾರ್ಥಿಗಳು ಮಾದಕ ದ್ರವ್ಯಗಳ ಸೇವನೆಯಿಂದ ದೂರವಿದ್ದು, ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಎ.ಎಂ. ಭರತ್ ಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದ ಮೂಲಕ ಕಲಿತ ಉತ್ತಮ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಶಿಬಿರಾಧಿಕಾರಿ ಎನ್.ಎನ್. ಮನೋಹರ್, ಉಪನ್ಯಾಸಕಿ ಪ್ರಫುಲ್ಲ, ಶಿಕ್ಷಕರಾದ ಪಿ.ಜೆ. ಗ್ರೇಸಿ, ಬಿ.ಎಸ್. ಅನಿತ, ಕೆ. ಭವಾನಿ, ಅನ್ವರ್ ಪಾಷ, ಸಬೀನ, ನೇತ್ರಾವತಿ, ಸಿಬ್ಬಂದಿ ಬಿ.ಎ. ಕಮಲ ಮತ್ತಿತರರು ಉಪಸ್ಥಿತರಿದ್ದರು.